ಜಗಳೂರಲ್ಲಿ ಶೀಘ್ರ ಸರ್ಕಾರಿ ಬಸ್‌ ಡಿಪೋ ಸ್ಥಾಪಿಸಿ

| Published : Dec 18 2024, 12:48 AM IST

ಸಾರಾಂಶ

ಜಗಳೂರಿನಲ್ಲಿ ಕೆಎಸ್ಸಾರ್ಟಿಸಿ ಡಿಪೋ ಸ್ಥಾಪನೆ, ಬರಪೀಡಿತ ತಾಲೂಕಿನ ಪ್ರತಿ ಗ್ರಾಮಕ್ಕೂ ಸರ್ಕಾರಿ ಬಸ್‌ ಸೇವೆ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸಲು ಒತ್ತಾಯಿಸಿ ಜಗಳೂರಿನಿಂದ ದಾವಣಗೆರೆವರೆಗೆ ಕೆಎಸ್ಸಾರ್ಟಿಸಿ ಬಸ್‌ ಡಿಪೋ ನಿರ್ಮಾಣ ಹೋರಾಟ ಸಮಿತಿ ನೇತೃತ್ವದಲ್ಲಿ ಸುಮಾರು 32 ಸಂಘಟನೆಗಳು, ವಿವಿಧ ಗ್ರಾಮಗಳ ಗ್ರಾಮಸ್ಥರು, ವಿದ್ಯಾರ್ಥಿಗಳು, ಯುವಜನರು ಪಾದಯಾತ್ರೆ ನಡೆಸಿದ್ದಾರೆ.

- 20 ವರ್ಷದ ಬೇಡಿಕೆಗೆ ಸ್ಪಂದಿಸದ ಸರ್ಕಾರ: ಪ್ರತಿಭಟನಾಕಾರರ ಆಕ್ರೋಶ । 50 ಕಿಮೀ ಪಾದಯಾತ್ರೆ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಜಗಳೂರಿನಲ್ಲಿ ಕೆಎಸ್ಸಾರ್ಟಿಸಿ ಡಿಪೋ ಸ್ಥಾಪನೆ, ಬರಪೀಡಿತ ತಾಲೂಕಿನ ಪ್ರತಿ ಗ್ರಾಮಕ್ಕೂ ಸರ್ಕಾರಿ ಬಸ್‌ ಸೇವೆ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸಲು ಒತ್ತಾಯಿಸಿ ಜಗಳೂರಿನಿಂದ ದಾವಣಗೆರೆವರೆಗೆ ಕೆಎಸ್ಸಾರ್ಟಿಸಿ ಬಸ್‌ ಡಿಪೋ ನಿರ್ಮಾಣ ಹೋರಾಟ ಸಮಿತಿ ನೇತೃತ್ವದಲ್ಲಿ ಸುಮಾರು 32 ಸಂಘಟನೆಗಳು, ವಿವಿಧ ಗ್ರಾಮಗಳ ಗ್ರಾಮಸ್ಥರು, ವಿದ್ಯಾರ್ಥಿಗಳು, ಯುವಜನರು ಪಾದಯಾತ್ರೆ ನಡೆಸಿದರು.

ಬರಪೀಡಿತ ಜಗಳೂರು ಪಟ್ಟಣದಿಂದ ಸುಮಾರು 50 ಕಿಮೀ ದೂರದ ದಾವಣಗೆರೆ ನಗರಕ್ಕೆ ಪಾದಯಾತ್ರೆಯಲ್ಲಿ ಆಗಮಿಸಿ, ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಎದುರು ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭ ವಿಭಾಗೀಯ ನಿಯಂತ್ರಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಸಮಿತಿ ಮುಖಂಡರು ಸಭೆಯಲ್ಲಿ ಮಾತನಾಡಿ, 20 ವರ್ಷದಿಂದಲೂ ಜಗಳೂರಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಡಿಪೋ ಸ್ಥಾಪಿಸುವಂತೆ ಒತ್ತಾಯಿಸಲಾಗುತ್ತಿದೆ. ಆದರೆ, ಇಲ್ಲಿವರೆಗೂ ಸಂಸ್ಥೆ ಅಧಿಕಾರಿಗಳಾಗಲೀ, ಸರ್ಕಾರವಾಗಲೀ ಸ್ಪಂದಿಸಿಲ್ಲ. ಯಾವುದೇ ಸರ್ಕಾರ ಬಂದರೂ ಜಗಳೂರು ತಾಲೂಕಿನ ಬೇಡಿಕೆ ಈಡೇರಿಸಲು ಮುಂದಾಗಿಲ್ಲ. ಸರ್ಕಾರದ, ಕೆಎಸ್‌ಆರ್‌ಟಿಸಿ ನಿರ್ಲಕ್ಷ್ಯ ಖಂಡಿಸಿ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಆ ಮೂಲಕ ನಾವೇ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗೆ ಮನವಿ ಸಲ್ಲಿಸಿದ್ದೇವೆ ಎಂದರು.

