ಸಾರಾಂಶ
ವಿರಾಜಪೇಟೆ ಅರಣ್ಯ ಇಲಾಖೆ ಇಟಿಎಫ್ ಸಿಬ್ಬಂದಿ ಮುರುಗನ್ ಕಾಡಾನೆ ದಾಳಿಯಿಂದ ಪಾರಾಗಲು ಯತ್ನಿಸಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿದ್ದಾಪುರ ಪುಲಿಯೇರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಕನ್ನಡಪ್ರಭವಾರ್ತೆ ವಿರಾಜಪೇಟೆ
ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಸಿಬ್ಬಂದಿ ಗಾಯಗೊಂಡ ಘಟನೆ ಸಿದ್ದಾಪುರ ಪುಲಿಯೇರಿ ಗ್ರಾಮದಲ್ಲಿ ನಡೆದಿದೆ.ವಿರಾಜಪೇಟೆ ಅರಣ್ಯ ಇಲಾಖೆಯ ಇ.ಟಿ.ಎಫ್ ಸಿಬ್ಬಂದಿ ಮುರುಗನ್ ಕಾಡಾನೆ ದಾಳಿಯಿಂದ ಪಾರಾಗಲು ಯತ್ನಿಸಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ವ್ಯಕ್ತಿ.
ಘಟನೆಯ ವಿವರ: ವಿರಾಜಪೇಟೆ ಸಿದ್ದಾಪುರ ಪುಲಿಯೇರಿ ಗ್ರಾಮದ ಕಾಫಿ ತೋಟಗಳಲ್ಲಿ ಕಾಡಾನೆಗಳ ಹಿಂಡು ಒಂದು ಬೀಡುಬಿಟ್ಟು ದಾಂದಲೆ ನಡೆಸಿ ಅಪಾರ ಪ್ರಮಾಣದಲ್ಲಿ ಕಾಫಿ ತೋಟಗಳನ್ನು ನಾಶ ಪಡಿಸಿದ ಹಿನ್ನೆಲೆಯಲ್ಲಿ ಕಾರ್ಮಿಕರು ಮತ್ತು ಕಾಫಿ ಬೆಳೆಗಾರರು ಗ್ರಾಮಸ್ಥರು ಆತಂಕದಿಂದ ದಿನದೂಡುವ ಪರಿಸ್ಥಿತಿ ಎದುರಾಗಿತ್ತು. ಈ ನಿಟ್ಟಿನಲ್ಲಿ ಕಾರ್ಯಾಚರಣೆ ಮೂಲಕ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ ಕಾಡಾನೆಗಳನ್ನು ಕಾರ್ಯಾಚರಣೆ ಮೂಲಕ ಕಾಡಿಗೆ ಅಟ್ಟಿ ಎಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು ಎನ್ನಲಾಗಿದೆ. ಅರಣ್ಯ ಇಲಾಖೆಯು ತನ್ನ ಆನೆ ಕಾರ್ಯಪಡೆ ಅಮ್ಮತ್ತಿ ವಿರಾಜಪೇಟೆ ವಲಯದ ಎ.ಟಿ.ಎಫ್ ತಂಡ ಮತ್ತು ಆರ್.ಆರ್.ಟಿ ತಂಡದ ಜಂಟಿ ಕಾರ್ಯಚರಣೆಯನ್ನು ಸಿದ್ದಾಪುರ ಪುಲಿಯೇರಿ ಗ್ರಾಮದಲ್ಲಿ ಕಾಡಾನೆ ಕಾರ್ಯಾಚರಣೆ ಸತತ ಮೂರು ದಿನಗಳಿಂದ ಹಮ್ಮಿಕೊಂಡಿತ್ತು. ಇಂದು ಪುಲಿಯೇರಿ ಗ್ರಾಮದ ನಿವಾಸಿ ಮಂಡೇಪಂಡ ಪ್ರವೀಣ್ ಅವರ ತೋಟದಲ್ಲಿ ಕಾಡಾನೆ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಸುಮಾರು ಸಂಜೆ 4.30 ರ ವೇಳೆಯಲ್ಲಿ ಕಾಡಾನೆಗಳ ಹಿಂಡು ಒಂದರಿಂದ ಬೇರ್ಪಟ್ಟ ಕಾಡಾನೆ ಒಂದು ಏಕಾಎಕಿಯಾಗಿ ಸಿಬ್ಬಂದಿ ಮೇಲೆ ದಾಳಿಗೆ ಮುಂದಾಗಿತ್ತು. ಈ ಸಂದರ್ಭ ದಾಳಿಯಿಂದ ಪಾರಾಗಲು ಯತ್ನಿಸಿ ವೇಳೆಯಲ್ಲಿ ಇ.ಟಿ.ಎಫ್ ಸಿಬ್ಬಂದಿ ಮುರುಗನ್ ಗಾಯಗೊಂಡರು. ಪರಿಣಾಮ ಸಿಬ್ಬಂದಿ ತೊಡೆಯ ಭಾಗ ಮತ್ತು ಬಲಗಾಲಿಗೆ ಗಾಯಗಳಾಗಿದ್ದು ಎದ್ದು ನಡೆದಾಡಲು ಕಷ್ಪಸಾಧ್ಯವಾಯಿತು. ತಕ್ಷಣವೇ ಗಾಯಾಳುವನ್ನು ಸಿದ್ದಾಪುರ ಸಮುದಾಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ವಿರಾಜಪೇಟೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.ಈ ಸಂದರ್ಭದಲ್ಲಿ ಆನೆಕಾರ್ಯಪಡೆಯ ಉಪ ವಲಯ ಅರಣ್ಯಾಧಿಕಾರಿಗಳಾದ ಪ್ರವೀಣ್ ಕುಮಾರ್, ಗಸ್ತು ಅರಣ್ಯ ಪಾಲಕರಾದ ನಾಗರಾಜ್ ರಡರಟ್ಟಿ, ಅರುಣ್ ಕುಮಾರ್, ಚಾಲಕ ಪೊನ್ನಪ್ಪ ಅವರು ಹಾಜರಿದ್ದರು.