ಎಸ್ಸೆಸ್ಸೆಲ್ಸಿ ಗುಣಮಟ್ಟದ ಫಲಿತಾಂಶಕ್ಕೆ ಆದ್ಯತೆ

| Published : Mar 22 2024, 01:06 AM IST

ಎಸ್ಸೆಸ್ಸೆಲ್ಸಿ ಗುಣಮಟ್ಟದ ಫಲಿತಾಂಶಕ್ಕೆ ಆದ್ಯತೆ
Share this Article
  • FB
  • TW
  • Linkdin
  • Email

ಸಾರಾಂಶ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸುವ ನಿಟ್ಟಿನಲ್ಲಿ ವ್ಯಾಪಕ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗಿದೆ. ತಾಲೂಕಿನಲ್ಲಿ ೧೦ ಪರೀಕ್ಷಾ ಕೇಂದ್ರಗಳಲ್ಲಿ ೨೭೪೪ ವಿದ್ಯಾರ್ಥಿಗಳು ಈ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಲಿದ್ದಾರೆ.

ಹಗರಿಬೊಮ್ಮನಹಳ್ಳಿ: ಎಸ್ಸೆಸ್ಸೆಲ್ಸಿ ಗುಣಮಟ್ಟದ ಫಲಿತಾಂಶ ನೀಡುವ ನಿಟ್ಟಿನಲ್ಲಿ ಈಗಾಗಲೇ ಕಲಿಕಾ ಕಿರಣ ಪೂರಕ ಸಾಹಿತ್ಯ ಹೊಂದಿದ ಪುಸ್ತಕ ನೀಡಲಾಗಿದೆ. ಕಲಿಕೆಯಲ್ಲಿ ಹಿಂದುಳಿದ ೩೧೫ ಮಕ್ಕಳಿಗೆ ವಸತಿಯುತ ಕೇಂದ್ರದಲ್ಲಿ ವಿಶೇಷ ತರಬೇತಿ ನೀಡಲಾಗಿದೆ ಎಂದು ಬಿಇಒ ಮೈಲೇಶ್ ಬೇವೂರ್ ತಿಳಿಸಿದರು.

ಪಟ್ಟಣದ ಗುರುಭವನದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಸಿದ್ಧತೆ ಕುರಿತಂತೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸುವ ನಿಟ್ಟಿನಲ್ಲಿ ವ್ಯಾಪಕ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗಿದೆ. ತಾಲೂಕಿನಲ್ಲಿ ೧೦ ಪರೀಕ್ಷಾ ಕೇಂದ್ರಗಳಲ್ಲಿ ೨೭೪೪ ವಿದ್ಯಾರ್ಥಿಗಳು ಈ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಲಿದ್ದಾರೆ. ಶಾಲಾ ಹಂತದಲ್ಲಿ ಈಗಾಗಲೇ ರಸಪ್ರಶ್ನೆ, ಸಂಜೆಶಾಲೆ, ವಿಶೇಷ ತರಬೇತಿ, ಪ್ರತಿ ಮನೆಗಳಿಗೆ ಭೇಟಿ ನೀಡಿ ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸುವ ಮತ್ತು ಕಲಿಕೆಗೆ ಪೂರಕವಾದ ಕ್ರಮ ಕೈಗೆತ್ತಿಕೊಳ್ಳಲಾಗಿದೆ. ಶಿಕ್ಷಕರ ಸಭೆ ನಡೆಸಿ ಪೂರಕ ಮಾಹಿತಿ ನೀಡಲಾಗಿದೆ ಎಂದರು.ಈ ಸಾಲಿನಲ್ಲಿ ಪರೀಕ್ಷೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಪ್ರತಿ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಪರೀಕ್ಷೆ ಕೊಠಡಿಗಳಿಗೆ ಆಯಾ ವಿಷಯಕ್ಕೆ ಸಂಬಂಧವಿಲ್ಲದ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಈಗಾಗಲೇ ರೂಪಣಾತ್ಮಕ ಮತ್ತು ಸಂಕಲನಾತ್ಮಕ ಪರೀಕ್ಷೆ, ಅರ್ಧವಾರ್ಷಿಕ ಮತ್ತು ಪೂರ್ವತಯಾರಿ ಪರೀಕ್ಷೆ ಎದುರಿಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಒಂದು ಹಬ್ಬದಂತೆ ಆಚರಿಸುವ ನಿಟ್ಟಿನಲ್ಲಿ ಸಿದ್ಧತೆ ಕೈಗೊಳ್ಳಲಾಗಿದೆ. ಬೇಸಿಗೆ ಹಿನ್ನೆಲೆಯಲ್ಲಿ ಅನಾರೋಗ್ಯದ ಸಮಸ್ಯೆಯನ್ನು ಅಂದಾಜಿಸಲಾಗಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಪರೀಕ್ಷೆ ಕೇಂದ್ರಕ್ಕೆ ನೇಮಕಗೊಳಿಸುವಂತೆ ಕೋರಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಕುಡಿಯುವ ನೀರು, ಶೌಚಾಲಯ ಸೇರಿ ಮೂಲ ಸೌಲಭ್ಯದ ಲಭ್ಯತೆ ಖಚಿತಪಡಿಸಿಕೊಳ್ಳಲಾಗಿದೆ. ತಾಲೂಕಿನ ಎಲ್ಲಾ ಎಸ್ಸೆಸ್ಸೆಲ್ಸಿ ಮಕ್ಕಳು ಮತ್ತು ಪೋಷಕರು ಪರೀಕ್ಷೆಯ ಬಗ್ಗೆ ಆತಂಕ ಪಡುವುದು ಬೇಡ, ಅತ್ಯಂತ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ ಎಂದು ತಿಳಿಸಿದರು.

ತಹಸೀಲ್ದಾರ್ ಚಂದ್ರಶೇಖರ ಶಂಭಣ್ಣ ಗಾಳಿ ಮಾತನಾಡಿದರು. ಎಸ್ಸೆಸ್ಸೆಲ್ಸಿ ತಾಲೂಕು ನೋಡೆಲ್ ಅಧಿಕಾರಿ ಶಿವಲಿಂಗಸ್ವಾಮಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ಪಿ.ಎಂ. ಮಂಜುನಾಥ, ತಾಲೂಕು ಶಿಕ್ಷಕರ ಸಂಘದ ಹ್ಯಾಟಿ ಲೋಕಪ್ಪ, ಪ್ರೌಢಶಾಲೆ ಸಹಶಿಕ್ಷಕರ ಸಂಘದ ಅಧ್ಯಕ್ಷ ರವಿಚಂದ್ರನಾಯ್ಕ ಇತರರಿದ್ದರು.