ಸಾರಾಂಶ
- ಮೌಲ್ಯಮಾಪನ ಉಸ್ತುವಾರಿ ಅಧಿಕಾರಿಗಳ ಮಾತಿಗೆ ಕಿವಿಗೊಡದ ಶಿಕ್ಷಕ-ಶಿಕ್ಷಕಿಯರು
- - - - ಸಿಇಟಿ ನೋಂದಣಿ ಸಂಖ್ಯೆ ಬರೆಯುವ ಹಿನ್ನೆಲೆ ಮೊದಲ ಮಹಡಿಗೆ ತೆರಳದೇ ಮೊಂಡಾಟ - ಮೊದಲ ಮಹಡಿಯ 5 ಕೊಠಡಿಗಳಲ್ಲಿ ಮೌಲ್ಯಮಾಪನಕ್ಕೆ ಅಗತ್ಯ ವ್ಯವಸ್ಥೆಯಿದ್ದರೂ ಕಳ್ಳಾಟ- - -
ಕನ್ನಡಪ್ರಭ ವಾರ್ತೆ ದಾವಣಗೆರೆನಗರದ ಮೋತಿ ವೀರಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಎಸ್ಸೆಸ್ಸೆಲ್ಸಿ ಪರೀಕ್ಷೆಯ ವಿಜ್ಞಾನ ಪತ್ರಿಕೆ ಮೌಲ್ಯಮಾಪನವನ್ನು ನಗರದ ಮೌಲ್ಯಮಾಪನ ಕೇಂದ್ರ ಕೊಠಡಿಗಳಲ್ಲಿ ನಡೆಸುವ ಬದಲಿಗೆ ಕೇಂದ್ರದ ಕಾರಿಡಾರ್‌ನಲ್ಲಿ ನಡೆಸಿದ ಘಟನೆ ಮಂಗಳವಾರ ವರದಿಯಾಗಿದೆ.
ಸಿಇಟಿ ಪರೀಕ್ಷೆ ಬುಧವಾರ, ಗುರುವಾರ ನಡೆಯಲಿದೆ. ಈ ಹಿನ್ನೆಲೆ ಇದೇ ಪರೀಕ್ಷಾ ಕೇಂದ್ರದ ಕೊಠಡಿಯಲ್ಲಿ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ನಮೂದಿಸುವ ಕಾರ್ಯದ ಹಿನ್ನೆಲೆ ಹಲವಾರು ಮೌಲ್ಯಮಾಪಕರು ಕಾಲೇಜಿನ ಕಾರಿಡಾರ್‌ನಲ್ಲೇ ಮೌಲ್ಯಮಾಪನದಲ್ಲಿ ತೊಡಗಬೇಕಾಯಿತು. ಉರಿಯುವ ಬಿಸಿಲಿನಲ್ಲೇ ಬಸವಳಿದಂತೆ, ಸೆಖೆಯಿಂದ ಬಳಲುತ್ತಿದ್ದ ಪುರುಷ- ಮಹಿಳಾ ಮೌಲ್ಯಮಾಪಕರು ತ್ರಾಸದಿಂದಲೇ ಮೌಲ್ಯಮಾಪನ ಕಾರ್ಯದಲ್ಲಿ ತೊಡಗಿದ್ದರು.ವಿದ್ಯಾರ್ಥಿ ಜೀವನದ ಮಹತ್ವದ ಮೈಲುಗಲ್ಲಾದ ಎಸ್ಸೆಸ್ಸೆಲ್ಸಿ ಪರೀಕ್ಷೆ ಉತ್ತರ ಪತ್ರಿಕೆಗೆ ಅಂಕ ನೀಡುವುದು ಮಹತ್ವದ ಕಾರ್ಯ. ಇಂಥ ಮೌಲ್ಯಮಾಪನ ಕಾರ್ಯವನ್ನು ಕಾಲೇಜು ಅಂಗಳದಲ್ಲಿ ಮುಕ್ತವಾಗಿ ಮಾಡುತ್ತಿದ್ದುದು ಮಾತ್ರ ಜನರ ಕೆಂಗಣ್ಣಿಗೂ ಗುರಿಯಾಗಿದೆ.
