ಸಾರಾಂಶ
- ದಾವಣಗೆರೆ ಸೇರಿ 15 ಜಿಲ್ಲೆಗಳಲ್ಲಿ ಕಾಲೇಜುಗಳ ಸ್ಥಾಪನೆ ವಿಚಾರ ನನೆಗುದಿಗೆ: ಜಿಲ್ಲಾಧ್ಯಕ್ಷ ಶಹಬಾಜ್ ಖಾನ್ - - -
ಕನ್ನಡಪ್ರಭ ವಾರ್ತೆ ದಾವಣಗೆರೆರಾಜ್ಯದಲ್ಲಿ 14 ಮುಸ್ಲಿಂ ಮಹಿಳಾ ಕಾಲೇಜುಗಳನ್ನು ಆರಂಭಿಸುವಂತೆ ಆದೇಶ ಹೊರಡಿಸಿ 9 ತಿಂಗಳಾದರೂ ಯಾವುದೇ ಪ್ರಗತಿ ಕಾಣುತ್ತಿಲ್ಲ. ಈ ಹಿನ್ನೆಲೆಯಲ್ಲಿ ತಕ್ಷಣವೇ ಮುಸ್ಲಿಂ ಮಹಿಳಾ ಕಾಲೇಜುಗಳ ಸ್ಥಾನೆಗೆ ರಾಜ್ಯ ಸರ್ಕಾರ ಮುಂದಾಗಲಿ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ಶಹಬಾಜ್ ಖಾನ್ ಒತ್ತಾಯಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 14 ಮುಸ್ಲಿಂ ಮಹಿಳಾ ಕಾಲೇಜುಗಳನ್ನು ಆರಂಭಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. 4.9.2024ರಂದು ಆರ್ಥಿಕ ಇಲಾಖೆ, 24.9.2023ರಂದು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿ, 26.9.2024ರಂದು ರಾಜ್ಯಪಾಲರ ಅಂಕಿತದೊಂದಿಗೆ ಆದೇಶ ಹೊರಡಿಸಲಾಗಿತ್ತು ಎಂದರು.ಕಾಲೇಜುಗಳ ನಿರ್ಮಾಣಕ್ಕೆ ಜಾಗ ಹಾಗೂ ಕಾಮಗಾರಿಗೆ ಅನುದಾನ ಸಹ ಮಂಜೂರಾಗಿದೆ. ಆದರೆ, ಇಂದಿಗೂ ಮುಸ್ಲಿಂ ಮಹಿಳಾ ಕಾಲೇಜು ಸ್ಥಾಪಿಸುವ ಕಾಮಗಾರಿ ಮಾತ್ರ ಸರ್ಕಾರ ಆರಂಭಿಸಿಲ್ಲ. ತಕ್ಷಣವೇ ಮುಸ್ಲಿಂ ವಕ್ಫ್ ಬೋರ್ಡ್ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಗಳಿಗೆ ಈ ಬಗ್ಗೆ ಸೂಚನೆ ನೀಡಿ, ಕಾಲೇಜು ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಹಿಂದೆಜ್ಜೆ ಇಡೋದು ಸರಿಯಲ್ಲ:ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಲ್ಲಿ ಜಾರಿ ಮಾಡುತ್ತಿರುವ ವಕ್ಫ್ ಆಸ್ತಿಗಳ ಸಂರಕ್ಷಣೆ, ಅಭಿವೃದ್ಧಿ, ದುರಸ್ತಿ, ಜೀರ್ಣೋದ್ಧಾರ ಸೇರಿದಂತೆ ₹4776.46 ಲಕ್ಷ ಹಣವಿದೆ. ಆದರೆ, ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳಿಗಾಗಿ ಮುಸ್ಲಿಂ ಮಹಿಳಾ ಕಾಲೇಜು ಸ್ಥಾಪಿಸಲು ಮಾತ್ರ ಸರ್ಕಾರ ಹಿಂದೆಜ್ಜೆ ಇಡುತ್ತಿರುವುದು ಸರಿಯಲ್ಲ. ತಕ್ಷಣವೇ ಸಂಬಂಧಿಸಿದ ಇಲಾಖೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ, ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಲಿ ಎಂದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಬೀಬೀ ಸಫೂರ್, ಫಕೃಂದ ಬಾನು, ಮಹಮ್ಮದ್ ಶಾಕೀರ್, ಇಮ್ರಾನ್ ಖಾನ್ ಇತರರು ಇದ್ದರು.- - -
(ಬಾಕ್ಸ್) * 15 ಜಿಲ್ಲೆಗಳಲ್ಲಿ ಕಾಲೇಜುಗಳ ನಿರ್ಮಿಸಿ ಕರ್ನಾಟಕ ವಕ್ಫ್ ಮಂಡಳಿಯ ವಿವಿಧ ಬ್ಯಾಂಕ್ ಖಾತೆಗಳಲ್ಲಿ ಜಮಾ ಆಗಿರುವ ₹4777.46 ಲಕ್ಷಗಳ ಬಡ್ಡಿ ಹಣದಲ್ಲೇ ಪ್ರತಿ ಕಟ್ಟಡದ ನಿರ್ಮಾಣ ಕಾಮಗಾರಿಗೆ ₹318.43 ಲಕ್ಷಗಳ ಅಂದಾಜು ವೆಚ್ಚದಲ್ಲಿ ರಾಜ್ಯದ 15 ಜಿಲ್ಲೆಗಳಲ್ಲಿ ಮುಸ್ಲಿಂ ಮಹಿಳಾ ಕಾಲೇಜುಗಳ ನಿರ್ಮಾಣ ಮಾಡಬೇಕು. ಆಯಾ ಜಿಲ್ಲೆಗಳ ವಕ್ಫ್ ನಿವೇಶನಗಳಲ್ಲಿ ಕೆಟಿಪಿಪಿ ನಿಯಮಾನುಸಾರ ಮಹಿಳಾ ಕಾಲೇಜುಗಳ ಕಟ್ಟಡ ಕಾಮಗಾರಿ ಕೈಗೊಳ್ಳಬೇಕು ಎಂದು ತಿಳಿಸಿದರು. ಬಾಗಲಕೋಟೆ, ಚಿತ್ರದುರ್ಗ, ಬೀದರ್, ಬಳ್ಳಾರಿ, ಕೊಪ್ಪಳ, ಮೈಸೂರು, ಬೆಂಗಳೂರು, ಚಿಕ್ಕಬುಳ್ಳಾಪುರ, ವಿಜಯನಗರ, ಕಲ್ಬುರ್ಗಿ, ಉಡುಪಿ ಜಿಲ್ಲೆ ಕುಂದಾಪುರ, ವಿಜಯಪುರ, ಕೋಲಾರ, ದಾವಣಗೆರೆ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಮುಸ್ಲಿಂ ಮಹಿಳಾ ಕಾಲೇಜುಗಳನ್ನು ಸ್ಥಾಪನೆ ಮಾಡಬೇಕಿದೆ. ಈ ಎಲ್ಲ 15 ಜಿಲ್ಲೆಗಳಲ್ಲೂ ಮುಸ್ಲಿಂ ಮಹಿಳಾ ಕಾಲೇಜು ನಿರ್ಮಾಣ ಕಾಮಗಾರಿ ತಕ್ಷಣದಿಂದಲೇ ಕೈಗೆತ್ತಿಕೊಳ್ಳಬೇಕು ಎಂದು ಶಹಬಾಜ್ ಖಾನ್ ಒತ್ತಾಯ ಮಾಡಿದರು.- - -
-3ಕೆಡಿವಿಜಿ1.ಜೆಪಿಜಿ: ದಾವಣಗೆರೆಯಲ್ಲಿ ಗುರುವಾರ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ಶಹಬಾಜ್ ಖಾನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.