ನಾಗರಿಕ-ಕೇಂದ್ರಿತ ಸೇವೆಯಲ್ಲಿ ಇ-ಸೇವಾ ಕೇಂದ್ರ ಸ್ಥಾಪನೆ ಮಹತ್ವದ ಹೆಜ್ಜೆ

| Published : Sep 26 2025, 01:00 AM IST

ಸಾರಾಂಶ

ಬಳ್ಳಾರಿ ಜಿಲ್ಲೆಯ ಸಂಡೂರು ನ್ಯಾಯಾಲಯ ಮತ್ತು ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ನ್ಯಾಯಾಲಯಗಳ ಇ-ಸೇವಾ ಕೇಂದ್ರ, ಹೆಲ್ಪ್-ಡೆಸ್ಕ್, ವಿಸಿ ಕ್ಯಾಬಿನ್‌ಗಳನ್ನು ವರ್ಚುವಲ್ ಮೂಲಕ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಜಿ. ಶಾಂತಿ ಅವರು ಉದ್ಫಾಟಿಸಿದರು.

ಬಳ್ಳಾರಿ: ಇ-ಕೋರ್ಟ್ಸ್ ಮಿಷನ್ ಮೋಡ್ ಯೋಜನೆಯಡಿ ನಾಗರಿಕ-ಕೇಂದ್ರಿತ ಸೇವೆಗಳನ್ನು ಒದಗಿಸುವಲ್ಲಿ ಇ-ಸೇವಾ ಕೇಂದ್ರಗಳ ಸ್ಥಾಪನೆ ಮಹತ್ವದ ಹೆಜ್ಜೆಯಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಕೆ.ಜಿ. ಶಾಂತಿ ಅವರು ಹೇಳಿದರು.

ಬಳ್ಳಾರಿ ಜಿಲ್ಲೆಯ ಸಂಡೂರು ನ್ಯಾಯಾಲಯ ಮತ್ತು ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ನ್ಯಾಯಾಲಯಗಳ ಇ-ಸೇವಾ ಕೇಂದ್ರ, ಹೆಲ್ಪ್-ಡೆಸ್ಕ್, ವಿಸಿ ಕ್ಯಾಬಿನ್‌ಗಳನ್ನು ವರ್ಚುವಲ್ ಮೂಲಕ ಉದ್ಫಾಟಿಸಿ ಅವರು ಮಾತನಾಡಿದರು. ಇ-ಸೇವಾ ಕೇಂದ್ರಗಳ ಮೂಲಕ ದಾವೆದಾರರು, ವಕೀಲರು ಮತ್ತು ಸಾರ್ವಜನಿಕರು ಈಗ ಪ್ರಕರಣದ ಸ್ಥಿತಿಯನ್ನು ಸುಲಭವಾಗಿ ನೋಡಿ ಪ್ರಮಾಣೀಕೃತ ಪ್ರತಿಗಳನ್ನು ಪಡೆಯಬಹುದು. ಆನ್‌ಲೈನ್ ಪಾವತಿ ಮತ್ತು ಎಲೆಕ್ಟ್ರಾನಿಕ್ ರೂಪದಲ್ಲಿ ಪ್ರಕರಣಗಳನ್ನು ದಾಖಲಿಸಬಹುದು ಹಾಗೂ ವಿವಿಧ ಡಿಜಿಟಲ್ ಸೌಲಭ್ಯಗಳನ್ನು ತೊಂದರೆ-ಮುಕ್ತ ರೀತಿಯಲ್ಲಿ ಪಡೆಯಬಹುದು ಎಂದು ಹೇಳಿದರು.

ಇ-ಸೇವಾ ಕೇಂದ್ರಗಳು ನ್ಯಾಯಾಲಯದ ಸೇವೆಗಳನ್ನು ಹೆಚ್ಚು ಸುಲಭವಾಗಿ, ಕೈಗಟುಕುವ ಮತ್ತು ಬಳಕೆದಾರ ಸ್ನೇಹಿಯನ್ನಾಗಿ ಮಾಡುವ ಮೂಲಕ ದಾವೆ ಹೂಡುವವರಿಗೆ, ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನರಿಗೆ ಪ್ರಯೋಜನ ನೀಡುತ್ತವೆ ಎಂದರು.

ತ್ವರಿತ ಮತ್ತು ಪಾರದರ್ಶಕ ನ್ಯಾಯ ವಿತರಣೆ ಖಚಿತಪಡಿಸಿಕೊಳ್ಳುವಲ್ಲಿ ತಂತ್ರಜ್ಞಾನ-ಸಕ್ರಿಯಗೊಳಿಸಿದ ಸೇವೆಗಳ ಮಹತ್ವವನ್ನು ನ್ಯಾಯಾಧೀಶರು ವಿವರಿಸಿದರು.

ಹಗರಿಬೊಮ್ಮನಹಳ್ಳಿ ಮತ್ತು ಸಂಡೂರು ನ್ಯಾಯಾಲಯದ ನ್ಯಾಯಾಂಗ ಅಧಿಕಾರಿಗಳು, ವಕೀಲರ ಸಂಘದ ಸದಸ್ಯರು, ನ್ಯಾಯಾಲಯದ ಸಿಬ್ಬಂದಿ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.