ಸಾರಾಂಶ
ಬಳ್ಳಾರಿ: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಜಿಲ್ಲೆಯ 61 ಕೇಂದ್ರಗಳಲ್ಲಿ ಸೋಮವಾರ ಆರಂಭಗೊಂಡಿದ್ದು, ಮೊದಲ ದಿನ ಪ್ರಥಮ ಭಾಷೆ ಪರೀಕ್ಷೆ ಜರುಗಿತು.ಹೊಸಬರು ಹಾಗೂ ಪುನರಾವರ್ತಿತ ಅಭ್ಯರ್ಥಿಗಳು ಸೇರಿದಂತೆ ಪರೀಕ್ಷೆಗೆ ನೋಂದಣಿಯಾಗಿದ್ದ 21,461 ಜನರ ಪೈಕಿ 20,492 ಹೊಸಬರು ಪರೀಕ್ಷೆ ಎದುರಿಸಿದರೆ, ಪುನರಾವರ್ತಿ 704 ಅಭ್ಯರ್ಥಿಗಳು ಪರೀಕ್ಷೆ ಬರೆದರು. 185 ಫ್ರೆಷರ್ಸ್ ಹಾಗೂ 80 ಪುನರಾವರ್ತಿತ ಅಭ್ಯರ್ಥಿಗಳು ಸೇರಿದಂತೆ ಒಟ್ಟು 265 ಜನರು ಗೈರಾಗಿದ್ದಾರೆ. ಮೊದಲ ದಿನ ಯಾವುದೇ ಡಿಬಾರ್ ಪ್ರಕರಣ ಜರುಗಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಬಿ.ಉಮಾದೇವಿ ತಿಳಿಸಿದ್ದಾರೆ.ಪರೀಕ್ಷೆ ಹಿನ್ನೆಲೆಯಲ್ಲಿ ಎಲ್ಲ ಕೇಂದ್ರಗಳಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಕೇಂದ್ರಗಳ ಸುತ್ತ 200 ಮೀಟರ್ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಜೆರಾಕ್ಸ್ ಕೇಂದ್ರಗಳನ್ನು ಮುಚ್ಚಿಸಲಾಗಿತ್ತು. ನಕಲು ಮಾಡಲು ಅವಕಾಶವಾಗದಂತೆ ಎಲ್ಲ ಕೇಂದ್ರಗಳಲ್ಲಿ ಸಿಸಿ ಟಿವಿ ಕೆಮರಾಗಳನ್ನು ಅಳವಡಿಸಲಾಗಿತ್ತು.ಮಕ್ಕಳಿಗೆ ಪೋಷಕರ ಧೈರ್ಯ:ವಿದ್ಯಾರ್ಥಿಗಳು ಪೋಷಕರೊಂದಿಗೆ ಕೇಂದ್ರಕ್ಕೆ ಆಗಮಿಸುತ್ತಿರುವ ದೃಶ್ಯಗಳು ಕಂಡು ಬಂದವು. ಯಾವುದೇ ಗೊಂದಲ ಮಾಡಿಕೊಳ್ಳದೆ ಧೈರ್ಯವಾಗಿ ಪರೀಕ್ಷೆ ಬರೆಯುವಂತೆ ಪೋಷಕರು ಕಿವಿಮಾತು ಹೇಳುತ್ತಿರುವುದು ಕಂಡು ಬಂತು.ಪರೀಕ್ಷಾ ಕೇಂದ್ರಗಳ ಬಳಿ ಅರ್ಧಗಂಟೆ ಮುಂಚಿತವಾಗಿಯೇ ವಿದ್ಯಾರ್ಥಿಗಳು ಆಗಮಿಸಿ, ಪರೀಕ್ಷಾ ಕೊಠಡಿಗಳನ್ನು ನೋಡಿಕೊಂಡರು. ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.ಪರೀಕ್ಷೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಅವಕಾಶ ಕಲ್ಪಿಸಲಾಗಿತ್ತು. ಯಾವುದೇ ರೂಟ್‌ಗಳನ್ನು ರದ್ದುಪಡಿಸದೇ ಎಲ್ಲ ಕಡೆ ಬಸ್ ಓಡಾಟ ನಡೆಸಲಾಗಿದೆ. ವಿದ್ಯಾರ್ಥಿಗಳು ಎಲ್ಲೇ ಕೈ ಮಾಡಿದರೂ ಬಸ್ ನಿಲ್ಲಿಸುವಂತೆ ಸೂಚನೆ ನೀಡಲಾಗಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದರು.ಪರೀಕ್ಷಾ ಕೇಂದ್ರಕ್ಕೆ ಡಿಸಿ ಭೇಟಿ:ಬಳ್ಳಾರಿ ತಾಲೂಕಿನ ಮೋಕಾ ಗ್ರಾಮದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಪರೀಕ್ಷಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಹಾಗೂ ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಭೇಟಿ ನೀಡಿ ವೀಕ್ಷಿಸಿದರು.ಅಲ್ಲದೆ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಈ ವೇಳೆ ಶಿಕ್ಷಣಾಧಿಕಾರಿಗಳು, ಮೇಲ್ವಿಚಾರಕರು ಹಾಗೂ ಇತರರು ಹಾಜರಿದ್ದರು.ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಜಿಲ್ಲಾಡಳಿತವು ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಿದೆ. ಎಲ್ಲ ಕೇಂದ್ರಗಳಿಗೂ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.ಜಿಲ್ಲೆಯ ಎಲ್ಲ ಪರೀಕ್ಷಾ ಕೇಂದ್ರಗಳ ಬಳಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಡಯಟ್, ಜಿಲ್ಲಾ ಹಾಗೂ ತಾಲೂಕು ಜಾಗೃತದಳದ ಅಧಿಕಾರಿಗಳು ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.ಮೊದಲ ದಿನ ಪರೀಕ್ಷೆಗಳು ಸುಗಮವಾಗಿ ಜರುಗಿದವು. ವಿದ್ಯಾರ್ಥಿಗಳು ಉತ್ಸಾಹದಿಂದ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಯಾವುದೇ ಡಿಬಾರ್ ಪ್ರಕರಣಗಳು ನಡೆದಿಲ್ಲ. ಮಕ್ಕಳ ಪರೀಕ್ಷಾ ಉತ್ಸಾಹ ಕಂಡು ನಿಜಕ್ಕೂ ಸಂತಸವಾಯಿತು ಎನ್ನುತ್ತಾರೆ ಡಿಡಿಪಿಐ ಬಿ.ಉಮಾದೇವಿ.