ಎತ್ತಿನಹೊಳೆ: ಜಿಲ್ಲಾಡಳಿತ ಭರದ ಸಿದ್ಧತೆ

| Published : Sep 05 2024, 12:32 AM IST

ಸಾರಾಂಶ

ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಲು ಆಗಮಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಗಮನ ಹಿನ್ನೆಲೆ ಜಿಲ್ಲಾಡಳಿತ ಭರದ ಸಿದ್ಧತೆ ಕೈಗೊಂಡಿದೆ.

ಸಕಲೇಶಪುರ: ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಲು ಆಗಮಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಗಮನ ಹಿನ್ನೆಲೆ ಜಿಲ್ಲಾಡಳಿತ ಭರದ ಸಿದ್ಧತೆ ಕೈಗೊಂಡಿದೆ.

ತಾಲೂಕಿನ ಬೆಳಗೋಡು ಹೋಬಳಿಯ ಹೆಬ್ಬನಹಳ್ಳಿ ಗ್ರಾಮದಲ್ಲಿ ಬಾಗಿನ ಅರ್ಪಿಸುವ ಮೂಲಕ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿರುವುದರಿಂದ ಹೋಬಳಿ ವ್ಯಾಪ್ತಿಯ ಬಹುತೇಕ ಎಲ್ಲ ರಸ್ತೆಬದಿಯನ್ನು ಜೆಸಿಬಿಗಳ ಮೂಲಕ ಸ್ವಚ್ಛಗೊಳಿಸಲಾಗುತ್ತಿದ್ದು ಮುಚ್ಚಿದ್ದ ಚರಂಡಿಗಳನ್ನು ಶುಚಿ ಮಾಡಲಾಗುತ್ತಿದೆ. ಬೆಳೆದು ನಿಂತಿದ್ದ ಗಿಡಗಂಟಿಗಳನ್ನು ೫೦ಕ್ಕೂ ಅಧಿಕ ಯಂತ್ರಗಳ ಮೂಲಕ ಸ್ವಚ್ಛ ಮಾಡಲಾಗುತ್ತಿದೆ.

ಕಾರ್ಯಕ್ರಮ ನಡೆಯುವ ಪ್ರದೇಶ ಪೈಪ್‌ಲೈನ್ ಮೂಲಕ ಹರಿದು ಕಾಲುವೆಗೆ ಸಂಪರ್ಕ ಕಲ್ಪಿಸುವ ಪ್ರದೇಶದಲ್ಲಿದ್ದು ಈ ಪ್ರದೇಶ ಭತ್ತದ ಗದ್ದೆಗಳ ಸ್ಥಾಳದಲ್ಲಿದೆ. ಈಗಾಗಲೇ ಬೃಹತ್ ಗಾತ್ರದ ಶಾಮಿಯಾನ ಹಾಕಲಾಗಿದೆಯಾದರೂ ಕಾಲಿಡದಷ್ಟು ಕೆಸರು ಇದ್ದು ಸುಮಾರು ಮೂರು ಎಕರೆ ಪ್ರದೇಶದಲ್ಲಿ ಕಾಲಿಡದಂತಹ ಸ್ಥಿತಿ ಇದೆ. ಇನ್ನುಳಿದ ೨೪ ಗಂಟೆಯಲ್ಲಿ ಕೆಸರು ಮುಕ್ತಗೊಳಿಸಲಾಗುವುದು ಎಂದು ಯೋಜನೆಯ ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದಾರೆ.

ವಾಹನ ನಿಲುಗಡೆಗೂ ವ್ಯವಸ್ಥೆ ಇಲ್ಲದ ಸ್ಥಳದಲ್ಲಿ ಏಕೆ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಕಾರ್ಯಕ್ರಮಕ್ಕೆ ಏಳು ಜಿಲ್ಲೆಯಿಂದ ೧೫ ಸಾವಿರದಿಂದ ೨೦ ಸಾವಿರ ಜನ ಸೇರುವ ನಿರೀಕ್ಷೆ ಇದೆ ಎನ್ನಲಾಗುತ್ತಿದ್ದು ಅರಸೀಕೆರೆ ತಾಲೂಕೊಂದರಿಂದಲೇ ಐದು ಸಾವಿರ ಜನರು ಬರಲಿದ್ದಾರೆಂದು ಅಲ್ಲಿನ ಶಾಸಕರೇ ಹೇಳಿದ್ದಾರೆ. ಇಷ್ಟೊಂದು ಜನ ಸೇರುವ ಸಮಾವೇಶಕ್ಕೆ ಈ ಸ್ಥಳ ಸೂಕ್ತವಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

ಉಪಮುಖ್ಯಮಂತ್ರಿ ಹಠ, ಅಧಿಕಾರಿಗಳಿಗೆ ಪಿಕಲಾಟ : ಸಾವಿರಾರು ಜನರು ಸೇರುವ ಕಾರ್ಯಕ್ರಮವನ್ನು ಇಲ್ಲಿ ನಡೆಸುವುದು ಸೂಕ್ತವಲ್ಲ ಎಂಬ ಹಿರಿಯ ಅಧಿಕಾರಿಗಳ ಮಾತುಗಳನ್ನು ಲೆಕ್ಕಿಸದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಪೈಪ್‌ಲೈನ್‌ನಿಂದ ಕಾಲುವೆಗೆ ಸೇರುವ ಸ್ಥಳದಲ್ಲೆ ಉದ್ಘಾಟನಾ ಕಾರ್ಯಕ್ರಮ ನಡೆಯಬೇಕು ಎಂಬ ಹಠದಿಂದಾಗಿ ಸಮಾವೇಶ ನಡೆಸಲು ಸೂಕ್ತವಲ್ಲದ ಸ್ಥಳದಲ್ಲಿ ಕಾರ್ಯಕ್ರಮಕ್ಕೆ ಸಿದ್ದತೆ ನಡೆಸುತ್ತಿದ್ದು, ಸಾಮಾನ್ಯ ಪ್ರದೇಶದಲ್ಲಿ ನಡೆಸುವ ಕಾರ್ಯಕ್ರಮಕ್ಕಿಂತ ಇಲ್ಲಿ ನಾಲ್ಕುಪಟ್ಟು ಅಧಿಕ ಖರ್ಚು ತಗುಲುತ್ತಿದೆ ಎಂಬುದು ಕಾರ್ಯಕ್ರಮದ ಉಸ್ತುವರಿ ಹೊಣೆಹೊತ್ತಿರುವ ಅಧಿಕಾರಿಯೊಬ್ಬರ ಮಾತು.

ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜಕೀಯ: ಶುಕ್ರವಾರ ಲೋಕಾರ್ಪಣೆಗೊಳ್ಳುತ್ತಿರುವ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೆ ಜಿಲ್ಲಾ ಜೆಡಿಎಸ್ ನಾಯಕರನ್ನು ನಿರ್ಲಕ್ಷ್ಯಿಸಿರುವುದು ಸ್ವಷ್ಟವಾಗಿ ಗೋಚರಿಸುತ್ತಿದ್ದು ಜಿಲ್ಲಾ ಜೆಡಿಎಸ್ ಜನಪ್ರತಿನಿಧಿಗಳಾದ ಎ.ಮಂಜು, ಎಚ್.ಡಿ ರೇವಣ್ಣ, ಸೂರಜ್ ರೇವಣ್ಣ, ಚನ್ನರಾಯಪಟ್ಟಣ ಶಾಸಕ ಬಾಲಕೃಷ್ಣ ಹಾಗೂ ೨೦೧೪ರಲ್ಲಿ ಯೋಜನೆಗೆ ಶಂಕುಸ್ಥಾಪನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಕಲೇಶಪುರದ ಮಾಜಿ ಶಾಸಕ ಎಚ್.ಕೆ ಕುಮಾರಸ್ವಾಮಿ ಅವರನ್ನು ಕರೆಯೊಲೇಯಿಂದ ಹೊರಗಿಟ್ಟಿದ್ದಾರೆ.

ಶಿಷ್ಟಾಚಾರದ ಪ್ರಕಾರ ಆಹ್ವಾನ ಪತ್ರಿಕೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷರ ಭಾವಚಿತ್ರದೊಂದಿಗೆ ಹೆಸರಿರಬೇಕು. ಆದರೆ, ಹೆಸರು ಹಾಕಿ ಪೋಟೋ ಕೈಬಿಟ್ಟಿರುವುದು ಅಧ್ಯಕ್ಷತೆ ವಹಿಸಬೇಕಿರುವ ಶಾಸಕ ಸಿಮೆಂಟ್ ಮಂಜು ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ. ಒಟ್ಟಾರೆ ಕಾರ್ಯಕ್ರಮ ರಾಜಕೀಯ ಪ್ರೇರಿತಗೊಂಡಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಪರಿಶೀಲನೆ: ಕಾರ್ಯಕ್ರಮದ ಭದ್ರತೆಯನ್ನು ಹೆಚ್ಚುವರಿ ಪೋಲಿಸ್ ಮಹಾ ನಿರ್ದೇಶಕ ಹಿತೇಂದ್ರ ಹಾಗೂ ಮೈಸೂರು ವಲಯದ ಪೋಲಿಸ್ ಉಪ ಮಹಾನಿರ್ದೇಶಕ ಭೋರಲಿಂಗಯ್ಯ ನೇತೃತ್ವದ ತಂಡ ಪರಿಶೀಲಿಸಿದ್ದು, ಹಿರಿಯ ಪೋಲಿಸ್ ಅಧಿಕಾರಿಗಳು ಸೇರಿದಂತೆ ಜಿಲ್ಲಾಡಳಿತ ಹೆಬ್ಬನಹಳ್ಳಿ ಗ್ರಾಮದಲ್ಲಿ ಬೀಡುಬಿಟ್ಟಿದೆ.

ಅನುದಾನದಲ್ಲಿ ಅನ್ಯಾಯ: ಬರಪೀಡಿತ ಜಿಲ್ಲೆಗಳಿಗೆ ನೀರುಣಿಸುವ ಮಹತ್ವಕಾಂಕ್ಷಿ ಯೋಜನೆಗೆ ತಾಲೂಕಿನಿಂದ ನೀರು ಹರಿಸಲಾಗುತ್ತಿದ್ದು ೮ ಸಾವಿರ ಕೋಟಿ ರು.ನಿಂದ ಆರಂಭವಾಗಿ ೨೩ ಸಾವಿರ ಕೋಟಿ ರು. ತಲುಪಿದ್ದರೂ ತಾಲೂಕಿನ ಮೂಲಭೂತ ಸೌಕರ್ಯ ಅಭಿವೃದ್ದಿಗೆ ಕವಡೆ ಕಾಸು ನೀಡಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಪ್ರತಿವರ್ಷ ನೂರು ಕೋಟಿ ರು. ನೀಡುವುದಾಗಿ ಉದ್ಘಾಟನೆ ವೇಳೆ ಸರ್ಕಾರ ನೀಡಿದ್ದ ಭರವಸೆ ಹುಸಿಯಾಗಿದೆ. ಕಳೆದ ೧೦ ವರ್ಷಗಳಲ್ಲಿ ೩೩೦ ಕೋಟಿ ರು. ಅನುದಾನ ನೀಡಲಾಗಿದೆ.