ಜಿಲ್ಲೆಯಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ಸ್ಥಾಪನೆ

| Published : Jul 15 2024, 01:47 AM IST

ಜಿಲ್ಲೆಯಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ಸ್ಥಾಪನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೈಗಾರಿಕೆಗಳನ್ನು ಇಲ್ಲಿ ಸ್ಥಾಪಿಸಿದರೆ ಆ ಕಂಪನಿಗಳಿಗೆ ಅಗತ್ಯವಾದ ಕೌಶಲ ಇರುವ ಯುವಕರ ಕೊರತೆ ನೆಪವೊಡ್ಡಿ ಹೊರಗಿನವರು ಬಂದು ಉದ್ಯೋಗ ಪಡೆದುಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸುಸಜ್ಜಿತ ಕೌಶಲ ಅಭಿವೃದ್ಧಿ ತರಬೇತಿ ಕೇಂದ್ರ ಸ್ಥಾಪಿಸುವ ಅಗತ್ಯವಿದೆ.

ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಯ ಕೆಜಿಎಫ್ ಸೇರಿದಂತೆ ಎಲ್ಲ ತಾಲೂಕುಗಳಲ್ಲೂ ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯವಾದ ಜಮೀನು ಮತ್ತು ಮಾನವ ಸಂಪನ್ಮೂಲ ಹೇರಳವಾಗಿದ್ದರೂ, ಉದ್ಯೋಗಿಗಳಾಗಲು ಅಗತ್ಯವಾದ ಕೌಶಲದ ಕೊರತೆ ಇದೆ. ಆದ್ದರಿಂದ ಜಿಲ್ಲೆಯಲ್ಲಿ ಸುಸಜ್ಜಿತ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ತೆರೆಯುವ ಅಗತ್ಯವಿದ್ದು, ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವುದಾಗಿ ನೂತನ ಸಂಸದ ಎಂ.ಮಲ್ಲೇಶಬಾಬು ಭರವಸೆ ನೀಡಿದರು.ನಗರದ ಗೋಲ್ಡ್‌ಫೀಲ್ಡ್ ಸೌಹಾರ್ದ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ವತಿಯಿಂದ ನೂತನ ಸಂಸದ ಹಾಗೂ ಸದರಿ ಸೊಸೈಟಿ ನಿರ್ದೇಶಕರೂ ಆಗಿರುವ ಅವರಿಗೆ ನೀಡಲಾದ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಸ್ಥಳೀಯರಿಗೆ ಕೌಶಲ ಕೊರತೆ

ಮುಂದಾಲೋಚನೆ ಇಲ್ಲದೇ ಮೊದಲೇ ಕೈಗಾರಿಕೆಗಳನ್ನು ಇಲ್ಲಿ ಸ್ಥಾಪಿಸಿದರೆ ಆ ಕಂಪನಿಗಳಿಗೆ ಅಗತ್ಯವಾದ ಕೌಶಲ ಇರುವ ಯುವಕರ ಕೊರತೆ ನೆಪವೊಡ್ಡಿ ಹೊರಗಿನವರು ಬಂದು ಉದ್ಯೋಗ ಪಡೆದುಕೊಳ್ಳುತ್ತಾರೆ ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸುಸಜ್ಜಿತ ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರ ಅತಿ ಶೀಘ್ರ ಸ್ಥಾಪಿಸಬೇಕು ಎಂಬುದು ತಮ್ಮ ಗುರಿಯಾಗಿದೆ ಎಂದರು.ಐಟಿಐ, ಡಿಪ್ಲೊಮೊ ಮತ್ತಿತರ ಕೋರ್ಸ್ ಓದಿದ್ದರೂ, ಓದಿರೋದೊಂದು ಮಾಡುತ್ತಿರುವ ಕೆಲಸ ಬೇರೊಂದು ಎಂಬುದನ್ನು ಕಾಣುತ್ತಿದ್ದೇವೆ, ಸ್ಥಳೀಯ ಯುವಕರಿಗೆ ಕೈಗಾರಿಕೆಗಳಿಗೆ ಅಗತ್ಯವಾದ ಕೌಶಲ್ಯವನ್ನು ಕಲಿಸಿಕೊಟ್ಟರೆ ಉದ್ಯಮಿಗಳವರು ನಮ್ಮ ಯುವಕರನ್ನು ಉದ್ಯೋಗದಿಂದ ವಂಚಿಸಲು ಕಷ್ಟವಾಗುತ್ತದೆ. ಆದ್ದರಿಂದ ಕೌಶಲ್ಯಾಭಿವೃದ್ದಿ ತರಬೇತಿ ಕೇಂದ್ರ ಸ್ಥಾಪನೆಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವುದಾಗಿ ತಿಳಿಸಿದರು.ಕೈಗಾರಿಕೆ ಸ್ಥಾಪನೆಗೆ ಸೌಲಭ್ಯ ಅಗತ್ಯ

