ಖೇಣಿದಾರರ ನೆರವಿಗಾಗಿ ಸಹಕಾರ ಸಂಘ ಸ್ಥಾಪನೆ

| Published : Mar 19 2025, 12:31 AM IST

ಸಾರಾಂಶ

ಅಡಕೆ ಖೇಣಿದಾರರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮುಖ್ಯವಾಗಿ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆ ಜಿಲ್ಲೆಯಲ್ಲಿ ಅಡಕೆ ಖೇಣಿದಾರರ ಹಿತರಕ್ಷಣೆ ದೃಷ್ಟಿಯಿಂದ ಅಡಕೆ ಖೇಣಿದಾರರ ಸೌಹಾರ್ದ ಸಹಕಾರ ಸಂಘ ರಚಿಸಲು ತೀರ್ಮಾನಿಸಲಾಯಿತು ಎಂದು ಖೇಣಿದಾರರಾದ ಅರಕೆರೆ ಮುರುಗೇಶ್ ಹೇಳಿದ್ದಾರೆ.

- ಗೊಲ್ಲರಹಳ್ಳಿ ತರಳಬಾಳು ಸಮುದಾಯ ಭವನದಲ್ಲಿ ಖೇಣಿದಾರರ ಸಭೆಯಲ್ಲಿ ನಿರ್ಧಾರ । - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಅಡಕೆ ಖೇಣಿದಾರರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮುಖ್ಯವಾಗಿ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆ ಜಿಲ್ಲೆಯಲ್ಲಿ ಅಡಕೆ ಖೇಣಿದಾರರ ಹಿತರಕ್ಷಣೆ ದೃಷ್ಟಿಯಿಂದ ಅಡಕೆ ಖೇಣಿದಾರರ ಸೌಹಾರ್ದ ಸಹಕಾರ ಸಂಘ ರಚಿಸಲು ತೀರ್ಮಾನಿಸಲಾಯಿತು ಎಂದು ಖೇಣಿದಾರರಾದ ಅರಕೆರೆ ಮುರುಗೇಶ್ ಹೇಳಿದರು.

ತಾಲೂಕಿನ ಗೊಲ್ಲರಹಳ್ಳಿ ತರಳಬಾಳು ಸಮುದಾಯ ಭವನದಲ್ಲಿ ನಡೆದ ಅಡಕೆ ಖೇಣಿದಾರರ ಸಭೆಯಲ್ಲಿ ಅವರು ಮಾತನಾಡಿದರು. ಇತ್ತೀಚೆಗೆ ಖೇಣಿದಾರರು ಜಿದ್ದಿಗೆ ಬಿದ್ದು ಮನಬಂದಂತೆ ಅಡಕೆ ತೋಟಗಳ ಖೇಣಿಗೆ ಹಿಡಿದುಕೊಳ್ಳುತ್ತಿದ್ದಾರೆ. 1 ಕ್ವಿಂ. ಹಸಿ ಅಡಕೆಗೆ 12ರಿಂದ 14 ಕೆ.ಜಿ. ಕೊಡುವ ಒಡಂಬಡಿಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಖೇಣಿದಾರರು ಸಾಲದ ಕೂಪದತ್ತ ಸಾಗುವಂತಾಗಿದೆ ಎಂದು ತಿಳಿಸಿದರು.

ಶಿಕಾರಿಪುರ ತಾಲೂಕಿನ ಅಡಕೆ ಖೇಣಿದಾರರ ಸಂಘದ ಅಧ್ಯಕ್ಷ ಲೋಹಿತೇಶ್ವರ್ ಮಾತನಾಡಿ, ಖೇಣಿದಾರರ ನಡುವೆ ಸ್ಪರ್ಧೆ ನಡೆಯುತ್ತಿದ್ದು, 12 ರಿಂದ 13 ಕೆ.ಜಿ ಗೆ ಒಡಂಬಡಿಕೆ ಮಾಡಿಕೊಳ್ಳುತ್ತಿರುವುದರಿಂದ ಗಂಭೀರ ನಷ್ಟ ಅನುಭವಿಸುತ್ತಿದ್ದಾರೆ. ಇದರಿಂದ ಗುಣಮಟ್ಟದ ಅಡಕೆಯನ್ನು ಕೊಡಲಾಗುತ್ತಿಲ್ಲ. ಮಾರುಕಟ್ಟೆಯಲ್ಲಿ ಅಡಕೆ ದರ ಸ್ಥಿರತೆ ಇಲ್ಲ. ಆದ್ದರಿಂದ ಖೇಣಿದಾರರು ಮನಬಂದಂತೆ ವ್ಯಾಪಾರ ವಹಿವಾಟು ಮಾಡುವುದು ಬಿಡಬೇಕು. ಉತ್ತಮ ಗುಣಮಟ್ಟದ ಅಡಕೆ ಕೊಡದಿದ್ದರೆ ನಾವೇ ನಶಿಸಿ ಹೋಗುತ್ತೇವೆ. ಆದ್ದರಿಂದ ನಾವೆಲ್ಲರೂ ಸೇರಿ ಒಂದು ನಿರ್ಧಾರ ಕೈಗೊಳ್ಳದಿದ್ದರೆ ವಿನಾಶ ಕಟ್ಟಿಟ್ಟ ಬುತ್ತಿ ಎಂದರು.

