ಸಾರಾಂಶ
ಬ್ಯಾಡಗಿ: ರಾಜ್ಯದೆಲ್ಲೆಡೆ 100ಕ್ಕೂ ಹೆಚ್ಚು ವಿದ್ಯುತ್ ವಿತರಣಾ ಉಪಕೇಂದ್ರಗಳ ಸ್ಥಾಪನೆಗೆ ನೀಲನಕ್ಷೆ ಸಿದ್ಧಪಡಿಸಿದ್ದು, ತನ್ಮೂಲಕ ರೈತರಿಗೆ ಹಗಲು ವೇಳೆ ನಿರಂತರ 7 ತಾಸು ತ್ರಿಫೇಸ್ ವಿದ್ಯುತ್ ನೀಡುವುದಾಗಿ ರಾಜ್ಯ ಇಂಧನ ಸಚಿವ ಕೆ.ಜೆ. ಜಾರ್ಜ್ ಭರವಸೆ ನೀಡಿದರು.
ತಾಲೂಕಿನ ಚಿಕ್ಕಬಾಸೂರಿನಲ್ಲಿ 110/ಕೆವಿ ವಿದ್ಯುತ್ ವಿತರಣಾ ಉಪಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿ, ಕಳೆದ ವರ್ಷ ವಿದ್ಯುತ್ ಉತ್ಪಾದನೆ ಕೊರತೆ ಎದುರಿಸುತ್ತಿದ್ದೆವು. ಆದರೆ ಪ್ರಸ್ತುತ ವರ್ಷ ನಿಗದಿತ ಗುರಿಗಿಂತ ಹೆಚ್ಚು ವಿದ್ಯುತ್ ಉತ್ಪಾದನೆ ಇದೆ. ಆದರೆ ವಿತರಣಾ ಕೇಂದ್ರಗಳಿಲ್ಲದೇ ವಿದ್ಯುತ್ ಹಂಚಿಕೆಯಲ್ಲಿ ಎಡವಟ್ಟಾಗಿದೆ. ಉಪಕೇಂದ್ರಗಳ ಸ್ಥಾಪನೆ ಮೂಲಕ ಇಂತಹ ಎಲ್ಲ ಸಮಸ್ಯೆಗಳಿಗೆ ಪರಿಹಾರ ಹುಡುಕಲಿದ್ದೇವೆ ಎಂದರು.500 ಮೀ. ಒಳಗಿದ್ದರೆ ಸಕ್ರಮ: ಕಳೆದ 2023ರ ಸೆಪ್ಟೆಂಬರ್ ತಿಂಗಳವರೆಗೆ ಅರ್ಜಿ ಸಲ್ಲಿಸಿದ ರೈತರಿಗೆ ಅನ್ಯಾಯ ಮಾಡುವುದಿಲ್ಲ. ವಿದ್ಯುತ್ ಸಂಪರ್ಕದ ಲೈನ್‌ದಿಂದ 500 ಮೀ. ಒಳಗಿನ ಹಣ ತುಂಬಿರಲಿ, ಇಲ್ಲದಿರಲಿ ಅಂತಹ ರೈತರ ಸುಮಾರು 2 ಲಕ್ಷ ಪಂಪಸೆಟ್‌ಗಳಿಗೆ ಆರ್‌ಆರ್ ನಂ. ವಿತರಿಸಿ ಸಕ್ರಮಗೊಳಿಸಿಕೊಡಲಿದ್ದೇನೆ. ಅದಕ್ಕಿಂತ ದೂರವಿದ್ದ ರೈತರು ಸೋಲಾರ್ ಅಳವಡಿಸಿಕೊಳ್ಳಲು ಸಿದ್ಧವಾಗಬೇಕು. ಇದಕ್ಕಾಗಿ ಒಟ್ಟು ₹19 ಸಾವಿರ ಕೋಟಿ ಅನುದಾನ ಮೀಸಲಿಡಲಾಗಿದೆ ಎಂದರು.
