ಎತ್ತಿನಹೊಳೆಗೆ ಗ್ರಾಮದ ರಸ್ತೆ ಎತ್ತಂಗಡಿ

| Published : Mar 03 2025, 01:47 AM IST

ಸಾರಾಂಶ

ತಾಲೂಕಿನ ಬೊಮ್ಮಲಾಪುರ ಗ್ರಾಮದ ಬಳಿ ನಡೆಯುತ್ತಿರುವ ಎತ್ತಿನಹೊಳೆ ಕಾಮಗಾರಿ ಯೋಜನೆಯಿಂದಾಗಿ ಬೊಮ್ಮಲಾಪುರಕ್ಕೆ ತೆರಳುವ ಪ್ರಮುಖ ರಸ್ತೆಯೊಂದು ಮುಚ್ಚಿಹೋಗುವ ಭೀತಿಯಲ್ಲಿದ್ದು ಈ ರಸ್ತೆಗೆ ಸೇತುವೆ ನಿರ್ಮಿಸದಿದ್ದರೆ ಕಾಮಗಾರಿ ನಡೆಯಲು ಬಿಡುವುದಿಲ್ಲ ಎಂದು ಬೊಮ್ಮಲಾಪುರ ಗ್ರಾಮಸ್ಥರು ಪಟ್ಟುಹಿಡಿದಿದ್ದಾರೆ

ಕನ್ನಡಪ್ರಭ ವಾರ್ತೆ ತಿಪಟೂರು

ತಾಲೂಕಿನ ಬೊಮ್ಮಲಾಪುರ ಗ್ರಾಮದ ಬಳಿ ನಡೆಯುತ್ತಿರುವ ಎತ್ತಿನಹೊಳೆ ಕಾಮಗಾರಿ ಯೋಜನೆಯಿಂದಾಗಿ ಬೊಮ್ಮಲಾಪುರಕ್ಕೆ ತೆರಳುವ ಪ್ರಮುಖ ರಸ್ತೆಯೊಂದು ಮುಚ್ಚಿಹೋಗುವ ಭೀತಿಯಲ್ಲಿದ್ದು ಈ ರಸ್ತೆಗೆ ಸೇತುವೆ ನಿರ್ಮಿಸದಿದ್ದರೆ ಕಾಮಗಾರಿ ನಡೆಯಲು ಬಿಡುವುದಿಲ್ಲ ಎಂದು ಬೊಮ್ಮಲಾಪುರ ಗ್ರಾಮಸ್ಥರು ಪಟ್ಟುಹಿಡಿದಿದ್ದಾರೆ.

ಎತ್ತಿನಹೊಳೆ ಕಾಮಗಾರಿ ಬಿರುಸಿನಿಂದ ನಡೆಯುತ್ತಿದ್ದು ಸರ್ಕಾರದ ಸೂಚನೆ ಮೇರೆಗೆ ಸಾಧ್ಯವಾದಷ್ಟು ತ್ವರಿತವಾಗಿ ಕಾಮಗಾರಿ ಮುಗಿಸಲು ಆದೇಶ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ೨೦೬ರ ಅಯ್ಯನಬಾವಿ ಬಳಿಯಿಂದ ಬೊಮ್ಮಲಾಪುರ ಗ್ರಾಮಕ್ಕೆ ತೆರಳಲು ಮೊದಲಿನಿಂದಲೂ ಇದ್ದ ರಸ್ತೆಯನ್ನು ಕಾಮಗಾರಿಯಿಂದಾಗಿ ಮುಚ್ಚುವ ಪ್ರಸಂಗ ಬಂದಿದೆ. ಗ್ರಾಮಸ್ಥರು ಕಾಮಗಾರಿ ಪ್ರಾರಂಭವಾದಂದಿನಿಂದಲೂ ನಕಾಶೆಯಲ್ಲಿರುವ ರಸ್ತೆಗೆ ಸೇತುವೆ ನಿರ್ಮಿಸಲಾಗುತ್ತದೆ ಎಂದೇ ಇದುವರೆಗೂ ಸುಮ್ಮನಿದ್ದರು. ಕಾಮಗಾರಿ ನಡೆಸುವವರೂ ಇದನ್ನೇ ಹೇಳುತ್ತಿದ್ದರಿಂದ ಸೇತುವೆ ನಿರ್ಮಾಣ ಆಗುವುದು ಎಂದೆ ಗ್ರಾಮಸ್ಥರು ತಿಳಿದಿದ್ದರು. ಆದರೆ ಕಾಮಗಾರಿ ಮುಂದುವರಿದಂತೆ ಸೇತುವೆ ನಿರ್ಮಾಣದ ಯಾವುದೇ ಮುನ್ಸೂಚನೆ ಸಿಗದಿದ್ದರಿಂದ ಗ್ರಾಮಸ್ಥರು ಸಂಬಂಧಪಟ್ಟ ಗುತ್ತಿಗೆದಾರರನ್ನು ಸಂಪರ್ಕಿಸಿದಾಗ ಈ ರಸ್ತೆಗೆ ಯಾವುದೇ ಸೇತುವೆ ನಿರ್ಮಾಣಕ್ಕೆ ಸೂಚಿಸಿಲ್ಲ. ನಮ್ಮ ಯೋಜನೆಯಲ್ಲೂ ಅದು ಸೇರಿಲ್ಲ ಎಂದು ತಿಳಿಸಿದಾಗ ಗ್ರಾಮಸ್ಥರು ಪ್ರಾಜೆಕ್ಟ್ ಎಂಜಿನಿಯರ್‌ರನ್ನು ಸಂಪರ್ಕಿಸಿದ್ದುಅ ಅವರು ಸಹ ಭರವಸೆ ಅಷ್ಟೇ ನೀಡಿದ್ದು ಕಾಮಗಾರಿ ಮುಂದುವರೆದಂತೆಲ್ಲಾ ಸೇತುವೆ ನಿರ್ಮಾಣದ ಯಾವುದೇ ಸೂಚನೆಯೂ ಕಂಡುಬರದಿದ್ದರಿಂದ ಗ್ರಾಮಸ್ಥರ ಆಕ್ರೋಶಗೊಂಡಿದ್ದಾರೆ.

