ಸಾರಾಂಶ
ಕನ್ನಡಪ್ರಭ ವಾರ್ತೆ ಸೊರಬ
ಕಳೆದ ಒಂದು ವರ್ಷದಿಂದ ಅಭಿವೃದ್ಧಿ ಚಟುವಟಿಕೆಗಳು ನಡೆಯದ್ದರಿಂದ ತಾಲೂಕಿನಲ್ಲಿ ಆಡಳಿತ ಯಂತ್ರ ಸಂಪೂರ್ಣ ಸ್ಥಗಿತಗೊಂಡಿದ್ದು, ಆಯ್ಕೆಯಾದ ಜನರಿಗೆ ಕ್ಷೇತ್ರದ ಶಾಸಕರು ನಂಬಿಕೆ ದ್ರೋಹ ಎಸಗಿದ್ದಾರೆ ಎಂದು ಸೊರಬ ಬಿಜೆಪಿ ಮಂಡಲ ಅಧ್ಯಕ್ಷ ಪ್ರಕಾಶ್ ತಲಕಾಲುಕೊಪ್ಪ ಆರೋಪಿಸಿದರು.ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಸಚಿವರಾಗಿ ಒಂದು ವರ್ಷ ಕಳೆದರೂ ಒಂದೇ ಒಂದು ಬಿಡಿಗಾಸಿನ ಅನುದಾನ ತರದ ಮಧು ಬಂಗಾರಪ್ಪರಿಗೆ ಅಭಿವೃದ್ಧಿ ಎನ್ನುವ ಪದದ ಅರ್ಥವೇ ತಿಳಿದಿಲ್ಲ ಆದ್ದರಿಂದ ಬಿಜೆಪಿ ಕಾರ್ಯಕರ್ತರು ಸ್ಥಗಿತಗೊಂಡಿರುವ ಆಡಳಿತ ಯಂತ್ರ ಚಾಲನೆ ತರುವ ಕೆಲಸಕ್ಕೆ ಮುಂದಾಗಬೇಕಿದೆ ಎಂದರು.
ಈಗಾಗಲೇ ಮಳೆಗಾಲ ಆರಂಭವಾಗಿದ್ದು, ರಸಗೊಬ್ಬರ, ಬಿತ್ತನೆ ಬೀಜ ಸಾಕಷ್ಟು ದಾಸ್ತಾನು ಇಲ್ಲದ್ದರಿಂದ ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಅಲ್ಲದೇ ರೈತ ಪರಿಕರಗಳ ದರ ದುಪ್ಪಟ್ಟಾಗಿದೆ. ಈ ಬಗ್ಗೆ ಯಾವುದೇ ಸಭೆ ನಡೆದಿಲ್ಲ. ಬರೀ ಚುನಾವಣೆಗಷ್ಟೇ ಸೀಮಿತವಾಗಿರುವ ಸಚಿವರು ವರ್ಷ ಕಳೆದರೂ ಒಂದು ಕೆಡಿಪಿ ಮತ್ತು ಅಧಿಕಾರಿಗಳ ಸಭೆಗೆ ಭಾಗವಹಿಸಿಲ್ಲ. ರೈತರು ಮತ್ತು ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಅವರಿಂದ ಹೇಗೆ ಸಾಧ್ಯ. ಕೂಡಲೇ ಸಚಿವರು ಅಧಿಕಾರಿಗಳ ಸಭೆ ನಡೆಸಿ ತಾಲೂಕಿನ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸಿ, ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.