ಸಾರಾಂಶ
ಕಾರಟಗಿ: ಇಲ್ಲಿನ ಹಳೇ ಬಸ್ ನಿಲ್ದಾಣ ಬಳಿಯ ಪುರಸಭೆಗೆ ಸೇರಿದ್ದ ಶಿಥಿಲಗೊಂಡ ವಾಣಿಜ್ಯ ಸಂಕೀರ್ಣವನ್ನು ಕೊನೆಗೂ ಪುರಸಭೆ ಶುಕ್ರವಾರ ಬೆಳಿಗ್ಗೆ ಕ್ಷಿಪ್ರ ಕಾರ್ಯಚರಣೆ ನಡೆಸಿ ತೆರವುಗೊಳಿಸಿತು.
ಪುರಸಭೆ ಸಿಬ್ಬಂದಿ ಮತ್ತು ಜೆಸಿಬಿಗಳು ಶಿಥಿಲಗೊಂಡ ವಾಣಿಜ್ಯ ಸಂಕೀರ್ಣದ ಮುಂಭಾಗ ಶುಕ್ರವಾರ ಬೆಳಗ್ಗೆ ಆರು ಗಂಟೆಗೆ ಪ್ರತ್ಯಕ್ಷವಾಗಿ ಬಿಗಿ ಬಂದೋಬಸ್ತ್‌ನಲ್ಲಿ ಮುಖ್ಯಾಧಿಕಾರಿ ಸುರೇಶ್ ಶೆಟ್ಟರ್ ನೇತೃತದಲ್ಲಿ ತೆರವು ಕಾರ್ಯಕ್ಕೆ ಮುಂದಾದರು.ಸುಮಾರು ೧೫ ಪೌರಕಾರ್ಮಿಕರು ಅಂಗಡಿ, ಹೊಟೇಲ್‌ಗಳ ಮುಂದಿನ ಶೆಡ್‌ಗಳನ್ನು ಕಿತ್ತು ಹಾಕಿದರೆ, ಜೆಸಿಬಿ ಶಿಥಿಲಗೊಂಡ ಕಟ್ಟಡ ಉಳಿದ ಭಾಗವನ್ನು ತೆರವುಗೊಳಿಸಿತು. ಜೊತೆಗೆ ಮೊದಲ ಅಂತಸ್ಥಿನ ಚಾವಣಿಯನ್ನು ಜೆಸಿಬಿ ಸದ್ದು ಮಾಡುತ್ತಾ ಒಡೆದು ಹಾಕಿತು.
ಪುರಸಭೆಗೆ ಸೇರಿದ ಈ ವಾಣಿಜ್ಯ ಸಂಕೀರ್ಣದಲ್ಲಿ ಒಟ್ಟು ೨೨ ಮಳಿಗೆ ಮತ್ತು ಮೊದಲ ಅಂತಸ್ಥಿನಲ್ಲಿ ೧೦ ಮಳಿಗೆಗಳು ಇದ್ದವು. ಆ ಪೈಕಿ ಇಡೀ ಕಟ್ಟಡದ ಶೇ.೮೦-೯೦ರಷ್ಟು ಭಾಗ ಶಿಥಿಲಗೊಂಡಿದ್ದು ಇದನ್ನು ತೆರವುಗೊಳಿಸುವಂತೆ ಕಳೆದ ಒಂದು ವರ್ಷದ ಹಿಂದೆ ಲೋಕೋಪಯೋಗಿ ಇಲಾಖೆ ಕಟ್ಟಡ ಮಾಹಿತಿ ನೀಡಿತ್ತು. ಈ ಹಿನ್ನೆಲಗೆ ಕಟ್ಟಡ ಶಿಥಿಲಗೊಂಡಿದ್ದು, ೩ ಬಾರಿ ನೋಟಿಸ್ ನೀಡಿದರೂ ಬಾಡಿಗೆದಾರರು ಖಾಲಿ ಮಾಡಿರಲಿಲ್ಲ.ಪುರಸಭೆಯಿಂದ ಬಾಡಿಗೆದಾರರಿಗೆ ತೆರವುಗೊಳ್ಳುವಂತೆ ಒಂದು ದಿನ ಮುಂಚೆಯೇ ಅವಕಾಶ ಮಾಡಿಕೊಟ್ಟಿದ್ದರು. ಇಷ್ಟಾದರೂ ಬಾಡಿಗೆದಾರರು ಸ್ಪಂದಿಸಿರಲಿಲ್ಲ.
ಪುರಸಭೆಗೆ ಕಾರ್ಯಚರಣೆಗೆ ಮುಂದಾಗುತ್ತಿದ್ದಂತೆ ಕೆಲ ಬಾಡಿಗೆದಾರರು ಓಡಿ ಬಂದು ತಮ್ಮ ಸರಕು ಸರಂಜಾಮು ತೆಗೆದುಕೊಳ್ಳುವುದಾಗಿ ಪುರಸಭೆ ಅಧಿಕಾರಿಗಳಿಗೆ ಮನವಿ ಮಾಡಿದರು. ಕೆಲ ಹೊತ್ತು ಸಮಯ ಪಡೆದ ಕೆಲವರು ತಮ್ಮ ಸಾಮಗ್ರಿ ಸ್ಥಳಾಂತರಿದರೆ, ಇನ್ನು ಕೆಲವರು ಸಮಯಾವಕಾಶ ಕೇಳಿಕೊಂಡರು. ಅಧಿಕಾರಿಗಳು ಮಾನವೀಯ ದೃಷ್ಟಿಯಿಂದ ನಾಲ್ಕು ಗಂಟೆಗಳ ಕಾಲ ಸಮಯವನ್ನೂ ನೀಡಿದರು.ಬಳಿಕ ತೆರವು ಕಾರ್ಯ ನಡೆಯಿತು. ಇನ್ನು ಮೂರು ನಾಲ್ಕು ದಿನಗಳಲ್ಲಿ ಸಂಪೂರ್ಣವಾಗಿ ಮಳಿಗೆಗಳನ್ನು ತೆರವುಗೊಳಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ತಿಳಿಸಿದ್ದಾರೆ.ಸಂಕೀರ್ಣವನ್ನು ಮೂರ್‍ನಾಲ್ಕು ದಿನಗಳಲ್ಲಿ ಸಂಪೂರ್ಣವಾಗಿ ತೆರವುಗೊಳಿಸಿ, ಶಾಲೆ ಮುಂದಿನ ಆವರಣ ಸ್ವಚ್ಛಗೊಳಿಸಲಾಗುವುದು. ಕೆಲವೇ ದಿನಗಳಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಮುಂದಾಗಬೇಕಾಗಬೇಕು ಎನ್ನುವುದರ ಕುರಿತು ನೀಲನಕ್ಷೆ ತಯಾರಿಸಲಾಗುವುದು. ಕೆಲವೇ ದಿನಗಳಲ್ಲಿ ಮುಂದಿನ ಯೋಜನೆ ಘೋಷಿಸಲಾಗುವುದು ಪುರಸಭೆ ಮುಖ್ಯಾಧಿಕಾರಿ ಸುರೇಶ ಶೆಟ್ಟರ್ ಹೇಳಿದರು.