ಸಾರಾಂಶ
ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ್ (ಪಿಎಂ ಜನ್‌ಮನ್) ಕೇಂದ್ರ ಸರ್ಕಾರದ ಯೋಜನೆಯಡಿ ನೈಜ ದುರ್ಬಲ ಬುಡಕಟ್ಟು ಸಮುದಾಯದ (ಪಿವಿಟಿಜಿ) ಅಭಿವೃದ್ಧಿಗಾಗಿ ಉಡುಪಿ ಜಿಲ್ಲೆಗೆ ಒಟ್ಟು ೧೮ ವಿವಿಧೋದ್ದೇಶ ಕೇಂದ್ರಗಳು (ಎಂಪಿಸಿ) ಮಂಜೂರಾಗಿವೆ
ಕನ್ನಡಪ್ರಭ ವಾರ್ತೆ ಉಡುಪಿ
ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ್ (ಪಿಎಂ ಜನ್‌ಮನ್) ಕೇಂದ್ರ ಸರ್ಕಾರದ ಯೋಜನೆಯಡಿ ನೈಜ ದುರ್ಬಲ ಬುಡಕಟ್ಟು ಸಮುದಾಯದ (ಪಿವಿಟಿಜಿ) ಅಭಿವೃದ್ಧಿಗಾಗಿ ಉಡುಪಿ ಜಿಲ್ಲೆಗೆ ಒಟ್ಟು ೧೮ ವಿವಿಧೋದ್ದೇಶ ಕೇಂದ್ರಗಳು (ಎಂಪಿಸಿ) ಮಂಜೂರಾಗಿವೆ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.ಈ 18 ಎಂಪಿಸಿಗಳ ಪೈಕಿ ಈಗಾಗಲೇ ಕುಂದಾಪುರ ತಾಲೂಕಿನ ಹಾಲಾಡಿ ಬತ್ತುಗುಳಿ, ಹಾರ್ದಳ್ಳಿ ಮಂಡಳ್ಳಿ ಹಾಗೂ ಬೈಂದೂರು ತಾಲೂಕಿನ ಕೆರಾಡಿಯಲ್ಲಿ ಒಟ್ಟು ಮೂರು ಕಾಮಗಾರಿಗಳು ಪ್ರಾರಂಭವಾಗಿದ್ದು, ಕಾರ್ಕಳದ ಸಚ್ಚೇರಿಪೇಟೆಯಲ್ಲಿ ಒಂದು ಕಾಮಗಾರಿ ಪ್ರಾರಂಭಿಸಬೇಕಿದೆ. ಮೂರು ಎಂಪಿಸಿ ಕೇಂದ್ರಗಳ ಅಂದಾಜು ಪಟ್ಟಿ ತಯಾರಿಕೆಯ ಹಂತದಲ್ಲಿದ್ದು ಈಗಾಗಲೇ ೯ ಕೇಂದ್ರಗಳಿಗೆ ಜಮೀನು ಮಂಜೂರಾತಿ ಪ್ರಕ್ರಿಯೆಯಲ್ಲಿವೆ. ಇನ್ನೂ ೨ ಕೇಂದ್ರಗಳಿಗೆ ನಿವೇಶನ ಗುರುತಿಸಲು ಬಾಕಿ ಇರುತ್ತದೆ ಎಂದವರು ತಿಳಿಸಿದ್ದಾರೆಪ್ರ ತಿ ವಿವಿಧೋದ್ದೇಶ ಕೇಂದ್ರದ ಘಟಕ ವೆಚ್ಚ ೬೦ ಲಕ್ಷ ರು. ಗಳಾಗಿದ್ದು, ಪ್ರತಿಯೊಂದು ವಿವಿಧೋದ್ದೇಶ ಕೇಂದ್ರಗಳಲ್ಲಿ ಪರಿಶಿಷ್ಟ ಪಂಗಡದ ಜನಾಂಗದವರಿಗೆ ಆರೋಗ್ಯ ಸೌಲಭ್ಯ, ಶೈಕ್ಷಣಿಕ ಸೌಲಭ್ಯ ಹಾಗೂ ವಿವಿಧ ಕೌಶಲ್ಯಾಧಾರಿತ ಸಾಮಾಜಿಕ ಸೌಲಭ್ಯಗಳನ್ನು ನೀಡಲಾಗುತ್ತದೆ.ಈ ಮೂಲಕ ಜಿಲ್ಲೆಯ ಆದಿವಾಸಿ ಕೊರಗ ಬುಡಕಟ್ಟು ಜನಾಂಗದವರನ್ನು ಸರ್ವೋತೋಮುಖ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಒಂದೇ ಸೂರಿನಡಿ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಕೊರಗ ಜನಾಂಗದವರು ವಾಸಿಸುವ ಕಾಲೋನಿಗಳಲ್ಲಿ ನೀಡಿ, ಮುಂಚೂಣಿಗೆ ತರುವ ಉದ್ದೇಶ ಯೋಜನೆಯದ್ದಾಗಿರುತ್ತದೆ.ಇದರಿಂದ ಉಡುಪಿ ಜಿಲ್ಲೆಯ ಸುಮಾರು ೧೮ ಕೇಂದ್ರಗಳಲ್ಲಿ ಪರಿಶಿಷ್ಟ ಪಂಗಡದ ಆದಿವಾಸಿ ಕೊರಗ ಜನಾಂಗದವರು ಈ ಸೌಲಭ್ಯವನ್ನು ಪಡೆಯಲಿದ್ದಾರೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.