ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಿವಮೊಗ್ಗ ಲೋಕಸಭಾ ಕ್ಷೇತ್ರ ಚುನಾವಣೆಯ ಸ್ವತಂತ್ರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರು ಮಂಗಳವಾರ ವಿವಿಧೆಡೆ ಭೇಟಿ ನೀಡಿ ಬಿರುಸಿನ ಪ್ರಚಾರ ನಡೆಸಿದರು.ಶಿವಮೊಗ್ಗದ ಕರಿ ಮಾರಿಯಮ್ಮ ದೇವಸ್ಥಾನದಲ್ಲಿ ತಮಿಳು ಸಮುದಾಯದವರ ಜೊತೆ ಅಮ್ಲಿ ಹಬ್ಬದ ಕಾರ್ಯಕ್ರಮದಲ್ಲಿ ಕೆ.ಎಸ್.ಈಶ್ವರಪ್ಪನವರು ಭಾಗವಹಿಸಿದ್ದರು. ಬಳಿಕ ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾಮದಲ್ಲಿ ಶ್ರೀ ಜಲದುರ್ಗಮ್ಮ ದೇವಸ್ಥಾನದ ಸತ್ಯನಾರಾಯಣ ಸ್ವಾಮಿ ಪೂಜೆಯಲ್ಲಿ ಹಾಗೂ ಹೊಳೆಹೊನ್ನೂರು ಗ್ರಾಮದ ದುರ್ಗಮ್ಮ ದೇವಸ್ಥಾನದ ಚಂಡಿಕಾ ಹೋಮದಲ್ಲಿ ಭಾಗವಹಿಸಿದ್ದರು.
ಮೆಗ್ಗಾನ್ ಆಸ್ಪತ್ರೆಯಲ್ಲಿ ಮತ ಪ್ರಚಾರ: ಮಂಗಳವಾರ ಬೆಳಗ್ಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿದ್ದ ಕೆ.ಎಸ್.ಈಶ್ವರಪ್ಪ ಆಸ್ಪತ್ರೆಯ ಸಿಬ್ಬಂದಿ, ರೋಗಿಗಳ ಸಂಬಂಧಿಕರನ್ನು ಭೇಟಿ ಮಾಡಿ ಮತಯಾಚಿಸಿದರು.ನಂತರ ನಗರದ ವಕೀಲ ಭವನಕ್ಕೆ ಭೇಟಿ ನೀಡಿ ವಕೀಲರನ್ನು ಭೇಟಿ ಮಾಡಿ ಮತ ಪ್ರಚಾರ ನಡೆದರು.
ಈಶ್ವರಪ್ಪ ಹೆಸರಿನವರಿಂದ ನಾಮಪತ್ರ ಸಲ್ಲಿಕೆ!ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಡಿ.ಎಸ್.ಈಶ್ವರಪ್ಪ ಎಂಬುವವರು ಮಂಗಳವಾರ ನಾಮಪತ್ರ ಸಲ್ಲಿಸಿದ್ದು, ಗಮನ ಸೆಳೆದಿದ್ದಾರೆ.ಈಗಾಗಲೇ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಸಿ. ಎನ್.ಮಂಜುನಾಥ್ ಹೆಸರನ್ನೇ ಹೋಲುವ ಇನ್ನೋರ್ವ ಡಾ. ಮಂಜುನಾಥ್ ನಾಮಪತ್ರ ಸಲ್ಲಿಸಿದ್ದಾರೆ. ಈ ಹಿಂದೆ ಕೂಡ ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಎಸ್.ಬಂಗಾರಪ್ಪ ವಿರುದ್ಧ ಇಬ್ಬರು ಬಂಗಾರಪ್ಪ ಹೆಸರಿನವರು ನಾಮಪತ್ರ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಇದೊಂದು ರಾಜಕೀಯ ತಂತ್ರಗಾರಿಕೆಯಾಗಿ ಬಳಕೆಯಾಗುತ್ತಿದೆ.