ಗಾಣಗಟ್ಟೆ ಮಾರ್ಗವಾಗಿ ಮರಿಕಟ್ಟೆ, ತುಮ್ಮಿನಕಟ್ಟೆ ಕ್ಯಾಸೇಹಳ್ಳಿ, ಗೌಡಗೊಂಡನಹಳ್ಳಿ, ತಮಲೇಹಳ್ಳಿ, ಹನುಮಂತಾಪುರ, ಗೊಲ್ಲರಹಟ್ಟಿ ಗೇಟ್‌, ರಂಗಾಪುರ, ಜಗಳೂರು ಮಧ್ಯೆ ಬೆಳಗ್ಗೆ, ಮಧ್ಯಾಹ್ನ ಬಸ್‌ ಸೇವೆಗೆ ಚಾಲನೆ ನೀಡಬೇಕು. ಬಸವನಕೋಟೆ ಮಾರ್ಗವಾಗಿ ಸಿದ್ದಯ್ಯನಕೋಟೆ, ಉಜ್ಜಪ್ಪ ಒಡೆಯರಹಳ್ಳಿ, ದಿದ್ದಿಗಿ, ಪಲ್ಲಾಗಟ್ಟೆ, ಪಾಲನಾಯಕನಕೋಟೆ, ಕಲ್ಲೇನಹಳ್ಳಿ, ದೇವಿಕೆರೆ ಮಾರ್ಗವಾಗಿ ಬೆಳಗ್ಗೆ, ಮಧ್ಯಾಹ್ನ ಬಸ್‌ ಸೇವೆ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಜಗಳೂರಿಂದ ಕೆಚ್ಚೇನಹಳ್ಳಿ, ಚಿಕ್ಕಬನ್ನಿಹಟ್ಟಿ, ಹಿರೇಬನ್ನಿಹಟ್ಟಿ, ಮಲೆ ಮಾಚಿಕೆರೆ, ಗೌಡಿಕಟ್ಟೆ, ವೆಂಕಟೇಶ ನಗರ, ಮಟ್ರಹಳ್ಳಿ, ಅಗಸನಹಳ್ಳಿ ಮಧ್ಯೆ ಬೆಳಗ್ಗೆ, ಮಧ್ಯಾಹ್ನ ಬಸ್‌ ಸೇವೆ ಒದಗಿಸಬೇಕು. ಅಸಗೋಡಿನಿಂದ ಉಚ್ಚಂಗಿಪುರ, ದಿದ್ದಿಗಿ, ಕೆಂಚಮ್ಮನಹಳ್ಳಿ, ಉರಲಕಟ್ಟೆ, ಪಲ್ಲಾಗಟ್ಟೆ, ಸೂರಗೊಂಡನಹಳ್ಳಿ, ಮರಿಕುಂಟೆ, ಬಿಳಿಚೋಡು, ಜಗಳೂರು ಮಧ್ಯೆ ಬಸ್‌ಗಳ ಸೇವೆ ಕಲ್ಪಿಸಬೇಕು. ಅಲ್ಲದೇ, ಜಗಳೂರಿನಿಂದ ಗಿಡ್ಡನಕಟ್ಟೆ, ರಾಜನಹಟ್ಟಿ, ಪೇಟೆ ಕಣಕುಪ್ಪೆ, ಅಯ್ಯನಹಳ್ಳಿ, ಗುಡ್ಡದ ಲಿಂಗದಹಳ್ಳಿ, ಗೋಡೆ, ತಾರೆಹಳ್ಳಿ, ಪಲ್ಲಾಗಟ್ಟೆಗೆ ಬಸ್‌ ಸಂಚಾರ ಸೇವೆ ಸೇರಿದಂತೆ ವಿವಿಧ ಬೇಡಿಕೆಗಳ ಶೀಘ್ರ ಈಡೇರಿಸುವಂತೆ ಒತ್ತಾಯಿಸಿದರು.

ಎಐವೈಎಫ್‌ನ ರಾಜು ಕೆರನಹಳ್ಳಿ, ಸಂತೋಷ, ಎಸ್‌ಎಫ್‌ಐನ ಟಿ.ಆರ್.ಅಂಜಿನಪ್ಪ, ಶ್ರೀಕಾಂತ, ಗ್ರಾಕೂಸ್‌ ಪಿ.ಎಸ್.ಸುಧಾ, ಶಶಿಕಲಾ, ಎ.ತಿಪ್ಪೇಶಿ ಆವರಗೆರೆ, ಏಕಾಂತಪ್ಪ, ಮಾದಿಹಳ್ಳಿ ಮಂಜಪ್ಪ, ಸಂತೋಷ, ದಿಬ್ಬದಹಳ್ಳಿ ಟಿ.ನೂರ್ ಅಹಮ್ಮದ್, ಡಿಎಸ್‌ಎಸ್‌ನ ಹನುಮಂತಪ್ಪ, ಕರುನಾಡ ರಕ್ಷಣಾ ಪಡೆಯ ಎಸ್.ಆರ್.ಇಂದಿರಾ, ಜಿ.ಎನ್.ಅಭಿಷೇಕ್, ಸಿಪಿಐ ಮುಖಂಡ ಇಪ್ಟಾ ಐರಣಿ ಚಂದ್ರು, ಬಿ.ಎನ್.ಅನಂತರಾಜು, ಕೆ.ಬಿ.ಚೌಡಮ್ಮ, ಬಿ.ಕುಮಾರ, ಓಬಪಪ್, ಎಸ್.ಧನ್ಯಕುಮಾರ, ಕೆ.ಮಹಲಿಂಗಪ್ಪ, ಕರ್ನಾಟಕ ರೈತ ಸಂಘದ ಶಶಿಕಲಾ ಹರಿಹರ, ಎಸ್.ನಿರ್ಮಲ, ಶ್ರೀನಿವಾಸ, ರೈತ ಸೇನೆಯ ಎಸ್.ಡಿ.ಗೀತಾ ಇತರರು ಪ್ರತಿಭಟನೆಯಲ್ಲಿದ್ದರು.

- - - ಬಾಕ್ಸ್‌ * ಬೇಡಿಕೆಗಳೇನೇನು?- ದಾವಣಗೆರೆ-ಜಗಳೂರು ಮಾರ್ಗದಲ್ಲಿ ಸಂಚರಿಸುವ ಎಲ್ಲ ಬಸ್‌ಗಳಿಗೆ ಜಿಲ್ಲಾ ಕೇಂದ್ರದ ಹಳೆ ಬಸ್ ನಿಲ್ದಾಣಕ್ಕೆ ಬಂದು, ನಿಲುಗಡೆಯಾಗಬೇಕು

- ಜಗಳೂರಿನಿಂದ ದಾವಣಗೆರೆಗೆ ತಡೆರಹಿತ ಬಸ್ಸು ಸೇವೆ ಒದಗಿಸಬೇಕು

- ದಾವಣಗೆರೆ, ಜಗಳೂರು, ಚಳ್ಳಕೆರೆ, ಬಳ್ಳಾರಿ ಮಾರ್ಗವಾಗಿ ಬಸ್ಸು ಸೇವೆ ಆರಂಭಿಸಬೇಕು

- ದಾವಣಗೆರೆ ವಯಾ ಬಳ್ಳಾರಿ, ಜಗಳೂರು, ಬಳ್ಳಾರಿ ಸೇವೆ ಆರಂಭಿಸಬೇಕು - ಚಿತ್ರದುರ್ಗ, ಚಳ್ಳಕೆರೆ ಡಿಪೋಗಳಿಂದ ಜಗಳೂರಿಗೆ ಬಸ್‌ ಡಿಪೋ ಸೇವೆ ಒದಗಿಸಬೇಕು

- ಜಗಳೂರು-ಕಾನಾ ಹೊಸಹಳ್ಳಿ ಮಾರ್ಗದಲ್ಲಿ ಬಸ್‌ ಸೇವೆ ಆರಂಭಿಸಬೇಕು

- ಜಗಳೂರಿನಲ್ಲೇ ಬಸ್‌ ಪಾಸ್ ವಿತರಣಾ ಕೌಂಟರ್ ಆರಂಭಿಸಬೇಕು

- ಜಗಳೂರಿನಿಂದ ಭರಮಸಮುದ್ರ, ಸಿದ್ದಮ್ಮನಹಳ್ಲಿ, ಬಂಗಾರಕ್ಕನ ಗುಡ್ಡ, ಕಾನನಕಟ್ಟೆ, ಹುಚ್ಚವ್ವನಹಳ್ಳಿ, ತಾಟಿಡೋಣಿ, ದಿಬ್ಬದಹಳ್ಳಿ, ಜಗಳೂರು, ಚಿಕ್ಕಮಲ್ಲನಹೊಳೆಗೆ ಬಸ್ಸು ಸೇವೆ ನೀಡಬೇಕು

- - -

ಕ್ಯಾಪ್ಷನ್

17ಕೆಡಿವಿಜಿ1, 2-ಜಗಳೂರಿನಲ್ಲಿ ಕೆಎಸ್ಸಾರ್ಟಿಸಿ ಡಿಪೋ, ಸರ್ಕಾರಿ ಬಸ್ಸು ಸೇವೆಗಾಗಿ ಕೆಎಸ್‌ಆರ್‌ಟಿಸಿ ಬಸ್ ಡಿಪೋ ನಿರ್ಮಾಣ ಹೋರಾಟ ಸಮಿತಿ ನೇತೃತ್ವದಲ್ಲಿ ದಾವಣಗೆರೆವರೆಗೆ 50 ಕಿಮೀ ಪಾದಯಾತ್ರೆ ಬಂದು, ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿರುವುದು. .......................(ನಂತರ ಸಾಧ್ಯವಾದರೆ ಬೇರೆ ಫೋಟೋ ಕಳಿಸುವೆ)