ಕೇಂದ್ರ ಸಚಿವ ಜೋಶಿ ಮನೆಗೆ ಈಶ್ವರಪ್ಪ ಭೇಟಿ

| Published : Dec 31 2023, 01:30 AM IST

ಕೇಂದ್ರ ಸಚಿವ ಜೋಶಿ ಮನೆಗೆ ಈಶ್ವರಪ್ಪ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಶನಿವಾರ ಬೆಳಗ್ಗೆ 10ರ ಸುಮಾರಿಗೆ ಮಾಜಿ ಡಿಸಿಎಂ ಈಶ್ವರಪ್ಪ ನೇರವಾಗಿ ಜೋಶಿ ಅವರ ಮನೆಗೆ ಆಗಮಿಸಿ ಕೆಲಕಾಲ ಚರ್ಚಿಸಿದ್ದು, ಉಭಯ ನಾಯಕರ ಭೇಟಿ ಕುತೂಹಲ ಮೂಡಿಸಿದೆ.

ಅರ್ಧಗಂಟೆಗೂ ಹೆಚ್ಚು ಕಾಲ ಗೌಪ್ಯ ಸಭೆಕುತೂಹಲ ಕೆರಳಿಸಿದ ಉಭಯ ನಾಯಕರ ಭೇಟಿ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಶನಿವಾರ ಬೆಳಗ್ಗೆ ದಿಢೀರನೇ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಮನೆಗೆ ಭೇಟಿ ನೀಡಿ ಚರ್ಚೆ ನಡೆಸಿದ್ದು, ಕುತೂಹಲವನ್ನುಂಟು ಮಾಡಿದೆ.

ಆದರೆ, ಇದೊಂದು ಸೌಹಾರ್ದಯುತ ಭೇಟಿ ಅಷ್ಟೇ. ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.

ಬೆಳಗ್ಗೆ 10ರ ಸುಮಾರಿಗೆ ಈಶ್ವರಪ್ಪ ನೇರವಾಗಿ ಜೋಶಿ ಅವರ ಮನೆಗೆ ಆಗಮಿಸಿದರು. ಈ ವೇಳೆ ಕೂಡಲ ಸಂಗಮದ ಬಸವೇಶ್ವರ ಸ್ವಾಮೀಜಿ ಕೂಡ ಇದ್ದರು. ಸ್ವಾಮೀಜಿ ಹೋದ ಬಳಿಕ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಈಶ್ವರಪ್ಪ ಜೋಶಿ ಅವರೊಂದಿಗೆ ಗೌಪ್ಯವಾಗಿ ಚರ್ಚೆ ನಡೆಸಿದರು. ಈಶ್ವರಪ್ಪ ಪುತ್ರ ಕಾಂತೇಶ ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್‌ ಕುರಿತಂತೆಯೂ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಜೋಶಿ, ಈಶ್ವರಪ್ಪ ಅವರು ಯಾವುದೋ ಕೆಲಸದ ನಿಮಿತ್ತ ಹುಬ್ಬಳ್ಳಿಗೆ ಬಂದಿದ್ದರು. ಹಾಗೆಯೇ ನನ್ನನ್ನು ಸೌಹಾರ್ದಯುತವಾಗಿ ಭೇಟಿಯಾಗಿ ಹೋಗಿದ್ದಾರೆ. ಇದರಲ್ಲಿ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಈಶ್ವರಪ್ಪ ಅವರ ಪುತ್ರ ಕಾಂತೇಶ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ ಎಂದರು.

ಟಿಕೆಟ್ ವಿಷಯವನ್ನು ನಾವು ಮತ್ತು ಅವರು ಕುಳಿತು ತೀರ್ಮಾನ ಮಾಡುವುದಕ್ಕೆ ಬರುವುದಿಲ್ಲ. ಟಿಕೆಟ್ ಕೊಡುವ ಅಥವಾ ಬಿಡುವ ವಿಚಾರವನ್ನು ರಾಷ್ಟ್ರೀಯ ನಾಯಕರೇ ಮಾಡುತ್ತಾರೆ. ಸಮಯ ಬಂದಾಗ ಅವರೇ ಎಲ್ಲ ತೀರ್ಮಾನ ಕೈಗೊಳ್ಳುತ್ತಿದ್ದಾರೆ ಎಂದರು.

ಕಾಂತೇಶ ಬಿಜೆಪಿಯ ಒಳ್ಳೆಯ ಕಾರ್ಯಕರ್ತನೂ ಹೌದು. ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡಲಿಲ್ಲ ಎಂದು ಅನೇಕರು ಪಕ್ಷ ತೊರೆದಾಗ ಈಶ್ವರಪ್ಪ ಇಲ್ಲಿಯೇ ಉಳಿದು ಪಕ್ಷ ನಿಷ್ಠೆಯಿಂದ ಕೆಲಸ ಮಾಡಿದ್ದಾರೆ. ಇದೀಗ ಅವರ ಪುತ್ರ ಲೋಕಸಭೆ ಚುನಾವಣೆ ತಯಾರಿ ನಡೆಸುತ್ತಿರುವುದರಲ್ಲಿ ತಪ್ಪಿಲ್ಲ. ಆದರೆ, ಟಿಕೆಟ್ ವಿಚಾರವಾಗಿ ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.

ಜೋಶಿ ಕಾಲಿಗೆರಗಲು ಮುಂದಾದ ಈಶ್ವರಪ್ಪ

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಕಾಲಿಗೆರಗಲು ಮಾಜಿ ಡಿಸಿಎಂ ಕೆ.ಎಸ್‌. ಈಶ್ವರಪ್ಪ ಮುಂದಾದ ಅಪರೂಪದ ಘಟನೆ ನಡೆಯಿತು.

ಬೆಳಗ್ಗೆ ಸಚಿವ ಜೋಶಿ ಅವರ ಮನೆಗೆ ಈಶ್ವರಪ್ಪ ಬಂದಿದ್ದರು. ಈ ವೇಳೆ ಜೋಶಿ ಅವರೊಂದಿಗೆ ಕೂಡಲಸಂಗಮದ ಬಸವೇಶ್ವರ ಶ್ರೀ ಸೇರಿದಂತೆ ಇಬ್ಬರು ಸ್ವಾಮೀಜಿ, ಇಬ್ಬರು ಮಠಾಧೀಶರು ಇದ್ದರು.

ಈ ವೇಳೆ ಈಶ್ವರಪ್ಪ ಬಸವೇಶ್ವರ ಸ್ವಾಮೀಜಿ ಕಾಲಿಗೆ ನಮಸ್ಕರಿಸಿದರು. ಪಕ್ಕದಲ್ಲೇ ಇನ್ನೊಬ್ಬ ಸ್ವಾಮೀಜಿ ನಿಂತಿದ್ದಾರೆ ಎಂದು ಭಾವಿಸಿ ಈಶ್ವರಪ್ಪ ಸಚಿವ ಜೋಶಿ ಅವರ ಕಾಲಿಗೆ ನಮಸ್ಕರಿಸಲು ಮುಂದಾದರು.

ಆಗ ಜೋಶಿ ಅವರು, ನನಗ್ಯಾಕೆ ಎಂದು ತಡೆದರು. ಏಯ್‌ ಇಲ್ಲ, ಇಲ್ಲೂ ಸ್ವಾಮೀಜಿಯೇ ನಿಂತಿದ್ದಾರೆ ಎಂದುಕೊಂಡಿದ್ದೇ ಅಷ್ಟೇ ಅಂತ ಎನ್ನುತ್ತ ನಗೆಬೀರಿದರು.