ಆದರೆ ಇಲ್ಲಿ ಆ ರೀತಿ ಆಗಿದೆ ಎಂದುಕೊಳ್ಳಲಾಗುತ್ತಿಲ್ಲ. ಇದೊಂದು ಆಕಸ್ಮಿಕ ಎನ್ನಲಾಗುತ್ತಿದೆ. ಜಿಲ್ಲಾಧಿಕಾರಿ ಗುರುದತ್ ಹೆಗಡೆಯವರಿಗೆ ನಾಮಪತ್ರ ಸಲ್ಲಿಸುವ ವೇಳೆಯಲ್ಲಿ ಶಿಕಾರಿಪುರದ ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷರಾದ ಡಿ.ಎಸ್. ಈಶ್ವರಪ್ಪ ನಾಮಪತ್ರ ಸಲ್ಲಿಸುವ ವೇಳೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಸಂಚಾಲಕರು ವಸಂತ ಕುಮಾರ್, ಮಾಜಿ ಪುರಸಭಾ ಸದಸ್ಯ ಎಸ್. ರೇವಣಸಿದ್ದಪ್ಪ, ಏಳುಕೋಟಿ ಸಂಕ್ರಿ ಗಿಡ್ಡಪ್ಪ ಹಾಗೂ ಪ್ರಗತಿಪ ಕೃಷಿಕ ಗಿಡ್ಡೇಶ ಅರಷಿಣಗೇರೆ ಇದ್ದರು.ಮೋದಿ ಫೋಟೋ ಬಳಕೆಯನ್ನು ನಿರ್ಬಂಧಿಸುವಂತೆ ಕೋರಿ ದಾವೆ
ಶಿವಮೊಗ್ಗ: ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಕೆ. ಎಸ್. ಈಶ್ವರಪ್ಪ ಅವರು ಚುನಾವಣೆ ಪ್ರಚಾರದ ವೇಳೆ ಹಾಗೂ ಸಭೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಬಳಕೆ ಮಾಡುವುದನ್ನು ನಿರ್ಬಂಧಿಸುವಂತೆ ಕೋರಿ ಬಿಜೆಪಿ ಜಿಲ್ಲಾ ಘಟಕವು ಶಿವಮೊಗ್ಗ ಸಿವಿಲ್ ನ್ಯಾಯಾಲಯದಲ್ಲಿ ಸೋಮವಾರ ದಾವೆ ಹೂಡಿದೆ.ಬಿಜೆಪಿಯ ಅಧಿಕೃತ ಅಭ್ಯರ್ಥಿಗೆ ಮಾತ್ರ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಬಳಸಲು ಅವಕಾಶವಿದೆ. ಬೇರೆಯವರು ಬಳಕೆ ಮಾಡಿದರೆ ಅದು ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್- 29 ರ ಉಲ್ಲಂಘನೆಯಾಗುತ್ತದೆ. ಹೀಗಾಗಿ ಕೆ.ಎಸ್.ಈಶ್ವರಪ್ಪ ಚುನಾವಣೆ ಪ್ರಚಾರ ಸಭೆಯ ವೇದಿಕೆಗಳಲ್ಲಿ ನರೇಂದ್ರ ಮೋದಿ ಭಾವಚಿತ್ರ ಮಾತ್ರವಲ್ಲ, ಹೆಸರು ಕೂಡ ಬಳಕೆ ಮಾಡಿ ಮತ ಕೇಳುವುದಕ್ಕೂ ತಡೆಯಾಜ್ಞೆ ನೀಡುವಂತೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ. ಡಿ. ಮೇಘರಾಜ್ ದಾವೆಯಲ್ಲಿ ಕೋರಿದ್ದಾರೆ.ಬಿಜೆಪಿ ಪರವಾಗಿ ವಕೀಲ ಕೆ.ಬಸಪ್ಪಗೌಡ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಮೋದಿ ಭಾವಚಿತ್ರ ಬಳಕೆ ಸಂಬಂಧ ಈಶ್ವರಪ್ಪ ಈ ಮೊದಲೇ ಕೇವಿಯಟ್ ಸಲ್ಲಿಸಿದ್ದು, ಏ.18ಕ್ಕೆ ನ್ಯಾಯಾಲಯದ ವಿಚಾರಣೆ ನಿಗದಿಪಡಿಸಿದೆ. ಈಶ್ವರಪ್ಪ ಪರ ಹಿರಿಯ ವಕೀಲರಾದ ಅಶೋಕ್ ಭಟ್ ವಕಾಲತ್ತು ವಹಿಸಿದ್ದು, ಅಂದು ತಕರಾರು ಅರ್ಜಿ ಸಲ್ಲಿಸಲಿದ್ದಾರೆ.