ರಾಜ್ಯದ ಎಲ್ಲ ಶಾಲೆಗಳಲ್ಲಿ ಹಳೇ ವಿದ್ಯಾರ್ಥಿಗಳ ಸಂಘ ಸ್ಥಾಪಿಸಿ

| Published : Jul 19 2025, 01:00 AM IST

ರಾಜ್ಯದ ಎಲ್ಲ ಶಾಲೆಗಳಲ್ಲಿ ಹಳೇ ವಿದ್ಯಾರ್ಥಿಗಳ ಸಂಘ ಸ್ಥಾಪಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಪಟ್ಟಣ: ರಾಜ್ಯದ ಎಲ್ಲಾ ಶಾಲೆಗಳಲ್ಲಿ ಹಳೇ ವಿದ್ಯಾರ್ಥಿಗಳ ಸಂಘವನ್ನು ಕಡ್ಡಾಯವಾಗಿ ರಚನೆ ಮಾಡಲು ಆದೇಶ ಹೊರಡಿಸಿ, ಈ ಸಂಘಗಳಿಂದ ಸರ್ಕಾರಿ ಶಾಲೆಗಳಿಗೆ ಶಕ್ತಿ ತುಂಬುವ ಕೆಲಸ ಆಗಲಿದ್ದು, ಇದಕ್ಕೆ ಅಗತ್ಯ ಮಾರ್ಗದರ್ಶನ ನೀಡುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಸಲಹೆ ನೀಡಿದರು.

ಚನ್ನಪಟ್ಟಣ: ರಾಜ್ಯದ ಎಲ್ಲಾ ಶಾಲೆಗಳಲ್ಲಿ ಹಳೇ ವಿದ್ಯಾರ್ಥಿಗಳ ಸಂಘವನ್ನು ಕಡ್ಡಾಯವಾಗಿ ರಚನೆ ಮಾಡಲು ಆದೇಶ ಹೊರಡಿಸಿ, ಈ ಸಂಘಗಳಿಂದ ಸರ್ಕಾರಿ ಶಾಲೆಗಳಿಗೆ ಶಕ್ತಿ ತುಂಬುವ ಕೆಲಸ ಆಗಲಿದ್ದು, ಇದಕ್ಕೆ ಅಗತ್ಯ ಮಾರ್ಗದರ್ಶನ ನೀಡುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಸಲಹೆ ನೀಡಿದರು.

ತಾಲೂಕಿನ ಹೊಂಗನೂರು ಗ್ರಾಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಎಚ್.ಎಂ.ವೆಂಕಟಪ್ಪ ೧೪ ಕೋಟಿ ವೆಚ್ಚದಲ್ಲಿ ಕಣ್ವ ಫೌಂಡೇಷನ್‌ನಿಂದ ನಿರ್ಮಿಸಿರುವ ಶ್ರೀಮತಿ ಚನ್ನಮ್ಮ ಮಂಚೇಗೌಡ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಿ ಶಾಲೆಯಲ್ಲಿ ಓದಿ ದೊಡ್ಡ ಮಟ್ಟಕ್ಕೆ ಬೆಳೆದಿರುವವರು, ಆ ಶಾಲೆಯ ಕಲ್ಯಾಣಕ್ಕೆ ಅಗತ್ಯ ನೆರವು ನೀಡುತ್ತಾರೆ. ಇದಕ್ಕೆ ಅಗತ್ಯ ಸಂಘಟನೆ ಆಗಬೇಕು. ವೆಂಕಟಪ್ಪನವರು ಮಾಡಿರುವ ಸಾಹಸದಂತೆ ಇನ್ನು ಹೆಚ್ಚಿನ ಜನ ಕೈ ಹಾಕಬೇಕು. ಇಂತಹ ಕೆಲಸಗಳು ಸಮಾಜದಲ್ಲಿ ಅವರ ಹೆಸರುಗಳನ್ನು ಶಾಶ್ವತವಾಗಿ ಉಳಿಸುತ್ತದೆ ಎಂದರು.

ಎದೆಯೊಳಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ಇಂದಲ್ಲ ನಾಳೆ ಫಲ ಕೊಟ್ಟೇ ಕೊಡುತ್ತದೆ. ನಾವು ಎಷ್ಟೇ ದೊಡ್ಡವರಾದರೂ ಕೊನೆಗೆ ಶಿಕ್ಷಕರಿಗೆ ಕೊಡುವ ಸ್ಥಾನಮಾನವನ್ನು ಬೇರೆಯವರಿಗೆ ನೀಡುವುದಿಲ್ಲ. ಅನ್ನ ಹೊಟ್ಟೆ ತುಂಬಿಸುತ್ತದೆ. ಆದರೆ ಅಕ್ಷರ ಹೊಟ್ಟೆ ತುಂಬಿಸಲು ಮಾರ್ಗದರ್ಶನ ನೀಡುತ್ತದೆ. ಇಡೀ ರಾಜ್ಯದಲ್ಲಿ ೨ ಸಾವಿರ ಸಿಎಸ್‌ಆರ್ ಶಾಲೆ ನಿರ್ಮಿಸಲು ಸರ್ಕಾರ ಸಂಕಲ್ಪ ಮಾಡಿದೆ. ಶಿಕ್ಷಣ ನನ್ನ ನೆಚ್ಚಿನ ಕ್ಷೇತ್ರ. ನಾನು ಹುಟ್ಟುತ್ತಾ ಕೃಷಿಕ, ವೃತ್ತಿಯಲ್ಲಿ ಉದ್ಯಮಿ, ಆಯ್ಕೆಯಲ್ಲಿ ಶಿಕ್ಷಣ ಪ್ರೇಮಿ, ಆಸಕ್ತಿಯಲ್ಲಿ ರಾಜಕಾರಣಿ ಎಂದು ಹೇಳುತ್ತಿರುತ್ತೇನೆ. ನನಗೆ ಉತ್ತಮ ಶಿಕ್ಷಣ ಕೊಡಿಸಲು ನಮ್ಮ ತಂದೆ ತಾಯಿ ನನ್ನನ್ನು ಬೆಂಗಳೂರಿನಲ್ಲಿ ಶಾಲೆಗೆ ಸೇರಿಸಿದರು. ನಾನು ಕಲಿತ ಸ್ವಲ್ಪ ವಿದ್ಯೆಯಿಂದ ಇಲ್ಲಿಯವರೆಗೂ ಬೆಳೆದಿದ್ದೇನೆ ಎಂದು ಹೇಳಿದರು.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸರ್ಕಾರ ದೊಡ್ಡ ಕಂಪನಿಗಳಿಗೆ ವಾರ್ಷಿಕವಾಗಿ ಶೇ.೨ರಷ್ಟು ಹಣ ಸಿಎಸ್‌ಆರ್ ಕಾರ್ಯಕ್ರಮ ರೂಪಿಸುವಂತೆ ಮಾಡಿದರು. ಸಿಎಸ್‌ಆರ್ ಶಾಲೆ ನಿರ್ಮಿಸಬೇಕು ಎಂದು ಸಚಿವ ಸಂಪುಟ ಉಪ ಸಮಿತಿ ಮಾಡಿ ನನ್ನದೇ ಆದ ರೂಪುರೇಷೆಗಳನ್ನು ನೀಡಿದ್ದೇನೆ. ಬೆಂಗಳೂರಿನ ಜನಸಂಖ್ಯೆ ಇಂದು ೧.೪೦ ಕೋಟಿಗೆ ಏರಿದೆ. ಇದನ್ನು ನಿಯಂತ್ರಿಸಬೇಕು. ಜನ ಉದ್ಯೋಗ ಹಾಗೂ ಶಿಕ್ಷಣಕ್ಕಾಗಿ ನಗರಗಳತ್ತ ವಲಸೆ ಬರುತ್ತಿದ್ದಾರೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಉತ್ತಮ ಶಿಕ್ಷಣ ನೀಡಿದರೆ ಈ ವಲಸೆ ತಪ್ಪಿಸಬಹುದು ಎಂದು ತಿಳಿಸಿದರು.