ಕಾಮಗಾರಿ ಪೂರ್ಣಗೊಳಿಸಿ:ಕುಮಾರ್ ಬಂಗಾರಪ್ಪ ಅವಧಿಯಲ್ಲಿ ಬಿಡುಗಡೆಯಾದ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಈಡಿಗ ಸಮುದಾಯ ಭವನ, ನೌಕರರ ಭವನ, ಕನ್ನಡ ಸಾಹಿತ್ಯ ಪರಿಷತ್ ಭವನ ಸೇರಿ ವಿವಿಧ ಸಮುದಾಯಗಳ ಭವನಗಳಿಗೆ ಹಣದ ಕೊರತೆ ಎದುರಾಗಿ ಕಾಮಗಾರಿ ಕುಂಠಿತಗೊಂಡಿವೆ. ಆದ್ದರಿಂದ ಸರ್ಕಾರದಿಂದ ಹೆಚ್ಚಿನ ಹಣ ಬಿಡುಗಡೆಗೊಳಿಸಿ ತಕ್ಷಣ ಪೂರ್ಣಗೊಳಿಸಬೇಕು. ಅಲ್ಲದೇ ಅವೈಜ್ಞಾನಿಕವಾಗಿ ನಡೆಯುತ್ತಿರುವ ರಸ್ತೆ ಅಗಲೀಕರಣ ಕಾಮಗಾರಿ ಬಗ್ಗೆ ಗಮನಹರಿಸಬೇಕು. ಸೊರಬ ಸಾರ್ವಜನಿಕ ಆಸ್ಪತ್ರೆ ಮೂಲಭೂತ ಸಮಸ್ಯೆಗಳಿಂದ ಮುಕ್ತವಾಗಿಲ್ಲ. ಕುಮಾರ ಬಂಗಾರಪ್ಪ ಶಾಸಕರಾಗಿದ್ದ ವೇಳೆ ೧೨ ಮಂದಿ ವೈದ್ಯರು ಕಾರ್ಯನಿರ್ವಹಿಸುತ್ತಿದ್ದರು. ಆದರೆ ಈಗ ಕೇವಲ ಇಬ್ಬರು ವೈದ್ಯರಿದ್ದಾರೆ. ತಕ್ಷಣ ನೇಮಕಾತಿ ಅಥವಾ ವರ್ಗಾವಣೆ ಮೂಲಕ ವೈದ್ಯರ ಕೊರತೆ ನೀಗಿಸಬೇಕು ಎಂದು ಆಗ್ರಹಿಸಿದರು.
ನೈಋತ್ಯ ಪದವೀಧರ ಕ್ಷೇತ್ರದಿಂದ ಆಯ್ಕೆಯಾದ ಡಾ.ಧನಂಜಯ ಸರ್ಜಿ ಮತ್ತು ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದ ಎಲ್. ಭೋಜೇಗೌಡ ಹಾಗೂ ವಿಧಾನ ಪರಿಷತ್‌ಗೆ ಅವಿರೋಧ ಆಯ್ಕೆಯಾದ ಸಿ.ಟಿ. ರವಿ, ಎನ್. ರವಿಕುಮಾರ್, ಎಂ.ಜಿ.ಮುಳೆಯವರಿಗೆ ಪಕ್ಷದ ಪರವಾಗಿ ಅಭಿನಂದನೆ ಸಲ್ಲಿಸಿದರು.ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಕಡಸೂರು, ಪ್ರಕಾಶ ಅಗಸನಹಳ್ಳಿ, ಜಿಲ್ಲಾ ಕಾರ್ಯದರ್ಶಿ ದೇವೇಂದ್ರಪ್ಪ ಚನ್ನಾಪುರ, ತಾಲೂಕು ಒಬಿಸಿ ಮೋರ್ಚಾ ಅಧ್ಯಕ್ಷ ಎಂ.ಡಿ. ಉಮೇಶ, ಮುಖಂಡರಾದ ಕೊಟ್ರೇಶಸ್ವಾಮಿ ಆನವಟ್ಟಿ, ಓಂಕಾರಪ್ಪ ತತ್ತೂರು, ಗುರುಮೂರ್ತಿ ಹಿರೇಶಕುನ, ಹರೀಶ್, ವಿಶ್ವನಾಥ, ವಿನಯ್ ಗುತ್ತೇರ್, ಟೀಕಪ್ಪ ಕೊಡಕಣಿ, ಬಸವರಾಜ ಕೊಡಕಣಿ, ಜಾನಕಪ್ಪ ಒಡೆಯರ್ ಯಲಸಿ, ಅಶೋಕ್ ಶೇಟ್, ಡಿ.ಶಿವಯೋಗಿ, ವಿನಯ್ ಶೇರ್ವಿ ಮುಂತಾದವರಿದ್ದರು.