ಗುಟ್ಕಾ, ಪಾನ್ ಮಸಾಲ ಬ್ಯಾನ್ ಮಾಡುವ ಮೂಲಕ ಅಡಿಕೆ ಬೆಳೆಗಾರರ ಮೇಲೆ ದಾಳಿ ಮಾಡುವ ಬದಲಿಗೆ ಅಡಿಕೆ ಉತ್ಪನ್ನಗಳ ಸಂಶೋಧನಾ ಕೇಂದ್ರವನ್ನು ದಾವಣಗೆರೆಯಲ್ಲಿ ಸ್ಥಾಪಿಸಿ, ಅಡಿಕೆಯಿಂದ ಸಿರಪ್, ಟೀ ಪುಡಿ, ಹರ್ಬಲ್ ಡ್ರಿಂಕ್ಸ್, ಸಾಬೂನು, ಶಾಂಪು, ಚಾಕೋಲೇಟ್, ಉಪ್ಪಿನಕಾಯಿ ಸಹಿತ ಅನೇಕ ಉತ್ಪನ್ನಗಳ ತಯಾರಿಕೆಗೆ ಪ್ರೋತ್ಸಾಹಿಸಲಿ ಎಂದು ಚನ್ನಗಿರಿ ನೆಕ್ಸ್‌ ಜೆನ್‌ ಲೈಫ್‌ನ ಬಿ.ಆರ್‌.ರಘು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಗುಟ್ಕಾ, ಪಾನ್ ಮಸಾಲ ಬ್ಯಾನ್ ಮಾಡುವ ಮೂಲಕ ಅಡಿಕೆ ಬೆಳೆಗಾರರ ಮೇಲೆ ದಾಳಿ ಮಾಡುವ ಬದಲಿಗೆ ಅಡಿಕೆ ಉತ್ಪನ್ನಗಳ ಸಂಶೋಧನಾ ಕೇಂದ್ರವನ್ನು ದಾವಣಗೆರೆಯಲ್ಲಿ ಸ್ಥಾಪಿಸಿ, ಅಡಿಕೆಯಿಂದ ಸಿರಪ್, ಟೀ ಪುಡಿ, ಹರ್ಬಲ್ ಡ್ರಿಂಕ್ಸ್, ಸಾಬೂನು, ಶಾಂಪು, ಚಾಕೋಲೇಟ್, ಉಪ್ಪಿನಕಾಯಿ ಸಹಿತ ಅನೇಕ ಉತ್ಪನ್ನಗಳ ತಯಾರಿಕೆಗೆ ಪ್ರೋತ್ಸಾಹಿಸಲಿ ಎಂದು ಚನ್ನಗಿರಿ ನೆಕ್ಸ್‌ ಜೆನ್‌ ಲೈಫ್‌ನ ಬಿ.ಆರ್‌.ರಘು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ನಗರದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಡಿಕೆ ಕ್ಯಾನ್ಸರ್‌ಗೆ ಕಾರಣವಲ್ಲ. ಅಡಿಕೆ ಆ್ಯಂಟಿ ಡಯಾಬಿಟಿಕ್, ಆ್ಯಂಟಿ ಫಂಗಸ್‌, ಆ್ಯಂಟಿ ಕ್ಯಾನ್ಸರ್‌, ಆ್ಯಂಟಿ ಬ್ಯಾಕ್ಟೀರಿಯಲ್‌ ಮತ್ತಿತರ ಔಷಧೀಯ ಗುಣಗಳನ್ನು ಹೊಂದಿದ್ದು, ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರವೇ ಅಡಿಕೆ ತೋಟ ಬೆಳೆಸಲು ಸಹಾಯಧನ ನೀಡುತ್ತದೆ. ಹನಿ ನೀರಾವರಿ ಪದ್ಧತಿಗೆ ಸಬ್ಸಿಡಿ ನೀಡುತ್ತಿದೆ. ರೋಗಗಳಿಂದಾಗುವ ಹಾನಿಗೆ ಪರಿಹಾರ ಒದಗಿಸುತ್ತಿದೆ. ಅದೇ ಸರ್ಕಾರವು ಅಡಿಕೆ ಉತ್ಪನ್ನಗಳನ್ನು ನಿಷೇಧಿಸುವುದಾಗಿಯೂ ಹೇಳಿಕೆ ನೀಡುತ್ತಿರುವುದು ಅಸಮಂಜಸ ಎಂದು ಅಸಮಾಧಾನ ಹೊರಹಾಕಿದರು.