ವಿದ್ಯಾರ್ಥಿಗಳು ಉದ್ಯೋಗದ ಬಗ್ಗೆ ಮಾತ್ರ ಚಿಂತಿಸಬೇಡಿ. ನೀವೇ ಉದ್ಯಮಿಯಾಗಿ ನೂರಾರು ಜನರಿಗೆ ಉದ್ಯೋಗ ನೀಡುವ ಬಗ್ಗೆ ಚಿಂತನೆ ಮಾಡಬೇಕು. ನಮ್ಮ ಸರ್ಕಾರ ಸಿಎಸ್‌ಆರ್ ನಿಧಿಯಿಂದ ಗ್ರಾಮೀಣ ಭಾಗದಲ್ಲಿ ಶಾಲೆ ನಿರ್ಮಾಣಕ್ಕೆ ನಮ್ಮ ಜಿಲ್ಲೆ ಸಾಕಷ್ಟು ಮುಂದಿದೆ. ಇಡೀ ರಾಜ್ಯದಲ್ಲಿ ಇದು ದೊಡ್ಡ ಯೋಜನೆಯಾಗಿದೆ. ಸಿಎಸ್‌ಆರ್ ನಿಧಿ ಮೂಲಕ ಕನಕಪುರದಲ್ಲಿ ೯, ಚನ್ನಪಟ್ಟಣದಲ್ಲಿ ೫, ಮಾಗಡಿ ೩, ರಾಮನಗರ ೪, ಹಾರೋಹಳ್ಳಿಯಲ್ಲಿ ೪ ಸೇರಿದಂತೆ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ೨೪ ಶಾಲೆಗಳನ್ನು ನಾವು ನಿರ್ಮಾಣ ಮಾಡುತ್ತಿದ್ದೇವೆ. ಆಮೂಲಕ ಶಿಕ್ಷಣ ಕ್ರಾಂತಿಗೆ ಕೈಹಾಕಿದ್ದೇವೆ ಎಂದು ಹೇಳಿದರು.

ನೀವೆಲ್ಲರೂ ಬೆಂಗಳೂರಿನ ಜಿಲ್ಲೆಯವರು. ನಾವು ಮೂಲತಃ ಬೆಂಗಳೂರಿನವರು. ನಿಮ್ಮ ಸ್ವಾಭಿಮಾನದ ಬದುಕು, ಆಸ್ತಿ ಮೌಲ್ಯ ಅಭಿವೃದ್ಧಿಗೆ, ನಮ್ಮ ಗುರುತಿಗೆ ಈ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮಾಡಿದ್ದೇವೆ. ಇಡೀ ವಿಶ್ವ ಬೆಂಗಳೂರಿನ ಮೂಲಕ ಭಾರತವನ್ನು ನೋಡುತ್ತಿದೆ ಎಂದು ಹೇಳಿದರು.