ಚನ್ನಗಿರಿ ವೀರಭದ್ರಪ್ಪ ಮಾತನಾಡಿ, ಖೇಣಿದಾರರು ನಷ್ಠದಲ್ಲಿದ್ದಾರೆ, ಅದಕ್ಕಾಗಿ ಪ್ರವಾಸ ಮಾಡಿ ಸಂಘಟನೆ ಮಾಡುತ್ತಿದ್ದೇವೆ, ಎಲ್ಲರೂ ಒಗ್ಗಟ್ಟಾದರೆ ನಮಗೆ ಉಳಿಗಾಲವಿದೆ. ಪ್ರಕೃತಿ ವೈಪರೀತ್ಯದಿಂದ, ಬಿಸಿಲಿನ ತಾಪದಿಂದ ಇಳುವರಿ ಕಡಿಮೆಯಾಗುತ್ತಿದೆ. ಉತ್ತಮ ಬೆಲೆ ಸಿಗುತ್ತಿಲ್ಲ ಎಂದರು.

ಹಾಗೂ ಖೇಣಿ ಬಸಣ್ಣ ಮಾತನಾಡಿ, ಅಡಕೆ ಪುಡಿ, ಗೊರಬಲು, ಗೋಟು ಅಡಕೆಗೆ ಬೆಲೆ ಸಿಗುತ್ತಿಲ್ಲ, ಕಡಿಮೆ ದರಕ್ಕೆ ಕೇಳುತ್ತಿದ್ದಾರೆ. ಈ ಉದ್ದೇಶದಿಂದ 10 ಕೆ.ಜಿ. ಅಡಕೆಗೆ ಒಡಂಬಡಿಕೆ ಮಾಡಿಕೊಳ್ಳಲು ತೀರ್ಮಾನಿಸೋಣ ಎಂದು ಸಲಹೆ ನೀಡಿದರು.

ಮಧುಗೌಡ ಮಾತನಾಡಿ, ಕೊನೆಯಲ್ಲಿ ಅಡಕೆ ಖೇಣಿದಾರರ ಸೌಹಾರ್ದ ಸಂಘ ರಚನೆ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗಿದ್ದು, 10 ಕೆ.ಜಿ. ಖೇಣಿಗೆ ಒಡಂಬಡಿಕೆ ಮಾಡಿಕೊಳ್ಳುವ ತೀರ್ಮಾನ ತೆಗೆದುಕೊಳ್ಳಲಾಯಿತು ಎಂದರು.

ಸಭೆಯಲ್ಲಿ ರೈತ ಸಂಘದ ಮುಖಂಡ ಕರಿಬಸಪ್ಪ ಗೌಡ, ಮಾಸಡಿ ಗಜೇಂದ್ರಪ್ಪ, ದೊಡ್ಡೇರಿ ಗಿರೀಶ್, ಹೊಸಹಳ್ಳಿ ಹಾಲೇಶ್ ಪಟೇಲ್, ನೆಲಹೊನ್ನೆ ಮೋಹನ್ ಮಾತನಾಡಿದರು. ಶಿಕಾರಿಪುರ, ಶಿವಮೊಗ್ಗ, ಚನ್ನಗಿರಿ, ದಾವಣಗೆರೆ, ಹೊನ್ನಾಳಿ ಭಾಗದ ಸುಮಾರು 400ಕ್ಕೂ ಹೆಚ್ಚು ಖೇಣಿದಾರರು ಭಾಗವಹಿಸಿದ್ದರು.

- - - -18ಎಚ್.ಎಲ್.ಐ2.ಜೆಪಿಜಿ:

ಹೊನ್ನಾಳಿ ತಾಲೂಕಿನ ಗೊಲ್ಲರಹಳ್ಳಿ ತರಳಬಾಳು ಸಮುದಾಯ ಭವನದಲ್ಲಿ ಅಡಕೆ ಖೇಣಿದಾರರ ಸಭೆಯಲ್ಲಿ ಮುಖಂಡ ಅರಕೆರೆ ಮಧುಗೌಡ ಮಾತನಾಡಿದರು.