ಉಡುಪಿ: ಆದಿಶಂಕರಾಚಾರ್ಯರ ಜೀವನದ ಬಗ್ಗೆ ಪ್ರಬಂಧ ಸ್ಪರ್ಧೆ

| Published : May 22 2024, 12:55 AM IST

ಸಾರಾಂಶ

ಉಡುಪಿ, ದ.ಕ. ಜಿಲ್ಲೆಯ ವಿದ್ಯಾರ್ಥಿಗಳಿಗೆ ಶ್ರೀ ಆದಿ ಶಂಕರಾಚಾರ್ಯರ ಸಂಕ್ಷಿಪ್ತ ಜೀವನ ಚರಿತ್ರೆ ಎಂಬ ವಿಷಯದ ಮೇಲೆ ಪ್ರಬಂಧ ಸ್ಪರ್ಧೆ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಶ್ರೀ ಎಲ್ಲೂರು ಲಕ್ಷ್ಮೀನಾರಾಯಣರಾವ್ ಜ್ಯೋತಿಷ್ಯ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಹಾಗೂ ಇಂಚರ ಸರ್ಜಿಕಲ್ ಕ್ಲಿನಿಕ್ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಪ್ರಬಂಧ ಸ್ಪರ್ಧೆ ಹಾಗೂ ವಿದ್ಯಾರ್ಥಿ ವೇತನ ವಿತರಣೆ ಜರಗಿತು.

ಉಡುಪಿ ಮತ್ತು ದಕ ಜಿಲ್ಲೆಯ 10, 11 ಮತ್ತು 12ನೇ ತರಗತಿಗಳ ವಿದ್ಯಾರ್ಥಿಗಳಿಗೆ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಶ್ರೀ ಆದಿಶಂಕರಚಾರ್ಯರ ಸಂಕ್ಷಿಪ್ತ ಜೀವನ ಚರಿತ್ರೆ ಎಂಬ ವಿಷಯದ ಮೇಲೆ ಪ್ರಬಂಧ ಸ್ಪರ್ಧೆಯನ್ನು ನಡೆಸಲಾಯಿತು.

ಮಂಗಳೂರಿನ ಶ್ರೀ ಸ್ಥಾನಿಕ ಬ್ರಾಹ್ಮಣ ಮಹಾಮಂಡಲದ ಅಧ್ಯಕ್ಷ ಕೆ ಮಂಜುನಾಥ್ ಹೆಬ್ಬಾರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಡುಪಿಯ ಶ್ರೀ ಶಾರದಾ ಮಂಟಪದ ಕಾರ್ಯದರ್ಶಿಗಳಾದ ಪ್ರಭಾಕರ ಭಂಡಿ ಉಪಸ್ಥಿತರಿದ್ದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಶಂಕರ ತತ್ವ ಪ್ರಚಾರ ಸಮಿತಿಯ ಸಂಚಾಲಕ ಟಿ. ವಿಶ್ವನಾಥ ಶಾನಭಾಗ್ ಹಾಗೂ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರವಿರಾಜ್ ಹೆಚ್. ಪಿ. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಇಂಚರ ಸರ್ಜಿಕಲ್ ಕ್ಲಿನಿಕ್ ನ ನಿರ್ದೇಶಕ ಡಾ. ವೈ. ಸುದರ್ಶನ ರಾವ್ ಸ್ವಾಗತಿಸಿದರು. ಟ್ರಸ್ಟ್ ನ ಟ್ರಸ್ಟಿಗಳಾದ ವೈ. ಭುವನೇಂದ್ರ ರಾವ್ ಹಾಗೂ ವೈ. ಶಾಂತಿನಾಥ ರಾವ್ ಇವರು ದಿವಂಗತ ಸಾತ್ವಿಕ್ ಶಾಸ್ತ್ರಿ ಸ್ಮಾರಕ ವಿದ್ಯಾರ್ಥಿ ವೇತನವನ್ನು ವಿತರಿಸಿದರು.

ಪ್ರಬಂಧ ಸ್ಪರ್ಧೆಯಲ್ಲಿ ಕಾಪು ದಂಡ ತೀರ್ಥ ಕಾಲೇಜಿನ ವಿದ್ಯಾರ್ಥಿನಿ ದಿವ್ಯ ಲಕ್ಷ್ಮಿ ಪ್ರಥಮ, ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ರಮ್ಯ ಕೆ ದ್ವಿತೀಯ ಬಹುಮಾನಗಳನ್ನು ಪಡೆದರು.

ಕಾರ್ಯಕ್ರಮದ ಸಂಚಾಲಕಿಯಾದ ಡಾ. ವಿದ್ಯಾ ಎಸ್ ರಾವ್ ಇವರ ಧನ್ಯವಾದ ಸಮರ್ಪಣೆ, ಸುನಿತಾ ಪ್ರಸಾದ್ ರಾವ್ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.