ನಾವು ವೇದಗಳನ್ನು ಓದಿ ದೊಡ್ಡವರಾಗುವುದಕ್ಕಿಂತ ಜನರ ವೇದನೆಗಳನ್ನು ಅರಿತು ಕೆಲಸ ಮಾಡಬೇಕು. ಆಗ ನಮ್ಮ ಬದುಕಿಗೆ ಸಾರ್ಥಕತೆ ಬರುತ್ತದೆ. ಹುಟ್ಟು ಸಾವಿನ ನಡುವೆ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ. ಈ ಊರಿನ ದಿವಂಗತ ಶ್ರೀನಿವಾಸಗೌಡರು ೪ ಎಕರೆ ಜಾಗ ದಾನ ಮಾಡಿದ್ದಾರೆ. ಅವರನ್ನು ನಾನು ಸ್ಮರಿಸಿಕೊಳ್ಳಬೇಕು. ವೆಂಕಟಪ್ಪನವರ ಕುಟುಂಬ ಇಂದು ೧೪ ಕೋಟಿ ವೆಚ್ಚದಲ್ಲಿ ಈ ಶಾಲೆ ನಿರ್ಮಿಸಿದ್ದಾರೆ. ಅವರು ಇಂದು ಬಿತ್ತಿರುವ ಬೀಜ ಮುಂದೆ ಹೆಮ್ಮರವಾಗಿ ಬೆಳೆದು ಚನ್ನಪಟ್ಟಣ ಹಾಗೂ ಇಡೀ ರಾಜ್ಯಕ್ಕೆ ಮಾದರಿಯಾಗಲಿ. ಮನೆ ಮನೆಯಲ್ಲೂ ವ್ಯಕ್ತಿ ಜನಿಸುತ್ತಾರೆ. ಆದರೆ ವ್ಯಕ್ತಿತ್ವ ಕೆಲವರಲ್ಲಿ ಮಾತ್ರ ಬೆಳೆಯುತ್ತದೆ. ಈ ಕುಟುಂಬದ ವ್ಯಕ್ತಿತ್ವ ಇಡೀ ಸಮಾಜಕ್ಕೆ ಮಾದರಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಆದಿ ಚುಂಚನಗಿರಿ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು. ಶಾಸಕ ಸಿ.ಪಿ.ಯೋಗೇಶ್ವರ್, ವಿಧಾನಪರಿಷತ್ ಸದಸ್ಯರಾದ ಪುಟ್ಟಣ್ಣ, ಎಸ್.ರವಿ, ಬಿಎಂಐಸಿಎಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ, ಆದಿಚುಂಚನಗಿರಿ ಶಾಖಾ ಮಠದ ಅನ್ನದಾನೇಶ್ವರನಾಥ ಸ್ವಾಮೀಜಿ, ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್, ಎಸ್ಪಿ ಶ್ರೀನಿವಾಸಗೌಡ ಇತರರಿದ್ದರು.ಪೊಟೊ೧೮ಸಿಪಿಟಿ೧: ಚನ್ನಪಟ್ಟಣ ತಾಲೂಕಿನ ಹೊಂಗನೂರು ಗ್ರಾಮದಲ್ಲಿ ಕಣ್ವ ಫೌಂಡೇಷನ್‌ನಿಂದ ನಿರ್ಮಿಸಿರುವ ಶ್ರೀಮತಿ ಚನ್ನಮ್ಮ ಮಂಚೇಗೌಡ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಕಟ್ಟಡವನ್ನು ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು.ಪೊಟೊ೧೮ಸಿಪಿಟಿ೨: ತಾಲೂಕಿನ ಹೊಂಗನೂರು ಗ್ರಾಮದಲ್ಲಿ ಕಣ್ವ ಫೌಂಡೇಷನ್‌ನಿಂದ ನಿರ್ಮಿಸಿರುವ ಶ್ರೀಮತಿ ಚನ್ನಮ್ಮ ಮಂಚೇಗೌಡ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮವನ್ನು ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು.ಪೊಟೊ೧೮ಸಿಪಿಟಿ೩: ತಾಲೂಕಿನ ಹೊಂಗನೂರು ಗ್ರಾಮದಲ್ಲಿ ಕಣ್ವ ಫೌಂಡೇಷನ್‌ನಿಂದ ನಿರ್ಮಿಸಿರುವ ಶ್ರೀಮತಿ ಚನ್ನಮ್ಮ ಮಂಚೇಗೌಡ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ನಾಡಗೀತೆಗೆ ಗಣ್ಯರು ಗೌರವ ಸೂಚಿಸಿದರು.