ಕೆಜಿಎಫ್‌ ನಗರದಲ್ಲಿ ಸೌಲಭ್ಯಗಳ ಕೊರತೆ ಇದೆ, ಹಿಂದೆ ಅಲಂಗೂರು ಶ್ರೀನಿವಾಸ್ ಸಚಿವರಾಗಿದ್ದಾಗ ವಿಶೇಷ ಸ್ಥಾನಮಾನ ನೀಡಿ ಪ್ರತಿವರ್ಷ ೨೦ ಕೋಟಿ ರು.ಗಳನ್ನು ನಗರದ ಅಭಿವೃದ್ಧಿಗೆ ನೀಡುವಂತೆ ಮಾಡಿದ್ದರು. ಆದರೆ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗಿಲ್ಲ. ಕೈಗಾರಿಕೆಗಳು ಇಲ್ಲಿಗೆ ಬರಲು ಉದ್ಯಮಿಗಳಿಗೆ ಅಗತ್ಯವಾದ ವಾತಾವರಣ ಸೃಷ್ಟಿಯೂ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.ಜಿಲ್ಲೆಯಲ್ಲಿ ಉಳ್ಳವರಿಗೆ ಕೊರತೆ ಇಲ್ಲ, ಇಲ್ಲಿ ಮಾವು ಹಾಗೂ ಟೊಮೆಟೋ ಮತ್ತು ಆಹಾರ ಸಂಸ್ಕರಣಾ ಘಟಕ ಸ್ಥಾಪಿಸಲು ಮುಂದೆ ಬಂದರೆ ಕೇಂದ್ರ ಸರ್ಕಾರದಿಂದ ಸಿಗುವ ಸಹಾಯಧನ ಕೊಡಿಸಲಾಗುವುದು. ಅಲ್ಲದೆ ಸಹಕಾರಿ ರಂಗದ ಅಭಿವೃದ್ಧಿಗೂ ಕೈಜೋಡಿಸುವ ಭರವಸೆ ನೀಡಿದರು.

ಸಂಸದರಿಗೆ ಇಚ್ಛಾಶಕ್ತಿ ಇದೆ

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ಗೋಲ್ಡ್‌ಫೀಲ್ಡ್ ಸೌಹಾರ್ದ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಅಧ್ಯಕ್ಷ ಕೆ.ಬಿ. ಗೋಪಾಲಕೃಷ್ಣ ಮಾತನಾಡಿ, ನಮ್ಮ ಸಂಸ್ಥೆಯ ನಿರ್ದೇಶಕರು ಸಂಸದರಾಗಿದ್ದಾರೆ ಎಂಬ ಹೆಮ್ಮೆ ಇದೆ, ಬೇರೆ ರಾಜಕಾರಣಿಗಳಂತೆ ಮಲ್ಲೇಶಬಾಬು ಅಲ್ಲ, ಅವರಲ್ಲಿ ಬದ್ಧತೆ, ಜನಪರ ಕೆಲಸ ಮಾಡುವ ಇಚ್ಛಾಶಕ್ತಿ ಇದೆ ಎಂದು ತಿಳಿಸಿದರು.ಕೋಲಾರ ಜಿಲ್ಲೆಯಲ್ಲಿ ಕನಿಷ್ಠ ೧೦ ಸಾವಿರ ಯುವಕರಿಗೆ ಉದ್ಯೋಗ ಸಿಗುವ ಬೃಹತ್ ಕೈಗಾರಿಕೆಗಳನ್ನು ತರುವ ಕೆಲಸವನ್ನು ಮಲ್ಲೇಶಬಾಬು ಮಾಡಲಿ. ಜಿಲ್ಲೆಯ ರೈಲ್ವೆ,ಹೆದ್ದಾರಿ ಅಭಿವೃದ್ಧಿಗೂ ಶ್ರಮಿಸಲಿದ್ದು, ಅವರಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ನೆರವು ಸಿಗುತ್ತದೆ ಎಂದರು.ಜಿಲ್ಲೆಯ ಅಭಿವೃದ್ಧಿಯ ಕನಸು

ಉಪಾಧ್ಯಕ್ಷ ಪ್ರೊ.ವಿ. ಶ್ರೀರಾಮ ಸ್ವಾಗತಿಸಿ, ಕೋಲಾರ ಜಿಲ್ಲೆಯ ಅಭಿವೃದ್ಧಿಯ ಕನಸು ಹೊಂದಿರುವ ಮಲ್ಲೇಶಬಾಬು ಸಂಸದರಾಗಿರುವುದು ಹೆಮ್ಮೆಯ ವಿಷಯವಾಗಿದೆ, ಅವರ ಅಭಿವೃದ್ಧಿ ಪರ ಚಿಂತನೆ ಹಾಗೂ ಪ್ರಯತ್ನಕ್ಕೆ ಕೇಂದ್ರ ಸಚಿವರಾದ ಕುಮಾರಣ್ಣ ನೆರಳಾಗಿದ್ದು, ಜಿಲ್ಲೆಯ ಅಭಿವೃದ್ಧಿಗೆ ಸಾಕಾರವಾಗಲಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ಮಾಜಿ ಅಧ್ಯಕ್ಷ ಮೂರಾಂಡಹಳ್ಳಿ ಡಾ.ಇ. ಗೋಪಾಲಪ್ಪ, ವಕೀಲ ಅಮರೇಂದ್ರ, ಸೊಸೈಟಿಯ ಕಾನೂನು ಸಲಹೆಗಾರ ಎಂ.ರಾಮಲಿಂಗೇಗೌಡ, ನಿರ್ದೇಶಕರಾದ ಡಿ. ನಾಗರಾಜಪ್ಪ, ಎ.ಎಸ್. ನಂಜುಂಡಗೌಡ, ಎಸ್.ಎ. ನಾರಾಯಣಸ್ವಾಮಿ, ಸಿ. ನಾಗರಾಜ, ಸರ್ತಾಜ್‌ಸಾಬಿ, ಎನ್. ರಂಗಯ್ಯ, ಕೆ.ಎನ್. ವೆಂಕಟರವಣಪ್ಪ, ಎಸ್.ವಿ. ನಾರಾಯಣರೆಡ್ಡಿ, ಎಂ. ಲೋಕೇಶಮೂರ್ತಿ, ಸೊಸೈಟಿ ಸಿಇಒ ಡಿ.ಎಂ. ಶ್ರೀಕಾಂತ, ಮೇಲ್ವಿಚಾರಕ ವಿ.ನಾರಾಯಣಸ್ವಾಮಿ ಇದ್ದರು.