ಸಾರಾಂಶ
ಶೈಕ್ಷಣಿಕ ಸಂಶೋಧನೆ ಮತ್ತು ಅಧ್ಯಯನಗಳಿಗೆ ಉತ್ತೇಜನ ನೀಡುವ ಜತೆಗೆ, ಅವುಗಳನ್ನು ಸಂರಕ್ಷಿಸುವುದು ಕೂಡ ಈ ಬೌದ್ಧಿಕ ಆಸ್ತಿ ಹಕ್ಕುಗಳ ಕೋಶ ಸ್ಥಾಪನೆಯ ಉದ್ದೇಶವಾಗಿದೆ ಎಂದು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ವಿಷ್ಣುವರ್ಧನ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಶೈಕ್ಷಣಿಕ ಸಂಶೋಧನೆ ಮತ್ತು ಅಧ್ಯಯನಗಳಿಗೆ ಉತ್ತೇಜನ ನೀಡುವ ಜತೆಗೆ, ಅವುಗಳನ್ನು ಸಂರಕ್ಷಿಸುವುದು ಕೂಡ ಈ ಬೌದ್ಧಿಕ ಆಸ್ತಿ ಹಕ್ಕುಗಳ ಕೋಶ ಸ್ಥಾಪನೆಯ ಉದ್ದೇಶವಾಗಿದೆ ಎಂದು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ವಿಷ್ಣುವರ್ಧನ್ ತಿಳಿಸಿದರು.ಬಾಗಲಕೋಟೆಯಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೌದ್ಧಿಕ ಆಸ್ತಿ ಹಕ್ಕುಗಳ ಕೋಶವನ್ನು ಸಂಶೋಧನಾ ನಿರ್ದೇಶನಾಲಯ ಅಡಿಯಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಸಹಯೋಗದಲ್ಲಿ ಸ್ಥಾಪಿಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಬೌದ್ಧಿಕ ಆಸ್ತಿ ಹಕ್ಕುಗಳ ಕೋಶದಡಿ ವಿವಿಯ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಪ್ರಾಧ್ಯಾಪಕರಿಗೆ ತಮ್ಮ ಆವಿಷ್ಕಾರ, ಸಂಶೋಧನೆ ರಕ್ಷಿಸುವ ಕುರಿತು ಮಾರ್ಗದರ್ಶನ ನೀಡಲಾಗುವುದು. ಹೊಸ ಆವಿಷ್ಕಾರ, ಸಂಶೋಧನೆಗೆ ಪೇಟೆಂಟ್, ಹಕ್ಕು ಸ್ವಾಮ್ಯ (ಕಾಪಿರೈಟ್) ಟ್ರೇಡ್ ಸೀಕ್ರೆಟ್ಸ್, ಟ್ರೇಡ್ ಮಾರ್ಕ್ ಪಡೆಯಲು ಸಹಕಾರ ನೀಡಲಾಗುವುದು ಎಂದು ಹೇಳಿದರು.ವಿವಿಯಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳ ಕೋಶ ಪ್ರಾಮುಖ್ಯತೆ ಹೊಂದಿದ್ದು. ಮುಂದಿನ ದಿನಗಳಲ್ಲಿ ನಮ್ಮ ತೋಟಗಾರಿಕೆ ಬೆಳೆಗಳಲ್ಲಿ ಬೌದ್ಧಿಕ ಹಕ್ಕುಗಳ ಸಂರಕ್ಷಣೆಗೆ ತುಂಬಾ ಸಹಕಾರಿ ಆಗಲಿ ಎಂದು ಹೇಳಿದರು.
ಸಂಶೋಧನೆ ಮತ್ತು ಅಧ್ಯಯನಗಳಿಗೆ ಉತ್ತೇಜನ ನೀಡಲು, ಈ ಸಂಬಂಧ ಕ.ರಾ.ವಿ.ತಂ.ಮ, ಬೆಂಗಳೂರು ಅಧಿಕಾರಿಗಳೊಂದಿಗೆ ಪರಸ್ಪರ ಒಡಂಬಡಿಕೆಗೆ ಸಹಿ ಹಾಕಲಾಯಿತು.ಸಂಶೋಧನಾ ನಿರ್ದೇಶಕ ಡಾ.ಬಿ.ಫಕ್ರುದ್ದಿನ್ ಸ್ವಾಗತಿಸಿ, ಕೋಶದ ಉದ್ದೇಶಗಳು ಹಾಗೂ ಅನುಕುಲತೆ ವಿವರಿಸಿದರು.
ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಯು.ಟಿ.ವಿಜಯ, ಅವರು ಕಾರ್ಯ ಚಟುವಟಿಕೆ ವಿವರಿಸಿ ಮುಂದಿನ ದಿನಗಳಲ್ಲಿ ತೋವಿವಿ ಕಾರ್ಯ ಚಟುವಟಿಕೆಗಳಲ್ಲಿ ಇನ್ನಷ್ಟು ಕೊಡುಗೆ ಕೊಡುವಲ್ಲಿ ಸಹಕರಿಸುತ್ತೇವೆ ಎಂದು ಭರವಸೆ ನೀಡಿದರು.ಇಂಡಿ ಲಿಂಬೆ ಮಂಡಳಿ ಸಹಕಾರದಿಂದ ಪಡೆದ, ಜಿಐ ಮಾನ್ಯತೆ ಪಡೆದ ಇಂಡಿ ಲಿಂಬೆ ಅಧಿಕೃತ ಬೆಳೆಗಾರರ ಮಾಹಿತಿಯನ್ನು ಹಸ್ತಾಂತರಿಸಲಾಯಿತು. ವೀನಿತ್ ಕುಮಾರ್ ಹಾಗೂ ಡಾ.ನಂದಿನಿ ದೋಲೆಪತ, ಇವರು ಬೌದ್ಧಿಕ ಆಸ್ತಿ ಹಕ್ಕುಗಳ ಕೋಶದ ಕುರಿತು ಉಪನ್ಯಾಸ ನೀಡಿದರು.
ಶಿಕ್ಷಣ ನಿರ್ದೇಶಕ ಡಾ.ಎನ್.ಕೆ. ಹೆಗಡೆ, ಮತ್ತು ತೋವಿವಿಯ ಅಧಿಕಾರಿಗಳು, ತೋಟಗಾರಿಕೆ ಮಹಾವಿದ್ಯಾಲಯ ಡೀನ್‌ಗಳು ಹಾಗೂ ಇತರೆ ವಿಜ್ಞಾನಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಾಧ್ಯಪಕರಾದ ಡಾ.ಮಹಾಂತೇಶ ನಾಯಕ, ಬಿ.ಎನ್. ಸಹಾಯಕ ನಿರೂಪಿಸಿದರು. ಸಹಪ್ರಾಧ್ಯಾಪಕ ಡಾ.ಶಂಕ್ರಪ್ಪ ಕೆ.ಎಸ್. ವಂದಿಸಿದರು.