ಮತಗಟ್ಟೆಯಲ್ಲಿ ಮತದಾರರ ಸೇವಾ ಕೇಂದ್ರ ಸ್ಥಾಪನೆ: ತುಷಾರ್‌ ಗಿರಿನಾಥ್‌

| Published : Apr 17 2024, 02:03 AM IST

ಮತಗಟ್ಟೆಯಲ್ಲಿ ಮತದಾರರ ಸೇವಾ ಕೇಂದ್ರ ಸ್ಥಾಪನೆ: ತುಷಾರ್‌ ಗಿರಿನಾಥ್‌
Share this Article
  • FB
  • TW
  • Linkdin
  • Email

ಸಾರಾಂಶ

ಮೂರಕ್ಕಿಂತ ಹೆಚ್ಚಿನ ಮತಗಟ್ಟೆ ಇರುವ ಕಡೆ ಮತದಾರರಿಗೆ ಅಗತ್ಯ ಸಲಹೆ ಸೂಚನೆ, ಮಾರ್ಗದರ್ಶನ ನೀಡಲು ಮತದಾರರ ಸೇವಾ ಕೇಂದ್ರ ಆರಂಭಿಸಲು ಬೆಂಗಳೂರು ಜಿಲ್ಲಾ ಚುನಾವಣಾ ವಿಭಾಗ ಮುಂದಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮೂರಕ್ಕಿಂತ ಹೆಚ್ಚಿನ ಮತಗಟ್ಟೆ ಇರುವ ಕಡೆ ಮತದಾರರಿಗೆ ಅಗತ್ಯ ಸಲಹೆ ಸೂಚನೆ, ಮಾರ್ಗದರ್ಶನ ನೀಡಲು ಮತದಾರರ ಸೇವಾ ಕೇಂದ್ರ ಆರಂಭಿಸಲು ಬೆಂಗಳೂರು ಜಿಲ್ಲಾ ಚುನಾವಣಾ ವಿಭಾಗ ಮುಂದಾಗಿದೆ.

ಅಧಿಕಾರಿಗಳೊಂದಿಗೆ ಮಂಗಳವಾರ ಸಭೆ ನಡೆಸಿ ಮಾತನಾಡಿದ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್‌, ನಗರದಲ್ಲಿ ಮೂರು ಹಾಗೂ ಅದಕ್ಕಿಂತ ಹೆಚ್ಚು ಮತಗಟ್ಟೆಗಳು ಒಂದೇ ಆವರಣದಲ್ಲಿ ಇರುವ 1,409 ಕಡೆ ಮತದಾನಕ್ಕೆ ಆಗಮಿಸುವ ಮತದಾರರಿಗೆ ಯಾವ ಬೂತ್‌ನಲ್ಲಿ ಮತದಾನ ಮಾಡಬೇಕು. ಮತದಾರ ಗುರುತಿನ ಚೀಟಿ ವಿತರಣೆ ಮಾಡುವುದು ಸೇರಿದಂತೆ ಅಗತ್ಯ ಸಲಹೆ ಸೂಚನೆ, ಮಾರ್ಗದರ್ಶನ ನೀಡಲು ಮತದಾರರ ಸೇವಾ ಕೇಂದ್ರ ಆರಂಭಿಸಲು ಸೂಚಿಸಿದ್ದಾರೆ.

ಜತೆಗೆ ಮಾದರಿ ನಕ್ಷೆ ರೂಪಿಸಿಕೊಂಡು ಮತಗಟ್ಟೆ ಸ್ಥಳದಲ್ಲಿ ಏನೆಲ್ಲಾ ವ್ಯವಸ್ಥೆಯಿದೆ ಎಂಬ ಸಂಪೂರ್ಣ ವಿವರಗಳ್ಳ ನಿರ್ದೇಶನ ಫಲಕಗಳನ್ನು ಅಳವಡಿಸಬೇಕು. ಮತದಾರರ ಸಹಾಯಕ್ಕಾಗಿ ಸ್ವಯಂ ಸೇವಕರನ್ನು ನಿಯೋಜಿಸಬೇಕು. ಮತಗಟ್ಟೆಗಳ ಸ್ಥಳದಲ್ಲಿ ಪಾರ್ಕಿಂಗ್ ಸೂಚನಾ ಫಲಕ ಅಳವಡಿಸಿ, ಎಷ್ಟು ವಾಹನಗಳನ್ನು ನಿಲ್ಲಿಸಬಹುದು ಎಂಬುದರ ಮಾಹಿತಿ ನೀಡಬೇಕು. ವಾಹನಗಳು ಸರಿಯಾದ ಕ್ರಮದಲ್ಲಿ ನಿಲುಗಡೆ ಮಾಡಲು ವ್ಯವಸ್ಥೆ ಮಾಡಬೇಕು ಎಂದರು.

ವಿವಿಧ ಮಾದರಿ ಮತಗಟ್ಟೆ

ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಸಾಮಾನ್ಯ ಮತಗಟ್ಟೆಗಳ ಜತೆಗೆ ಸಖಿ(ಪಿಂಕ್) ಮತಗಟ್ಟೆ, ಯೂತ್ ಮತಗಟ್ಟೆ, ಥೀಮ್ ಆಧಾರಿತ ಮತಗಟ್ಟೆ, ವಿಶೇಷ ಚೇತನರ ಮತಗಟ್ಟೆ ಮಾದರಿಯ ಮತಗಟ್ಟೆಗಳನ್ನು ಅನುಷ್ಠಾನಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಅಂಗವಿಕರಿಗೆ ಮತದಾನ ಮಾಡಲು ಗಾಲಿ ಕುರ್ಚಿಗಳ ವ್ಯವಸ್ಥೆ ಮಾಡಿಕೊಳ್ಳಬೇಕು. ಮುಂಜಾಗ್ರತಾ ಕ್ರಮವಾಗಿ ಎಲ್ಲ ಮತಗಟ್ಟೆಗಳಲ್ಲಿ ಮೆಡಿಕಲ್ ಕಿಟ್ ವ್ಯವಸ್ಥೆ, ತುರ್ತು ಕ್ರಮಕ್ಕಾಗಿ ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಂಡಿರಬೇಕು ಎಂದು ತಿಳಿಸಿದರು.

ಚುನಾವಣಾ ವಿಭಾಗದ ವಿಶೇಷ ಆಯುಕ್ತ ಸೆಲ್ವಮಣಿ, ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರೋಳ್ಕರ್ ವಿಕಾಸ್ ಕಿಶೋರ್, ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಕಾಂತರಾಜು, ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಪ್ರತಿಭಾ, ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರಹ್ಲಾದ್‌ ಉಪಸ್ಥಿತರಿದ್ದರು.