ಅರಸೀಕೆರೆಯಲ್ಲಿರುವ ಎತ್ತಿನಹೊಳೆ ಪ್ರಾಜೆಕ್ಟ್ ಕಚೇರಿಗೆ ತೆರಳಿ ಮೊದಲಿನಿಂದಲೂ ರಾಷ್ಟ್ರೀಯ ಹೆದ್ದಾರಿಗೆ ಬೊಮ್ಮಲಾಪುರ ಗ್ರಾಮದಿಂದ ತೆರಳಲು ಸಂಪರ್ಕ ರಸ್ತೆಯಾಗಿ, ನಕಾಶೆಯಲ್ಲಿಯೇ ಇರುವ ರಸ್ತೆಗೆ ಸೇತುವೆ ನಿರ್ಮಾಣ ಮಾಡಿ ಜನ-ಜಾನುವಾರುಗಳು, ವಾಹನಗಳು ಓಡಾಡಲು ಅನುವು ಮಾಡಿಕೊಡುವಂತೆ ಮನವಿ ಸಲ್ಲಿಸಲಾಗಿದೆ. ಸೇತುವೆ ನಿರ್ಮಾಣ ಮಾಡಿಕೊಡುವ ಬಗ್ಗೆ ಅಧಿಕೃತವಾಗಿ ಘೋಷಿಸುವವರೆಗೂ ಕಾಮಗಾರಿ ನಡೆಯಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಬೊಮ್ಮಲಾಪುರದ ಗ್ರಾಮಸ್ಥರಾದ ಪ್ರಸನ್ನಕುಮಾರ್ (ಗ್ರಾ.ಪಂ.ಸದಸ್ಯ), ಬಿ.ಎನ್.ತಿಮ್ಮೇಗೌಡ, ದಕ್ಷಿಣಮೂರ್ತಿ, ಮೋಹನ್‌ಕುಮಾರ್, ಬಸವರಾಜು, ತಿಮ್ಮೇಗೌಡ, ನೀಲಕಂಠಸ್ವಾಮಿ, ಪುಟ್ಟರಂಗಯ್ಯ, ದಾಸಪ್ಪ ಮತ್ತಿತರರಿದ್ದರು. ಕೋಟ್ ೧: ತಿಪಟೂರು ನಗರದಿಂದ ಆರೇಳು ಕಿ.ಮಿ. ದೂರವಿರುವ ಬೊಮ್ಮಲಾಪುರದಿಂದ ತಿಪಟೂರು ಅಥವಾ ಅರಸೀಕೆರೆಗೆ ತೆರಳಲು ಬಹಳ ವರ್ಷಗಳಿಂದಲೂ ನಾವು ಇದೇ ರಸ್ತೆಯಲ್ಲಿ ಓಡಾಡುತ್ತಿದ್ದೇವೆ. ಇಲ್ಲಿ ರಸ್ತೆ ಇರುವುದರ ಬಗ್ಗೆ ಗ್ರಾಮ ನಕ್ಷೆಯಲ್ಲಿಯೂ ನಮೂದಾಗಿದೆ. ಆದರೆ ಎತ್ತಿನಹೊಳೆ ಕಾಲುವೆ ನಿರ್ಮಾಣವಾಗುತ್ತಿರುವ ಈ ಜಾಗದಲ್ಲಿ ಯಾವುದೇ ಸೇತುವೆ ಮಾಡದಿದ್ದರೆ ಈ ಭಾಗದ ಹಲವಾರು ಗ್ರಾಮಗಳಿಗೆ ಹಾಗೂ ನಮ್ಮ ತೋಟಗಳಿಗೆ ಹೋಗಲು ಕಿಮೀಗಟ್ಟಲೆ ಬಳಸಿ ಓಡಾಡಬೇಕಾಗುತ್ತದೆ. ಆದ್ದರಿಂದ ಇಲ್ಲಿ ಸೇತುವೆ ನಿರ್ಮಾಣ ಆಗಲೇಬೇಕು. - ಪ್ರಸನ್ನಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ, ಬೊಮ್ಮಲಾಪುರ ಕೋಟ್ 2 : ಗ್ರಾಮಸ್ಥರು ನಮಗೆ ಲಿಖಿತವಾಗಿ ಮನವಿ ಸಲ್ಲಿಸಿ ನಕಾಶೆಯಲ್ಲಿರುವ ರಸ್ತೆಗೆ ಸೇತುವೆ ನಿರ್ಮಿಸಲು ಕೇಳಿಕೊಂಡಿದ್ದಾರೆ. ಸದರಿ ಸ್ಥಳಕ್ಕೆ ಭೇಟಿ ನೀಡಿ, ನಕಾಶೆಯನ್ನೂ ಪರಿಶೀಲಿಸಿ ಆ ಜಾಗದಲ್ಲಿ ರಸ್ತೆ ಇದ್ದ ಬಗ್ಗೆ ಪರಿಶೀಲನೆ ಮಾಡಿ ಮುಂದಿನ ಕ್ರಮದ ಬಗ್ಗೆ ನಿರ್ಧಾರ ಮಾಡುತ್ತೇವೆ. - ಶಶಾಂಕ್, ಎಇಇ, ಎತ್ತಿನಹೊಳೆ ಯೋಜನೆ.