ವಿದ್ಯುತ್ ಉತ್ಪಾದನೆಗೆ ಸಿದ್ಧವಾಗಿ: ವಿದ್ಯುತ್ ಕೊರತೆ ನೀಗಿಸುವ ನಿಟ್ಟಿನಲ್ಲಿ ಸ್ಥಳೀಯ ಹಂತದಲ್ಲಿಯೇ ಸೌರಶಕ್ತಿ (ಸೋಲಾರ್) ಅಥವಾ ಪವನ ಶಕ್ತಿ(ವಿಂಡ್ ಪವರ್) ಮೂಲಕ ವಿದ್ಯುತ್ ಉತ್ಪಾದನೆಗೆ ಒತ್ತು ನೀಡಲಿದ್ದೇವೆ. ಇದಕ್ಕೆ ಸ್ಥಳೀಯರ ಸಹಕಾರ ಅತ್ಯಗತ್ಯವಾಗಿದೆ. ಭೂಮಿ ನೀಡಿದ ರೈತರಿಗೆ ಪ್ರತಿ ಎಕರೆಗೆ ₹25 ಸಾವಿರ ಸಹಾಯಧನ ನೀಡಲಾಗುವುದು ಮತ್ತು ಜಿಲ್ಲಾಧಿಕಾರಿಗಳ ಉಸ್ತುವಾರಿಯಲ್ಲೇ ಹಣಕಾಸಿನ ವ್ಯವಹಾರ ನಡೆಯಲಿದೆ. ರೈತರು ಜಮೀನು ನೀಡಲು ಉತ್ಸಾಹದಿಂದ ಮುಂದೆ ಬರುವಂತೆ ಕೋರಿದರು.ಸಿದ್ದರಾಮಯ್ಯ ದೂರದೃಷ್ಟಿಯ ನಾಯಕ: ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ದೂರದೃಷ್ಟಿ ನಾಯಕ. ಕಳೆದ ವರ್ಷ ವಿದ್ಯುತ್ ಕೊರತೆ ಇದೆ ಎಂದಾಕ್ಷಣ ಬೇರೆ ರಾಜ್ಯಗಳಿಂದ ಖರೀದಿಸುವಂತೆ ಸೂಚನೆ ನೀಡಿದ ಹಿನ್ನೆಲೆ ವಿದ್ಯುತ್ ಖರೀದಿಸಿ ಜನರಿಗೆ ನೀಡಿದ್ದೇವೆ. ಪರಿಣಾಮವಾಗಿ ರೈತರಿಗೆ 5 ತಾಸು ವಿದ್ಯುತ್ ನೀಡಲು ಸಾಧ್ಯವಾಗಯಿತು ಎಂದರು.
ಕೆರೆ ತುಂಬಿಸಲು ₹147 ಕೋಟಿ: ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ರಾಜ್ಯದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಹಣ ಇಲ್ಲವೆನ್ನುವ ಬಿಜೆಪಿ ನಾಯಕರ ಟೀಕೆಗಳಿಗೆ ಅಭಿವೃದ್ಧಿ ಕೆಲಸಗಳಿಂದ ಉತ್ತರ ನೀಡಲಿದ್ದೇನೆ. ತಾಲೂಕಿನಲ್ಲಿ ಶಾಶ್ವತ ನೀರಾವರಿ ಯೋಜನೆಗಳಿಲ್ಲ. ಕೊಳವೆ ಬಾವಿಗಳ ಮೂಲಕ ರೈತರು ನೀರಾವರಿ ಸಾಕಾರಗೊಳಿಸಿಕೊಳ್ಳಬೇಕಿದೆ. ಆದ್ದರಿಂದ ಗುಡ್ಡದ ಮಲ್ಲಾಪುರ ಯೋಜನೆಯಡಿ ಕಾಲುವೆಗಳ ಬದಲಾಗಿ ಸುಮಾರು 86 ಕೆರೆಗಳಿಗೆ ಪೈಪ್‌ಲೈನ್ ಮೂಲಕ ತುಂಬಿಸುವ ಮೂಲಕ ಸಮಸ್ಯೆಗೆ ಶಾಶ್ವತ ಪರಿಹರ ನೀಡಲಿದ್ದೇನೆ. ಬ್ಯಾಡಗಿ ತಾಲೂಕಿನಲ್ಲಿ 2 ವಿದ್ಯುತ್ ಉಪಕೇಂದ್ರಗಳನ್ನ ಮೇಲ್ದರ್ಜೆಗೇರಿಸಿ 220 ಮೆಗಾವ್ಯಾಟ್ ಪರಿವರ್ತನೆ ಮಾಡಲಾಗುವುದು. ಇದರಿಂದ 5 ತಾಸಿನ ಬದಲಾಗಿ ನಿರಂತವಾಗಿ 7 ಗಂಟೆ ರೈತರ ಪಂಪಸೆಟ್‌ಗಳಿಗೆ ಗುಣಮಟ್ಟದ ವಿದ್ಯುತ ಪೂರೈಕೆ ಮಾಡಲಾಗುವುದು ಎಂದರು.ರೈತರಿಗೆ ಬೆಳಕು: ಹೆಸ್ಕಾಂ ಅಧ್ಯಕ್ಷ ಸೈಯದ್ ಅಜೀಮ್‌ಪೀರ್ ಖಾದ್ರಿ ಮಾತನಾಡಿ, ಬ್ಯಾಡಗಿ ತಾಲೂಕಿನ ಜನರು ಅದೃಷ್ಟಶಾಲಿಗಳು. ಬ್ಯಾಡಗಿ ಮತ ಕ್ಷೇತ್ರದಲ್ಲಿ ವಿದ್ಯುತ್ ಕೊರತೆ ಆಗದಂತೆ ನೋಡಿಕೊಳ್ಳಲಿದ್ದೇನೆ. ₹33 ಕೋಟಿ ವೆಚ್ಚದಲ್ಲಿ ಎರಡು ವಿದ್ಯುತ್ ಉಪಕೇಂದ್ರಗಳನ್ನು ಪರಿವರ್ತನೆಗೊಳ್ಳಲಿದ್ದು, ಇನ್ನೆರಡು ಉಪ ಕೇಂದ್ರಗಳ ಸ್ಥಾಪನೆಗೆ ಪ್ರಸ್ತಾಪ ಸಲ್ಲಿಸಲಾಗಿದೆ ಎಂದರು.
ಪಂಚ ಗ್ಯಾರಂಟಿ ಯೋಜನೆಗಳ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಮಾತನಾಡಿದರು. ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಎಂ.ಎಲ್. ವೈಶಾಲಿ, ಹೆಸ್ಕಾಂ ಎಇಇ ಜಿ.ಕೆ. ಕೊಟ್ಯಾಳ, ಗ್ರಾಪಂ ಅಧ್ಯಕ್ಷೆ ಲಲಿತವ್ವ ವಾಲ್ಮೀಕಿ, ಮುಖಂಡರಾದ ನಾಗರಾಜ ಆನ್ವೇರಿ, ದಾನಪ್ಪ ಚೂರಿ, ಶಂಭನಗೌಡ ಪಾಟೀಲ, ಶಿವನಗೌಡ ಪಾಟೀಲ, ವೀರಭದ್ರಪ್ಪ ಗೊಡಚಿ, ರುದ್ರಪ್ಪ ಹೊಂಕಣ, ಜಯಣ್ಣ ಮಲ್ಲಿಗಾರ, ಬಸವರಾಜ ಸವಣೂರ, ಎಂಜಿನಿಯರ್ ವಿಜಯ ಜೋಷಿ, ರಾಜು ಅರಳಿಕಟ್ಟಿ ಉಪಸ್ಥಿತರಿದ್ದರು. ಶಿಕ್ಷಕ ಎಂ.ಎಫ್. ಕರಿಯಣ್ಣನವರ ಕಾರ್ಯಕ್ರಮ ನಿರ್ವಹಿಸಿದರು.