ಭದ್ರಾ ಅಭಯಾರಣ್ಯದಲ್ಲಿ ಆನೆ ಶಿಬಿರ ಸ್ಥಾಪನೆ

| Published : Oct 05 2024, 01:36 AM IST

ಸಾರಾಂಶ

ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಭಾಗದ ಕಾಡಾನೆ ಹಾವಳಿ ನಿಯಂತ್ರಿಸಲು ಭದ್ರಾ ಅಭಯಾರಣ್ಯದಲ್ಲಿ ಆನೆ ಶಿಬಿರ ಸ್ಥಾಪಿಸುವುದಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ಘೋಷಿಸಿದರು.

- ಅರಣ್ಯ ಸಚಿವ ಈಶ್ವರ ಖಂಡ್ರೆ ಘೋಷಣೆ । ಕಾಡಾನೆ ಹಾವಳಿ ತಡೆಗೆ 2 ಸಾವಿರ ಹೆಕ್ಟೇರ್ ನಲ್ಲಿ ಆನೆ ಧಾಮ ನಿರ್ಮಾಣಕ್ಕೆ ಚಿಂತನೆ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಭಾಗದ ಕಾಡಾನೆ ಹಾವಳಿ ನಿಯಂತ್ರಿಸಲು ಭದ್ರಾ ಅಭಯಾರಣ್ಯದಲ್ಲಿ ಆನೆ ಶಿಬಿರ ಸ್ಥಾಪಿಸುವುದಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ಘೋಷಿಸಿದರು.

ಕುವೆಂಪು ವಿವಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಭದ್ರಾ ಹುಲಿ ಸಂರಕ್ಷಿತ ಪ್ರದೇಶ ರಜತ ಮಹೋತ್ಸವ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ವನ್ಯಜೀವಿ ಮತ್ತು ಮಾನವ ಸಂಘರ್ಷ ಹೆಚ್ಚಾಗಿ ಆನೆಗಳಿಂದ ಹೆಚ್ಚಿನ ಜೀವ ಮತ್ತು ಬೆಳೆ ಹಾನಿ ಸಂಭವಿಸುತ್ತಿದೆ. ಇದರ ನಿಯಂತ್ರಣಕ್ಕೆ 2 ಸಾವಿರ ಹೆ. ಪ್ರದೇಶದಲ್ಲಿ ಆನೆ ವಿಹಾರ ಧಾಮ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸುವಂತೆ ವನ್ಯಜೀವಿ ಪರಿಪಾಲಕರಿಗೆ ಸೂಚಿಸಿರುವುದಾಗಿ ಹೇಳಿದರು.

ಸುಮಾರು 5 ಸಾವಿರ ಎಕರೆ ಪ್ರದೇಶದ ಆನೆ ವಿಹಾರ ಧಾಮದಲ್ಲಿ ಆನೆಗಳಿಗೆ ಇಷ್ಟವಾದ ಬಿದಿರು, ಹಲಸು, ಹುಲ್ಲು ಇತ್ಯಾದಿ ಬೆಳೆಸಿ , ಸುತ್ತಲೂ ಬ್ಯಾರಿಕೇಡ್ ಅಳವಡಿಸಿ ಸೆರೆ ಹಿಡಿದ ಆನೆಗಳನ್ನು ತಂದು ಬಿಟ್ಟು, ಕೊಡಗು, ಹಾಸನ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಆನೆಗಳಿಂದ ಜನರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಸಾಧ್ಯ ಎಂಸಿದರು.

ಭದ್ರಾ: ಸುಭದ್ರ ಅರಣ್ಯ

ಭದ್ರಾ ಹುಲಿ ಅಭಯಾರಣ್ಯ 1000 ಚದರ ಕಿ.ಮೀ. ವಿಶಾಲವಾದ ಸುಭದ್ರ ಅರಣ್ಯ. ವಿಶ್ವ ಪಾರಂಪರಿಕ ತಾಣವಾದ ಪಶ್ಚಿಮ ಘಟ್ಟಗಳ ಶ್ರೀಮಂತ ಅರಣ್ಯ ಸಂಪತ್ತು ಒಳಗೊಂಡಿದೆ. ಕರ್ನಾಟಕದಲ್ಲಿ 563 ಹುಲಿ ಇದ್ದು ದೇಶದಲ್ಲೇ 2ನೇ ಸ್ಥಾನದಲ್ಲಿದೆ. ಅಳಿವಿನಂಚಿನಲ್ಲಿರುವ ಹುಲಿಗಳನ್ನು ರಕ್ಷಿಸಲು ಅಂದಿನ ಪ್ರಧಾನಿ ಇಂದಿರಾಗಾಂಧೀ 1973ರಲ್ಲಿ ಆರಂಭಿಸಿದ್ದ ಹುಲಿ ಯೋಜನೆಗೆ 50 ವರ್ಷ ತುಂಬಿರುವುದೂ ಸಂತೋಷದ ವಿಚಾರ ಎಂದರು.

1980ರಲ್ಲಿ ದೇಶದಲ್ಲಿ ಕೇವಲ 1,827ರಷ್ಟಿದ್ದ ಹುಲಿಗಳ ಸಂಖ್ಯೆ ಈಗ 3ಸಾವಿರ ದಾಟಿದೆ. ಇದು ದೇಶದ ಅರಣ್ಯ ಇಲಾಖೆ, ಸಿಬ್ಬಂದಿ ಪರಿಶ್ರಮದ ಫಲ . ರಾಜ್ಯದಲ್ಲೂ ಹುಲಿಗಳ ರಕ್ಷಣೆಗೆ ಕ್ರಮ ವಹಿಸಲಾಗಿದೆ. ಹಿಂದೆ ಚರ್ಮ, ಉಗುರಿಗಾಗಿ ಹುಲಿಗಳ ಬೇಟೆ ನಡೆಯುತ್ತದ್ದದ್ದನ್ನು ಮನಗಂಡು ಅರಣ್ಯ ಇಲಾಖೆ ರಾಜ್ಯದ 5 ಹುಲಿ ಸಂರಕ್ಷಿತ ಪ್ರದೇಶಗಳ 200ಕ್ಕೂ ಹೆಚ್ಚು ಕಳ್ಳಬೇಟೆ ತಡೆ ಶಿಬಿರ ನಡೆಸಿದ್ದರಿಂದ ಹುಲಿಗಳ ಸಂಖ್ಯೆ ಹೆಚ್ಚಿದೆ ಎಂದು ವಿವರಿಸಿದರು.

ನಿಸರ್ಗದತ್ತ ರಂಣೀಯ ತಾಣವಾದ ಇಲ್ಲಿ ವರ್ಷದ 365 ದಿನವೂ ನದಿ, ತೊರೆ, ಹಳ್ಳಗಳು ಹರಿಯುತ್ತವೆ. ಜಲ ಸಮೃದ್ಧಿ, ಸಸ್ಯ, ಪ್ರಾಣಿ ಕೀಟ ಸಂಕುಲದ ಅತ್ಯಮೂಲ್ಯ ಜೀವವೈಧ್ಯತೆಯೊಂದಿಗೆ ನೂರಾರು ದ ವನ್ಯಜೀವಿಗಳಿಗೆ ನೆಲೆಯಾಗಿದೆ ಎಂದರು.

ಅಂದಿನ ಮೈಸೂರು ಸರ್ಕಾರ 1951 ರಲ್ಲಿ 124 ಚದರ ಕಿ.ಮೀ ವಿಸ್ತೀರ್ಣವನ್ನು ಜಾಗರ ವ್ಯಾಲಿ ಗೇಂ ರಿಸರ್ವ್ ಎಂದು ಘೋಷಿಸಿದ್ದು, ನಂತರ 1974 ರಲ್ಲಿ 492 ಚದರ ಕಿ.ಮೀ ವ್ಯಾಪ್ತಿಗೆ ವಿಸ್ತರಿಸಿ ಭದ್ರಾ ವನ್ಯಜೀವಿ ಧಾಮವಾಗಿ ರಾಜ್ಯ ಸರ್ಕಾರ ಅಧಿಸೂಚನೆ ಮಾಡಿತು. ಈ ವನ್ಯಧಾಮವನ್ನು 1998ರಲ್ಲಿ “ಹುಲಿ ಯೋಜನೆ” ಯಡಿ ರಾಷ್ಟ್ರದ 25ನೇ ಹುಲಿ ಸಂರಕ್ಷಿತ ಪ್ರದೇಶವಾಗಿ ಘೋಷಿಸಲಾಗಿದೆ ಎಂದು ತಿಳಿಸಿದರು.

ಈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಿಂದೆ ವಾಸವಿದ್ದ 16 ಗ್ರಾಮಗಳ 736 ಕುಟುಂಬಗಳು, ಸ್ವ ಇಚ್ಛೆಯಿಂದ ಭದ್ರಾ ಪುನರ್ವಸತಿ ಯೋಜನೆಯಡಿ ಚಿಕ್ಕಮಗಳೂರು ಜಿಲ್ಲೆಯ ಕೆಳಗೂರು, ಮಳಲಿ ಚನ್ನೇನಹಳ್ಳಿ ಗ್ರಾಮಗಳಿಗೆ ಸ್ಥಳಾಂತರಗೊಂಡಿವೆ. ಇದು ದೇಶದಲ್ಲಿಯೇ ಯಶಸ್ವಿ ಪುನರ್ವಸತಿ ಯೋಜನೆ. ಇದೇ ರೀತಿ ರಾಜ್ಯದ ಇತರ ಅರಣ್ಯ ಪ್ರದೇಶದಲ್ಲಿ ವಾಸಿಸುವವರ ಮನವೊಲಿಸಿ ಪುನರ್ವಸತಿಗೆ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಚಿವರು ಭದ್ರಾ ರಜತ ಮಹೋತ್ಸವ ಸ್ಮರಣಾರ್ಥ ಅಂಚೆ ಚೀಟಿ, ಅಂತರ್ಜಾಲ ತಾಣ ಮತ್ತು ಕಿರು ಹೊತ್ತಿಗೆ ಬಿಡುಗಡೆ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕರಾದ ಬಿ.ಕೆ.ಸಂಗಮೇಶ್ವರ್, ಎಸ್.ಎನ್.ಚನ್ನಬಸಪ್ಪ, ಶಾರದಾ ಪೂರ್ಯಾ ನಾಯ್ಕ್‌, ವಿಪ ಸದಸ್ಯೆ ಬಲ್ಕಿಷ್‍ಬಾನು, ಬೋವಿನಿಗಮದ ಅಧ್ಯಕ್ಷ ರವಿಕುಮಾರ್, ಕಾಡಾ ಅಧ್ಯಕ್ಷ ಅಂಶುಮಂತ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಮಂಜು ನಾಥ ಪ್ರಸಾದ್, ಹಿರಿಯ ಅರಣ್ಯಾಧಿಕಾರಿ ಬ್ರಿಜೇಶ್‍ಕುಮಾರ್ ದೀಕ್ಷಿತ್, ಸುಭಾಸ್ ಕೆ.ಮಲ್ಕೆಡೆ, ಕುಮಾರ್ ಪುಷ್ಕರ್, ಕೆ.ಟಿ. ಹನುಮಂತಪ್ಪ, ಸೀಮಾಗಾರ್ಗ್, ಡಿ.ಸಿ. ಮೀನಾ ನಾಗರಾಜ್, ಕುವೆಂಪು ವಿವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ, ರಿಜಿಸ್ಟ್ರಾರ್ ಮಂಜುನಾಥ್ ಉಪಸ್ಥಿತರಿದ್ದರು.

--ಬಾಕ್ಸ್‌...

40 ಹುಲಿಗಳ ತಾಣ: ಭದ್ರಾ ಅರಣ್ಯವಾಸಿಗಳ ಪುನರ್ವಸತಿ ನಂತರದಲ್ಲಿ ಮಾನವ ವನ್ಯಜೀವಿ ಸಂಘರ್ಷ ಗಣನೀಯವಾಗಿ ಕಡಿಮೆಯಾಗಿದ್ದು, ಆರಂಭದಲ್ಲಿ 8 ಹುಲಿಗಳನ್ನು ಹೊಂದಿದ್ದ ಈ ಸಂರಕ್ಷಿತ ಪ್ರದೇಶದಲ್ಲಿ ಪ್ರಸ್ತುತ 40 ಹುಲಿಗಳಿವೆ. ಇದಕ್ಕೆ ಕಾರಣ ಹುಲಿಗಳ ಆವಾಸಸ್ಥಾನದ ಸಂರಕ್ಷಣೆಯೇ ಆಗಿದೆ. ಇಲ್ಲಿ ದಟ್ಟವಾದ ಕಾನನವಿದ್ದು, ಸುಮಾರು 400ಕ್ಕೂ ಅಧಿಕ ಆನೆಗಳಿವೆ ಎಂದು ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ತಿಳಿಸಿದರು,ಭದ್ರಾ ಹಲವು ಬಗೆಯ ಸಸ್ಯ ಸಂಕುಲ, ಪ್ರಾಣಿ ಸಂಕುಲ, ಕೀಟ ಸಂಕಲ ಇದೆ. ಇಲ್ಲಿ ಇರುವಷ್ಟು ಕಪ್ಪೆಗಳ ವೈವಿಧ್ಯತೆ ಮತ್ತೆಲ್ಲೂ ಕಾಣಿಸುವುದಿಲ್ಲ. ಇಲ್ಲಿ ಹಲವು ಅಪರೂಪದ ಸಸ್ಯ ಸಂಕುಲ ಇದೆ. ಇದೆಲ್ಲವನ್ನೂ ರಕ್ಷಿಸೋಣ. ಈ ಕಾರ್ಯದಲ್ಲಿ ಎಲ್ಲಾ ಜನಪ್ರತಿನಿಧಿಗಳು, ವಿವಿಧ ಇಲಾಖೆ ಅಧಿಕಾರಿಗಳು, ಸಂಘ ಸಂಸ್ಥಗಳು, ಪರಿಸರ ಪ್ರೇಮಿಗಳು, ಎಲ್ಲರೂ ಕೈಜೋಡಿಸಬೇಕು ಎಂದರು.

--

ಪೋಟೊ: 4ಎಸ್‌ಎಂಜಿಕೆಪಿ04:

ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಭದ್ರಾ ಹುಲಿ ಸಂರಕ್ಷಿತ ಪ್ರದೇಶ ರಜತ ಮಹೋತ್ಸವವನ್ನು ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಿದರು.