ಸಾರಾಂಶ
ಅಜೀಜಅಹ್ಮದ ಬಳಗಾನೂರ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಕಾಯಿಪಲ್ಲೆ ಮಾರಾಕ ಅಂಗಡಿ ಕೊಡ್ತೀನಂತ ಬರೀ ಹೇಳೋದ ಆತ್ರಿ. ಇಲ್ಲಿವರೆಗೂ ಕೊಟ್ಟಿಲ್ಲ. ಬರೋ ದೀಪಾವಳಿ ಹಬ್ಬದೊಳಗಾದ್ರೂ ಅಂಗಡಿ ಕೊಟ್ರ ನಾಲ್ಕು ಕಾಸಾದ್ರು ದುಡ್ಕೋತಿವ್ರಿ...
ಇದು ಇಲ್ಲಿನ ಜನತಾ ಬಜಾರ್‌ನ ಮುಂಭಾಗದಲ್ಲಿ ತರಕಾರಿ ಮಾರಾಟ ಮಾಡುತ್ತಿರುವ ದ್ಯಾಮವ್ವ ಎಂಬ ವೃದ್ಧೆಯ ಅಳಲಿದು. ಜನನಿಬಿಡ ಪ್ರದೇಶವಾಗಿರುವ ಕಿತ್ತೂರು ಚೆನ್ನಮ್ಮ ವೃತ್ತದ ಬಳಿ ಕೋಟ್ಯಂತರ ರುಪಾಯಿ ಖರ್ಚು ಮಾಡಿ ನಿರ್ಮಿಸಿರುವ ಜನತಾ ಬಜಾರ್ ಇಂದು ಅವ್ಯವಸ್ಥೆಯ ತಾಣವಾಗಿ ಮಾರ್ಪಟ್ಟಿದೆ. ಉದ್ಘಾನೆಯಾಗಿ ಒಂದು ವರ್ಷ ಕಳೆದರೂ ವ್ಯಾಪಾರಸ್ಥರಿಗೆ ಮಾತ್ರ ಮಳಿಗೆ ಹಂಚಿಕೆಯಾಗಿಲ್ಲ.ಹು-ಧಾ ಸ್ಮಾರ್ಟ್‌ಸಿಟಿ ಯೋಜನೆಯ ಅಡಿ ₹ 18.5 ಕೋಟಿ ವೆಚ್ಚದಲ್ಲಿ 2019ರಲ್ಲೇ ಕಾಮಗಾರಿ ಪ್ರಾರಂಭಿಸಿ 2022 ಅಕ್ಟೋಬರ್‌ನಲ್ಲಿ ಪೂರ್ಣಗೊಳಿಸಿದ್ದು, 2023ರ ಫೆಬ್ರುವರಿ 19ರಂದು ಉದ್ಘಾಟಿಸಲಾಗಿದೆ. ಇದಾದ ಬಳಿಕ ಸ್ಮಾರ್ಟ್‌ಸಿಟಿಯಿಂದ ಮಹಾನಗರ ಪಾಲಿಕೆಗೂ ಈ ಕಟ್ಟಡ ಹಸ್ತಾಂತರವಾಗಿದೆ. ಆದರೆ, ಈ ವರೆಗೂ ವ್ಯಾಪಾರಸ್ಥರಿಗೆ ಹಂಚಿಕೆಯಾಗಿಲ್ಲ.
ಕಾರಣವೇನು?:ಈ ಕಟ್ಟಡವು ಎರಡು ಅಂತಸ್ತು ಹೊಂದಿದ್ದು, ಒಟ್ಟು ತರಕಾರಿ ಮಾರಾಟದ 177 ಕಟ್ಟೆ, 57 ಮಳಿಗೆ ನಿರ್ಮಿಸಲಾಗಿದೆ. ಇನ್ನೂ 56 ವ್ಯಾಪಾರಸ್ಥರಿಗೆ ಕಟ್ಟೆಗಳ ವ್ಯವಸ್ಥೆ ಮಾಡಿಲ್ಲ. ಇದಕ್ಕಾಗಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕಿದೆ. ಆದರೆ, ಆ ಕೆಲಸ ಮಾತ್ರ ಆಗುತ್ತಿಲ್ಲ. ಹೀಗಾಗಿ ವ್ಯಾಪಾರಸ್ಥರು ಜನತಾ ಬಜಾರಿನ ಹೊರಗಿನ ರಸ್ತೆ ಮೇಲೆ ವ್ಯಾಪಾರ ಮಾಡುವಂತಾಗಿದೆ.
