ಸಾರಾಂಶ
-ಜವಹಾರಲಾಲ್ ನೆಹರು ಕ್ರೀಡಾಂಗಣದಲ್ಲಿ ಸ್ವಾತಂತ್ರ‍್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಕಂದಕೂರು
-----ಕನ್ನಡಪ್ರಭ ವಾರ್ತೆ ಗುರುಮಠಕಲ್
ಯೋಧರು ಹಾಗೂ ರೈತರು ನಮ್ಮ ಬೆನ್ನೆಲುಬಾಗಿದ್ದಾರೆ. ಆದರೆ, ಸ್ವಾತಂತ್ರ್ಯ ಸಿಕ್ಕು 78 ವರ್ಷಗಳೇ ಕಳೆದರೂ ರೈತರಿಗೆ 10 ತಾಸು ವಿದ್ಯುತ್ ಒದಗಿಸಲಾಗುತ್ತಿಲ್ಲ ಎಂದು ಶಾಸಕ ಶರಣಗೌಡ ಕಂದಕೂರು ಅವ್ಯವಸ್ಥೆ ಬಗ್ಗೆ ಕಳವಳ ವ್ಯಕ್ತಪಡಿಸಿದರು.ಜವಹಾರಲಾಲ್ ನೆಹರು ಕ್ರೀಡಾಂಗಣದಲ್ಲಿ 78ನೇ ಸ್ವಾತಂತ್ರ‍್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಭ್ರಷ್ಟಾಚಾರ, ಅನಾಚಾರ ನಡೆಯಲು ಬಿಡುವುದಿಲ್ಲ ಎಂದು ಈ ಸ್ವಾತಂತ್ರ‍್ಯ ದಿನಾಚರಣೆ ವೇಳೆ ಪ್ರಮಾಣ ಮಾಡುವೆ ಎಂದರು.
ರೈತರ ಅನುಭವಿಸುತ್ತಿರುವ ಕಷ್ಟಗಳನ್ನು ಸರ್ಕಾರದ ಗಮನ ಸೆಳೆಯುವ ಪ್ರಾಮಾಣಿಕ ಕಾರ್ಯ ಮಾಡುವೆ. ಕ್ಷೇತ್ರದ ಜನರ ಧ್ವನಿಯಾಗಿ ಸೇವೆ ಮಾಡಲು ಅವಕಾಶ ಕೊಟ್ಟಿದ್ದೀರಿ, ವಿಧಾನಸೌಧದ ಹೊರಗೆ ಮತ್ತು ಒಳಗೆ ಕ್ಷೇತ್ರದ ಗೌರವ ಕಾಪಾಡಲು ಹೋರಾಟ ಮಾಡುವುದಾಗಿ ಹೇಳಿದರು.ಕ್ಷೇತ್ರದ ಜನಪರ ಹೋರಾಟಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ. ಮತದಾರರ ತಲೆತಗ್ಗಿಸುವ ಕಾರ್ಯ ಎಂದಿಗೂ ಮಾಡಲ್ಲ. ತಮ್ಮ ಧ್ವನಿ ಅಡಗಿಸುವ ಷಡ್ಯಂತ್ರ ನಡೆಯುತ್ತಿದೆ ಅದು ಸಾಧ್ಯವಿಲ್ಲ ಎಂದು ಗುಡುಗಿದರು.
ಕ್ಷೇತ್ರದಲ್ಲಿ ಯಾರೇ ಅಧಿಕಾರಿ ಸಾಮಾನ್ಯ ಜನರ ಕಷ್ಟಕ್ಕೆ ಸ್ಪಂದಿಸುವ ಆಪೇಕ್ಷೆಯಿಂದ ರಾಜಕೀಯಕ್ಕೆ ಬಂದಿರುವೆ ಎಂದ ಅವರು, ಶಾಲೆ ಹಾಗೂ ಆಸ್ಪತ್ರೆಗಳಿಗೆ ಸೌಕರ್ಯ ಕಲ್ಪಿಸುವ ಜವಾಬ್ದಾರಿ ನನ್ನದಿದೆ. ಜನರಿಗೆ ತೊಂದರೆ ನೀಡದೇ ಕಾರ್ಯ ನಿರ್ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಿದರು.ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದಿಂದ ಇಂದು ಶಾಸಕರಾಗಿದ್ದೇವೆ. ಅಂಬೇಡ್ಕರ್ ಅವರ ಭಾವಚಿತ್ರ ಇಡುವ ಕ್ರಮಕ್ಕೆ ಮುಖ್ಯಮಂತ್ರಿಗಳಿಗೆ ಧನ್ಯವಾದ ತಿಳಿಸಿದರು.
ತಹಸೀಲ್ದಾರ್ ಕೆ. ನೀಲಪ್ರಭ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸಮೃದ್ಧ, ಸಂಪತ್ಭರಿತ ದೇಶದ ಸ್ವಾತಂತ್ರ‍್ಯಕ್ಕಾಗಿ ಅನೇಕ ಮಹನೀಯರ ತ್ಯಾಗ ಬಲಿದಾನ ಅಡಗಿದೆ. ಬ್ರಿಟಿಷರ ಆಳ್ವಿಕೆಯಿಂದ ಸ್ವಾತಂತ್ರ‍್ಯ ಪಡೆಯಲು ಅನೇಕ ಚಳುವಳಿಗಳು ನಡೆದಿವೆ. ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ ಮಹಾನ್ ನಾಯಕರನ್ನು ಸ್ಮರಿಸಬೇಕೆಂದು ಹೇಳಿದರು.ಶಶಿಕಾಂತ ಜನಾರ್ದನ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು.
ಈ ವೇಳೆ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.ತಾ.ಪಂ. ಅಧಿಕಾರಿ ಅಂಬರೀಶ್ ಪಾಟೀಲ್, ಮುಖ್ಯಾಧಿಕಾರಿ ಭಾರತಿ ದಂಡೋತಿ, ಗ್ರೇಡ್-2 ತಹಸೀಲ್ದಾರ್ ನರಸಿಂಹ ಸ್ವಾಮಿ, ಪಿಎಸ್‌ಐ ಭೀಮರಾಯ, ಉಪ ತಹಸೀಲ್ದಾರ್ ಎಜಾಜ್ ಉಲ್ ಹಕ್, ನೌಕರರ ಸಂಘದ ತಾಲೂಕು ಅಧ್ಯಕ್ಷ ಸಂತೊಷ ಕುಮಾರ್ ನೀರೆಟಿ, ಸಿಡಿಪಿಒ ಶರಣ ಬಸಪ್ಪ ಇದ್ದರು.
-----15ವೈಡಿಆರ್12: ಗುರುಮಠಕಲ್ ಪಟ್ಟಣದ ಜವಹಾರಲಾಲ್ ನೆಹರು ಕ್ರೀಡಾಂಗಣದಲ್ಲಿ 78ನೇ ಸ್ವಾತಂತ್ರ‍್ಯ ದಿನಾಚರಣೆ ಕಾರ್ಯಕ್ರಮ ಜರುಗಿತು.