ಸಾರಾಂಶ
ಬೇಗ ಗ್ರಾಮಾಂತರ ಭಾಗದಲ್ಲಿ ಗಟಾರ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕಾಗಿದೆ. ವರ್ಷಂಪ್ರತಿ ಮಳೆಗಾಲದ ಪೂರ್ವದಲ್ಲೇ ಗಟಾರ ಸ್ವಚ್ಛತೆ ಆದರೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ.
ಭಟ್ಕಳ: ತಾಲೂಕಿನ ಗ್ರಾಮಾಂತರ ಭಾಗದಲ್ಲಿ ಗಟಾರದ ಹೂಳು ಮಳೆಗಾಲ ಆರಂಭವಾದರೂ ತೆಗೆಯದೇ ಇರುವುದರಿಂದ ಮಳೆ ನೀರು ರಸ್ತೆ ಮೇಲೆ ಹರಿಯುವಂತಾಗಿದೆ.
ಪುರಸಭೆ ವ್ಯಾಪ್ತಿಯಲ್ಲಿ ಗಟಾರದ ಹೂಳು ತೆಗೆಯುವ ಕಾರ್ಯವೇನೋ ನಡೆಯುತ್ತಿದೆ. ಆದರೆ ಗ್ರಾಮಾಂತರ ಭಾಗದಲ್ಲಿ ಇನ್ನೂ ಗಟಾರದ ಹೂಳು ತೆಗೆಯುವ ಕಾರ್ಯಕ್ಕೆ ಚಾಲನೆ ನೀಡಿದಂತಿಲ್ಲ. ಲೋಕೋಪಯೋಗಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗಕ್ಕೆ ಸೇರಿದ ರಸ್ತೆಗಳ ಗಟಾರದ ಹೂಳು ತೆಗೆಯಿಸುವುದು ಮತ್ತು ರಸ್ತೆ ಇಕ್ಕೆಲದಲ್ಲಿ ಬೆಳೆಯಲಾದ ಗಿಡಕಂಟೆಗಳನ್ನು ಮಳೆಗಾಲದ ಪೂರ್ವದಲ್ಲಿ ಕಡಿಸಲಾಗುತ್ತಿತ್ತು.ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಬಗ್ಗೆ ಸಂಬಂಧಿಸಿದ ಇಲಾಖೆ ನಿರ್ಲಕ್ಷ್ಯ ತಾಳುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯ ನೀರು ಕೆಲವು ಕಡೆ ರಸ್ತೆ ಮೇಲೆ ಹರಿಯುತ್ತಿದೆ. ಇದಕ್ಕೆ ಗಟಾರ ಸ್ವಚ್ಛಗೊಳಿಸದೇ ಇರುವುದೇ ಕಾರಣ. ಮಳೆಗಾಲದ ಪೂರ್ವದಲ್ಲಿ ಗಟಾರ ಸ್ವಚ್ಛಗೊಳಿಸದಿರುವುದರಿಂದ ಕಸ, ಕಡ್ಡಿ, ಕಲ್ಲು ಮಣ್ಣು ರಾಶಿ ರಸ್ತೆ ಮೇಲೆ ಬಂದು ಬೀಳುತ್ತಿದೆ.
ಇದರಿಂದ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ರಸ್ತೆಗಳು ಲೋಕೋಪಯೋಗಿ, ಪಂಪಂ ರಾಜ್ ಇಲಾಖೆಗೆ ಸೇರಿದ್ದರಿಂದ ಮತ್ತು ನಿರ್ವಹಣೆ ಅದೇ ಇಲಾಖೆಯದ್ದಾಗಿರುವುದರಿಮದ ಗಟಾರ ಸ್ವಚ್ಛತೆಗೆ ಗ್ರಾಮ ಪಂಚಾಯಿತಿ ಆಡಳಿತ ಕೂಡ ನಿರ್ಲಕ್ಷ್ಯ ತೋರುತ್ತಿದೆ. ಗಟಾರದಲ್ಲಿ ಹರಿಯುವ ಮಳೆ ನೀರು ರಸ್ತೆಯ ಮೇಲೆಯೇ ಹರಿಯುವುದಿಂದ ರಸ್ತೆಯೂ ಹೊಂಡ ಬಿದ್ದು ಹಾಳಾಗಲಿದೆ. ಹೀಗಾಗಿ ಆದಷ್ಟು ಬೇಗ ಗ್ರಾಮಾಂತರ ಭಾಗದಲ್ಲಿ ಗಟಾರ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕಾಗಿದೆ. ವರ್ಷಂಪ್ರತಿ ಮಳೆಗಾಲದ ಪೂರ್ವದಲ್ಲೇ ಗಟಾರ ಸ್ವಚ್ಛತೆ ಆದರೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ.