ಸಾರಾಂಶ
ಹೊಸಕೋಟೆ: ಬಹುನಿರೀಕ್ಷಿತ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಏತ ನೀರಾವರಿ ಕಾಮಗಾರಿಗಳ ಪರೀಕ್ಷಾರ್ಥ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಶೀಘ್ರದಲ್ಲೇ ಈ ಯೋಜನೆಎ ಉದ್ಘಾಟನೆ ಕಾಣಲಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ 2027ಕ್ಕೆ ನೀರು ಲಭ್ಯವಾಗಲಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಆಗಸ್ಟ್ 28ರಂದು ಹಾಸನ ಜಿಲ್ಲೆ ಸಕಲೇಶಪುರದ ಕೆಸವನಹಳ್ಳಿ ಗ್ರಾಮದ ಕುಂಬರಡಿ ಕಾಫಿ ಎಸ್ಟೇಟ್ ಬಳಿ ಎತ್ತಿನಹೊಳೆ ಯೋಜನೆಯ ಪರೀಕ್ಷಾರ್ಥ ನೀರು ಹರಿಸುವ ಕಾರ್ಯಚರಣೆಯನ್ನು ಡಿಸಿಎಂ ಡಿಕೆ ಶಿವಕುಮಾರ್ ಅವರ ಜೊತೆ ತೆರಳಿ ಪರಿಶೀಲನೆ ನಡೆಸಿದ್ದೇವೆ. ಒಟ್ಟು ೮ ಹಳ್ಳಗಳ ಪೈಕಿ ಈಗಾಗಲೆ 5 ಹಳ್ಳಗಳಿಗೆ ಚಾಲನೆ ನೀಡಲಾಗಿದೆ.
1500 ಕ್ಯೂಸೆಕ್ಸ್ ನೀರನ್ನು ಮೇಲಕ್ಕೆ ಎತ್ತಲಾಗಿದೆ. ಆ ನೀರು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನವರೆಗೆ ಹರಿದು ಬರಲಿದ್ದು, ಗ್ರಾಮಾಂತರ ಜಿಲ್ಲೆಗೆ ನೀರು ಹರಿಸಲು ಇನ್ನು ಒಂದು ವರ್ಷ ಬೇಕಾಗುತ್ತದೆ. ತಾಲೂಕಿನ ಕೆರೆಗಳಿಗೆ ಹರಿಸಲು ಬೇಕಾದ 1 ಟಿಎಂಸಿ ನೀರಿಗಾಗಿ ವಡ್ಡಹಳ್ಳಿ ಬಳಿ ಶೇಖರಣಾ ಘಟಕ ನಿರ್ಮಿಸಲಾಗುವುದು. ಒಟ್ಟಾರೆಯಾಗಿ ನೆನೆಗುದಿಗೆ ಬಿದ್ದಿದ್ದ ಎತ್ತಿನಹೊಳೆ ಯೋಜನೆಗೆ ಡಿಸಿಎಂ ಡಿಕೆ.ಶಿವಕುಮಾರ್ ಹಾಗು ನೀರಾವರಿ ಸಚಿವರು ಅಗತ್ಯ ಅನುದಾನ ಕೊಟ್ಟು ಕಾಮಗಾರಿಯನ್ನು ಮುಕ್ತಯ ಹಂತಕ್ಕೆ ತಂದಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸುತ್ತೇನೆ ಎಂದರು.
ಈ ಯೋಜನೆಯಿಂದ 24.01 ಟಿಎಂಸಿ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರು ಸೇರಿದಂತೆ ಒಟ್ಟು 7 ಜಿಲ್ಲೆಗಳಲ್ಲಿ ಕುಡಿಯಲು ನೀರು ಪೂರೈಸಲಾಗುವುದು. ಬರಪೀಡಿತ 29 ತಾಲೂಕಿನ 38 ಪಟ್ಟಣ ಹಾಗೂ 6657 ಗ್ರಾಮಗಳ ಸುಮಾರು 75.59 ಲಕ್ಷ ಜನರು ಮತ್ತು ಜಾನುವಾರುಗಳಿಗೆ 14.056 ಟಿಎಂಸಿ ನೀರನ್ನು ಒದಗಿಸಲಾಗುವುದು. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಹಾಸನ ಮತ್ತು ತುಮಕೂರು ವ್ಯಾಪ್ತಿಯ 527 ಕೆರೆಗಳಿಗೆ 9.953 ಟಿಎಂಸಿ ನೀರನ್ನು ಹರಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ” ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.