ಪ್ರತಿ ಕೊಠಡಿಯ ಬೆಂಚ್‌ಗಳ ಮೇಲೆ ಸಿಇಟಿ ನೋಂದಣಿ ಸಂಖ್ಯೆ ಬರೆಯುವ ವೇಳೆ ಗೊಂದಲ ಉಂಟಾಗಿಯಿತು. ಇದರಿಂದಾಗಿ ಕೆಲವು ಮೌಲ್ಯಮಾಪಕರು ಕಾಲೇಜಿನ ಕಟ್ಟೆ ಮೇಲೆಯೇ ಕುಳಿತು ಮೌಲ್ಯಮಾಪನ ಮಾಡುವ ಸ್ಥಿತಿ ಬಂದೊದಗಿದೆ. ಮೌಲ್ಯಮಾಪನ ಉಸ್ತುವಾರಿ ಅಧಿಕಾರಿಗಳು ಸಹ ಮೌಲ್ಯಮಾಪಕರ ಬಳಿ ಬಂದು, ಹೀಗೆ ಕಾರಿಡಾರ್‌ನಲ್ಲಿ, ಬಯಲಿನಲ್ಲಿ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಮಾಡುವುದು ಸರಿಯಲ್ಲ. ಕಾಲೇಜಿನ ಮೊದಲ ಮಹಡಿಯ 5 ಕೊಠಡಿಗಳಲ್ಲಿ ಮೌಲ್ಯಮಾಪನ ಕಾರ್ಯಕ್ಕಾಗಿಯೇ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಬಂದು ಮೌಲ್ಯಮಾಪನ ಮಾಡುವಂತೆ ಹೇಳಿದರೂ, ಮೌಲ್ಯಮಾಪಕರು ಕಿವಿಗೊಟ್ಟಿಲ್ಲ ಎನ್ನಲಾಗಿದೆ.ಕಾಲೇಜಿನ ಮೊದಲ ಅಂತಸ್ತಿನ ಕೊಠಡಿಗಳಲ್ಲಿ ಮೌಲ್ಯಮಾಪನ ಮಾಡಲು ಮೌಲ್ಯಮಾಪಕರು ಯಾಕೆ ಮುಂದಾಗಲಿಲ್ಲ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಎಸ್ಸೆಸ್ಸೆಲ್ಸಿ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ಕೊಠಡಿಯಲ್ಲಿ ಮಾಡಿ, ಗೌಪ್ಯತೆ ಕಾಪಾಡಬೇಕಾಗಿದೆ. ಆದರೆ, ಮೌಲ್ಯಮಾಪಕ ಶಿಕ್ಷಕ-ಶಿಕ್ಷಕಿಯರು ಸಹ ಅಶಿಸ್ತಿನಿಂದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಿದ್ದು, ಮೇಲಾಧಿಕಾರಿಗಳ ಸೂಚನೆ ಧಿಕ್ಕರಿಸಿದ್ದು ಸಾರ್ವಜನಿಕರ ಅಸಮಾಧಾನಕ್ಕೂ ಕಾರಣವಾಗಿದೆ.
- - - -15ಕೆಡಿವಿಜಿ7:ದಾವಣಗೆರೆ ಮೋತಿ ವೀರಪ್ಪ ಸರ್ಕಾರಿ ಪಿಯು ಕಾಲೇಜಿನ ಕಾರಿಡಾರಿನಲ್ಲೇ ಎಸ್ಸೆಸ್ಸೆಲ್ಸಿ ಉತ್ತರ ಪರೀಕ್ಷಾ ಪತ್ರಿಕೆಗಳ ಮೌಲ್ಯ ಮಾಪನ ಮಾಡುತ್ತಿರುವ ಮೌಲ್ಯಮಾಪಕರು.