ಸಾರಾಂಶ
ಬಳ್ಳಾರಿ: ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಲಂಬಾಣಿ ಕಲೆಗಳನ್ನು ಮುಖ್ಯವಾಹಿನಿಗೆ ಪರಿಚಯಿಸಲು ಬಳ್ಳಾರಿ ವಿಶ್ವವಿದ್ಯಾಲಯದಲ್ಲಿ "ಬಂಜಾರ ಅಧ್ಯಯನ ಪೀಠ " ಆರಂಭಿಸಲಾಗುವುದು ಎಂದು ಕುಲಪತಿ ಪ್ರೊ. ಎಂ.ಮುನಿರಾಜು ತಿಳಿಸಿದರು.
ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ, ಬೆಂಗಳೂರು ಹಾಗೂ ವಿಶ್ವವಿದ್ಯಾಲಯದ ಇಂಗ್ಲಿಷ್, ಕನ್ನಡ ಮತ್ತು ಪ್ರದರ್ಶನ ಕಲೆ ನಾಟಕ ಅಧ್ಯಯನ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ “ಬಂಜಾರ ಸಾಹಿತ್ಯ ಮತ್ತು ಬದುಕು” ವಿಷಯ ಕುರಿತು ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಬಂಜಾರ ಕರಕುಶಲತೆಯನ್ನು ಪುನರುಜ್ಜೀವನಗೊಳಿಸುವ ಅಗತ್ಯವಿದೆ. ಈ ಸಮುದಾಯದ ಶ್ರೀಮಂತ ಪರಂಪರೆ ಹಾಗೂ ಸೊಗಸಾದ ಕಸೂತಿ ಕಲೆಯ ಅಧ್ಯಯನಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಅಧ್ಯಯನ ಪೀಠವನ್ನು ಸ್ಥಾಪಿಸಲಾಗುವುದು. ಈ ಮೂಲಕ ಬಂಜಾರ ಸಾಂಸ್ಕೃತಿಕ ಪರಂಪರೆಯನ್ನು ಜತನದಿಂದ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ ಎಂದು ಹೇಳಿದರು.
ಕುಲಸಚಿವ ಎಸ್.ಎನ್. ರುದ್ರೇಶ್ ಮಾತನಾಡಿ, ಬುಡಕಟ್ಟು ಜನಾಂಗಗಳ ಸಂಸ್ಕೃತಿ, ಉಪಸಂಸ್ಕೃತಿಗಳ ಪೋಷಣೆಗಾಗಿ ನಾವು ಶ್ರಮಿಸುವ ಅಗತ್ಯವಿದೆ. ಲಂಬಾಣಿ ಕಲೆಯು ಕರ್ನಾಟಕ ಮತ್ತು ಭಾರತದ ಇತರೆ ಭಾಗಗಳಲ್ಲಿ ಪ್ರಧಾನವಾಗಿ ಕಂಡು ಬರುವ ಜವಳಿ ಅಲಂಕರಣದ ಒಂದು ವಿಶಿಷ್ಟ ರೂಪವಾಗಿದೆ. ಲಂಬಾಣಿ ಕಲೆಯನ್ನು ಮುಖ್ಯವಾಹಿನಿಗೆ ತಂದು ಸಮುದಾಯದ ಜೀವನೋಪಾಯ ಮತ್ತಷ್ಟು ಉತ್ತಮಗೊಳಿಸುವ ದಿಸೆಯಲ್ಲಿ ಪ್ರಯತ್ನಗಳು ನಡೆಯಬೇಕಿವೆ ಎಂದು ಅಭಿಪ್ರಾಯಪಟ್ಟರು.ಲಂಬಾಣಿ ಜನಾಂಗದಲ್ಲಿ ಮದುವೆ ಶಾಸ್ತ್ರಗಳು ವಿಶಿಷ್ಟವಾಗಿವೆ. ಬುಡಕಟ್ಟುಗಳಲ್ಲಿ ಮುಖ್ಯ ಸಂಸ್ಕೃತಿಯ ಅಡಿ ಉಪಸಂಸ್ಕೃತಿಗಳು ಹುಟ್ಟಿಕೊಂಡಿವೆ. ಅವುಗಳನ್ನು ಸಂರಕ್ಷಿಸುವುದು ಇಂದಿನ ಅಗತ್ಯತೆಯಿದೆ. ಅದೆಷ್ಟೇ ಆಧುನಿಕತೆಯ ನಡುವೆಯೂ ಈ ಸಮುದಾಯ ತನ್ನ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿಕೊಂಡು ಬಂದಿದೆ ಎಂದು ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಸೋಮಶೇಖರ್ ತಿಳಿಸಿದರು.
ಡಾ.ಲಕ್ಷಣ ನಾಯ್ಕ್ ಬೆಳಗಲ್ಲು ಅವರು ಬಂಜಾರ ಬದುಕು, ಸಂಸ್ಕೃತಿ ಹಾಗೂ ಸಾಂಸ್ಕೃತಿಕ ಪರಂಪರೆ ಕುರಿತು ಮಾತನಾಡಿದರು. ಸುರೇಶ ನಾಯ್ಕ್ ಹಾಗೂ ಮೀಟ್ಯಾನಾಯ್ಕ್ ಎಲ್ ಅವರು ಪ್ರಬಂಧ ಮಂಡಿಸಿದರು.ಪ್ರೊ.ಎಸ್.ಶಾಂತನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಕೆ.ಎಸ್. ಶಿವಪ್ರಕಾಶ ಹಾಗೂ ಡಾ. ರಂಗನಾಥ್ ಕಾರ್ಯಕ್ರಮ ನಿರ್ವಹಿಸಿದರು. ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕ, ಬೋಧಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಇದ್ದರು.