ಗುಟ್ಕಾ, ಪಾನ್ ಮಸಾಲ ಆರೋಗ್ಯಕ್ಕೆ ಹಾನಿಕಾರಕವೆಂದು ಗುಟ್ಕಾ, ಪಾನ್ ಮಸಾಲ ನಿಷೇಧಿಸಲು ಮುಂದಾಗಿದ್ದು ಸ್ವಾಗತಾರ್ಹ. ಬರೀ ಅಡಿಕೆ ಉತ್ಪನ್ನಗಳನ್ನು ಮಾತ್ರ ಆರೋಗ್ಯಕ್ಕೆ ಹಾನಿಕಾರಕವೆಂದು ಸರ್ಕಾರ ನಿಷೇಧಿಸುವಂತೆ ಮದ್ಯ, ಸಿಗರೇಟ್‌, ಗಾಂಜಾ, ಚರಸ್, ಡ್ರಗ್ಸ್‌ನಂತಹ ಮಾದಕ ಪದಾರ್ಥಗಳನ್ನೂ ಸಂಪೂರ್ಣ ನಿಷೇಧಿಸಬೇಕು ಎಂದು ಬಿ.ಆರ್‌.ರಘು ಒತ್ತಾಯಿಸಿದರು.

ಚನ್ನಗಿರಿ ತಾಲೂಕಿನ ಅಡಿಕೆ ಬೆಳೆಗಾರ ಚಂದ್ರಹಾಸ ಬಿ.ಲಿಂಗದಹಳ್ಳಿ ಮಾತನಾಡಿ, ಇಡೀ ಜಗತ್ತಿನಲ್ಲಿ ಭಾರತದಲ್ಲೇ ಅತೀ ಹೆಚ್ಚು ಅಡಿಕೆ ಬೆಳೆಯಲಾಗುತ್ತದೆ. ಅದರಲ್ಲೂ ಕರ್ನಾಟಕದಲ್ಲಿ, ದಾವಣಗೆರೆ ಜಿಲ್ಲೆಯಲ್ಲೇ ಅತೀ ಹೆಚ್ಚು ಅಡಿಕೆ ಬೆಳೆಯಲಾಗುತ್ತದೆ. ಕಡಿಮೆ ನೀರಿನಲ್ಲಿ ಹೆಚ್ಚು ಲಾಭ ಕೊಡುವಂತಹ ಅಡಿಕೆ ಬೆಳೆಯುವ ಮೂಲಕ ರೈತರು ಒಳ್ಳೆಯ ಸ್ಥಿತಿಗೆ ಬಂದಿದ್ದಾರೆ. ಈಗ ಗುಟ್ಕಾ, ಪಾನ್ ಮಸಾಲ ನಿಷೇಧಿಸುವ ಮೂಲಕ ಎಲ್ಲರ ಜೀವನ ಹತ್ತಿಕ್ಕುವ ಕೆಲಸ ಸರಿಯಲ್ಲ. ಅಡಿಕೆ ಉಳಿಸುವ ಜೊತೆಗೆ ಜನರ ಆರೋಗ್ಯವನ್ನೂ ಕಾಪಾಡುವ ಬಗ್ಗೆ ಸರ್ಕಾರ ಗಮನ ಹರಿಸಲಿ ಎಂದು ಒತ್ತಾಯಿಸಿದರು.

