ಸಾರಾಂಶ
ಮಂಡ್ಯದಲ್ಲಿ ಕೃಷಿ ವಿಶ್ವವಿದ್ಯಾನಿಲಯ ಸ್ಥಾಪನೆಯಿಂದ ನನ್ನ ಬಹುದಿನಗಳ ಕನಸು ಸಾಕಾರಗೊಂಡಿದೆ. ವಿವಿ ಸ್ಥಾಪನೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ವಿಧಾನಮಂಡಲ ಹಾಗೂ ವಿಧಾನ ಪರಿಷತ್‌ನಲ್ಲಿ ಈ ಕುರಿತ ವಿಧೇಯಕಕ್ಕೆ ಅಂಗೀಕಾರ ಆಗುವ ಮೂಲಕ ಮಂಡ್ಯ ಜಿಲ್ಲೆ ಹಾಗೂ ಮೈಸೂರು ವಿಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ.
ಕನ್ನಡಪ್ರಭ ವಾರ್ತೆ ಮದ್ದೂರು
ಮಂಡ್ಯ ಜಿಲ್ಲೆಗೆ ಕೃಷಿ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಕಾರಣರಾದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಜಿಲ್ಲಾ ಕಿಸಾನ್ ಕಾಂಗ್ರೆಸ್ ವತಿಯಿಂದ ಪಟ್ಟಣದಲ್ಲಿ ಭಾನುವಾರ ನೇಗಿಲು ನೀಡಿ ವಿನೂತನವಾಗಿ ಅಭಿನಂದಿಸಲಾಯಿತು.ಪಟ್ಟಣದ ಪ್ರವಾಸಿ ಮಂದಿರ ವೃತ್ತ ಸಮೀಪದ ನ್ಯೂ ಮಹೇಶ್ ಲಂಚ್ ಹೋಂ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಚಿವ ಚಲುವರಾಯಸ್ವಾಮಿ ಅವರಿಗೆ ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೇಶಹಳ್ಳಿ ಮೋಹನ್ ಕುಮಾರ್ ಹಸಿರು ಶಾಲು ಹೊದಿಸಿ ಮರದ ನೇಗಿಲು ನೀಡಿ ಗೌರವಿಸಿದರು.
ನಂತರ ಮಾತನಾಡಿದ ಸಚಿವರು, ಮಂಡ್ಯದಲ್ಲಿ ಕೃಷಿ ವಿಶ್ವವಿದ್ಯಾನಿಲಯ ಸ್ಥಾಪನೆಯಿಂದ ನನ್ನ ಬಹುದಿನಗಳ ಕನಸು ಸಾಕಾರಗೊಂಡಿದೆ. ವಿವಿ ಸ್ಥಾಪನೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ವಿಧಾನಮಂಡಲ ಹಾಗೂ ವಿಧಾನ ಪರಿಷತ್‌ನಲ್ಲಿ ಈ ಕುರಿತ ವಿಧೇಯಕಕ್ಕೆ ಅಂಗೀಕಾರ ಆಗುವ ಮೂಲಕ ಮಂಡ್ಯ ಜಿಲ್ಲೆ ಹಾಗೂ ಮೈಸೂರು ವಿಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ ಎಂದರು.ಕಾವೇರಿ ಜಲಾನಯನ ಪ್ರದೇಶದಲ್ಲಿ ಇರುವ ಕೃಷಿಕರ ಬದುಕು ವಿಶ್ವವಿದ್ಯಾಲಯ ಸ್ಥಾಪನೆಯಿಂದ ಕಲ್ಪವೃಕ್ಷವಾಗಬೇಕು. ಕೃಷಿ ಕೇಂದ್ರದಿಂದ ಹೊಸ ಹೊಸ ಆವಿಷ್ಕಾರಗಳನ್ನು ಕಂಡುಕೊಂಡು ಮುಂದಿನ ಪೀಳಿಗೆ ಕೃಷಿ ಕ್ಷೇತ್ರದ ಬಗ್ಗೆ ಹೆಚ್ಚಿನ ಒಲವನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೇಶ ಹಳ್ಳಿ ಮೋಹನ್ ಕುಮಾರ್ ಮಾತನಾಡಿ, ಬೆಳೆದ ಬೆಳೆಗೆ ಸೂಕ್ತ ಬೆಂಬಲ ಬೆಲೆ ಸಿಗದೆ ಕಂಗಾಲಾಗಿರುವ ರೈತರು ಕೃಷಿಯಿಂದ ವಿಮುಖರಾಗುತ್ತಿರುವ ಇಂದಿನ ದಿನಗಳಲ್ಲಿ ಸಚಿವ ಚಲುವರಾಯಸ್ವಾಮಿ ಅವರ ದೂರ ದೃಷ್ಟಿ ಫಲವಾಗಿ ಕೃಷಿ ವಿಶ್ವವಿದ್ಯಾನಿಲಯ ಸ್ಥಾಪನೆಗೊಳ್ಳುತ್ತಿರುವುದು ರೈತರ ಬದುಕಿನಲ್ಲಿ ಆಶಾ ಕಿರಣ ಮೂಡಿಸಿದೆ ಎಂದರು.ಕೃಷಿ ಕಾಲೇಜು, ಪಶುವೈದ್ಯಕೀಯ ಕಾಲೇಜು, ಡೇರಿ ಶಿಕ್ಷಣ ತರಬೇತಿ, ಹೊಸ ತಳಿಗಳ ಆವಿಷ್ಕಾರದೊಂದಿಗೆ ಕೃಷಿ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಸಂಶೋಧನೆ ನಡೆಸಲು ಇದರಿಂದ ಅವಕಾಶವಾಗಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ಈ ವೇಳೆ ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗಿ ಗೌಡ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎ.ಎಸ್.ರಾಮಕೃಷ್ಣ, ಜಿಲ್ಲಾ ಕಾಂಗ್ರೆಸ್ ವಕ್ತಾರ ಸಿ.ಎಂ.ದ್ಯಾವಪ್ಪ, ಜಿಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ಮದ್ದೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ಸಿ.ನಾಗೇಗೌಡ, ಮುಖಂಡರಾದ ಬಿ.ವಿ.ಶಂಕರೇಗೌಡ, ಯಶೋಧ, ವೀಣಾ, ದೇಶಹಳ್ಳಿ ಶಿವಣ್ಣ, ಕೋಣಸಾಲೆ ಜಯರಾಮು ಮತ್ತಿತರರು ಇದ್ದರು.