ಅಡಿಕೆ ಬೆಳೆಗಾರ ನುಗ್ಗಿಹಳ್ಳಿ ಎನ್.ಸಿ.ಶಶಿಧರ್ ಮಾತನಾಡಿ, ರಾಜ್ಯದಲ್ಲಿ ಲಕ್ಷಾಂತರ ರೈತರ ಬದುಕು ಅಡಿಕೆ ಬೆಳೆ ಮೇಲೆ ಅವಲಂಭಿತವಾಗಿದೆ. ಅಡಿಕೆ ಬೆಳೆಗಾರರನ್ನು ಆರ್ಥಿಕವಾಗಿ ಹಣಿಯಲು ಹೀಗೆಲ್ಲಾ ಗುಟ್ಕಾ, ಪಾನ್ ಮಸಾಲ ಬ್ಯಾನ್ ಎನ್ನುತ್ತಿದ್ದಾರೆ. ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಅಡಿಕೆ ಬೆಳೆಗಾರರನ್ನು ತುಳಿಯುವ ಯತ್ನ ಇದಾಗಿದೆ. ಆರೋಗ್ಯ ಸಚಿವ ಯು.ಟಿ.ಖಾದರ್‌ ಭಾವನಾತ್ಮಕ ನಿರ್ಧಾರ ಕೈಗೊಳ್ಳಬಾರದು. ಅಡಿಕೆಯಿಂದ ಇತರ ಉತ್ಪನ್ನಗಳನ್ನು ತಯಾರಿಸಲು ಮುಂದಾಗಬೇಕು. ಈ ಮೂಲಕ ಅಡಿಕೆ ಬೆಳೆಗಾರರನ್ನೂ ಬೆಳೆಸುವ ಕೆಲಸ ಮಾಡಿ ಎಂದು ಸಲಹೆ ನೀಡಿದರು.

ಚನ್ನಗಿರಿ ತಾಲೂಕಿನ ಅಡಿಕೆ ಬೆಳೆಗಾರರಾದ ಕೆರೆಬಿಳಚಿ ಮಹಮ್ಮದ್ ಶಬ್ಬೀರ್, ಹೊನ್ನೇಮರಡಿ ಲೋಕೇಶ್ವರಪ್ಪ, ತಿಪ್ಪೇಸ್ವಾಮಿ ತುಪ್ಪದಹಳ್ಳಿ, ಬಂಡಿ ಸತೀಶ ಗೌಡ, ಎಸ್.ಆರ್. ಶಾಂತವೀರಪ್ಪ, ಎಚ್.ಜಿ.ಶಶಿಕುಮಾರ ಇತರರು ಇದ್ದರು.

ಅಡಿಕೆ ಉತ್ಪನ್ನಗಳ ತಯಾರಕರಿಗೆ ನೆರವು: ನಾನು ಕೆಲವು ದಿನಗಳಿಂದ ಅಡಿಕೆಯಿಂದ ಸಾಬೂನು, ಶಾಂಪು ಇತರ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿದ್ದು, ನನ್ನ ಹೆಸರಿನಲ್ಲೇ ಪೇಟೆಂಟ್ ಪಡೆದಿದ್ದೇನೆ. ಕ್ಯಾಂಪ್ಕೋ, ತುಮ್ಕೋಸ್‌ನಂತಹ ಸಹಕಾರಿ ಸಂಘಗಳು ಹೆಚ್ಚಿನ ಪ್ರಮಾಣದಲ್ಲಿ ಅಡಿಕೆ ಉತ್ಪನ್ನಗಳ ತಯಾರಿಕೆ, ಮಾರುಕಟ್ಟೆ ಕಲ್ಪಿಸಲು, ಜನರಿಗೆ ತಲುಪಿಸಲು ಮುಂದಾಗಬೇಕು. ಯಾವುದೇ ರಾಯಲ್ಪಿ, ಹಣ ಪಡೆಯದೇ ಉಚಿತವಾಗಿ ಉತ್ಪನ್ನಗಳ ತಯಾರಿಕೆಗೆ ಸಹಕರಿಸಲು ಸಿದ್ಧನಿದ್ದೇನೆ. ಅಡಿಕೆ ಉತ್ಪನ್ನಗಳ ತಯಾರಿಕೆ, ಸಂಶೋಧನಾ ಕೇಂದ್ರ ದಾವಣಗೆರೆಯಲ್ಲೇ ಆಗಬೇಕು. ಈ ಬಗ್ಗೆ ಸಿಎಂ ಡಿ.ಕೆ.ಶಿವಕುಮಾರ್‌, ಆರೋಗ್ಯ ಸಚಿವ ಯು.ಟಿ.ಖಾದರ್‌, ಆರೋಗ್ಯ ಇಲಾಖೆ ಜತೆಗೆ ಕೇಂದ್ರ ಸರ್ಕಾರಕ್ಕೂ ಮನವಿ ಮಾಡುತ್ತೇವೆ ಎಂದು ಬಿ.ಆರ್.ರಘು ತಿಳಿಸಿದರು..