ಕುಡುಕರ ಅಡ್ಡೆ:ಈ ನೂತನ ಕಟ್ಟಡ ಇಂದು ಅಕ್ರಮ ಚಟುವಟಿಕೆಗಳ ತಾಣವಾಗಿದೆ. ಹೊರಗಿನಿಂದ ಸುಂದರವಾಗಿ ಕಾಣುತ್ತದೆ. ಒಳಹೊಕ್ಕರೆ ಎಲ್ಲೆಂದರಲ್ಲಿ ಮದ್ಯದ ಬಾಟಲಿ, ಇಸ್ಪೀಟ್ ಎಲೆಗಳ ಕಟ್ಟು, ನಿರೋಧ ಕಣ್ಣಿಗೆ ರಾಚುತ್ತವೆ. ಅಂದರೆ, ಪ್ರತಿನಿತ್ಯ ರಾತ್ರಿ ಅನಧಿಕೃತ ಬಾರ್, ಇಸ್ಪೀಟ್ ಅಡ್ಡೆಯಾಗುತ್ತದೆ. ಕಟ್ಟಡದೊಳಗೆ ಹಾಕಲಾಗಿದ್ದ ಎಲೆಕ್ಟ್ರಿಕಲ್ ಸ್ವಿಚ್ ಬೋರ್ಡ್, ಟೈಲ್ಸ್‌ಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಕಿಡಕಿ, ಗ್ಲಾಸ್‌ಗಳ ಸ್ಥಿತಿಯಂತೂ ಹೇಳತೀರದಾಗಿದೆ.
ಮೌನಕ್ಕೆ ಶರಣಾದ ಪಾಲಿಕೆ:ಸ್ಮಾರ್ಟ್‌ಸಿಟಿ ಅಧಿಕಾರಿಗಳು ಈ ಮಾರುಕಟ್ಟೆಯನ್ನು ಹಸ್ತಾಂತರಿಸಿ ಕೈ ತೊಳೆದುಕೊಂಡಿದ್ದಾರೆ. ಆದರೆ, ವ್ಯಾಪಾರಸ್ಥರಿಗೆ ಹಂಚಿಕೆ ಮಾಡಿ ಸುಸ್ಥಿತಿಯಲ್ಲಿ ಇಡಬೇಕಾದ ಮಹಾನಗರ ಪಾಲಿಕೆ ಮಾತ್ರ ಮೌನಕ್ಕೆ ಜಾರಿದೆ. ಇದರಿಂದಾಗಿ ಕೋಟ್ಯಂತರ ರುಪಾಯಿ ಖರ್ಚು ಮಾಡಿ ನಿರ್ಮಿಸಲಾಗಿರುವ ಜನತಾ ಬಜಾರ್ ಸೂಕ್ತ ಬಳಕೆಯಾಗುತ್ತಿಲ್ಲ.
ಇನ್ನಾದರೂ ಜನತಾ ಬಜಾರ್ ಮಾರುಕಟ್ಟೆಯ ಕಟ್ಟಡದಲ್ಲಿನ ಮಳಿಗೆ ಹಾಗೂ ಕಟ್ಟೆಗಳನ್ನು ವ್ಯಾಪಾರಸ್ಥರಿಗೆ ನೀಡಬೇಕು. ಜತೆಗೆ ಅಕ್ರಮ ಚಟುವಟಿಕೆಗಳ ತಾಣವಾಗದಂತೆ ಸಮರ್ಪಕ ನಿರ್ವಹಣೆ ಮಾಡಬೇಕು ಎಂಬುದು ಪ್ರಜ್ಞಾವಂತರ ಒತ್ತಾಯ.ಸಚಿವರ ಮಾತಿಗೂ ಬೆಲೆಯಿಲ್ಲ:
ಸೆ. 30ರಂದು ನಡೆದ ಮಹಾನಗರ ಪಾಲಿಕೆ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರಿಗೆ ಜನತಾ ಬಜಾರ್‌ನ ಅವ್ಯವಸ್ಥೆ ಕುರಿತು ಗಮನಕ್ಕೆ ಬರುತ್ತಿದ್ದಂತೆ ಪಾಲಿಕೆ ಆಯುಕ್ತರಿಗೆ ಒಂದು ವಾರದೊಳಗೆ ಮಳಿಗೆ ಹಸ್ತಾಂತರಿಸುವಂತೆ ಖಡಕ್ ಸೂಚನೆ ನೀಡಿದ್ದರು. ಆದರೆ, ತಿಂಗಳಾಗುತ್ತಾ ಬಂದರೂ ಈ ವರೆಗೂ ವ್ಯಾಪಾರಸ್ಥರಿಗೆ ಮಳಿಗೆ ನೀಡದೇ ಇರುವುದು ಸಚಿವ ಮಾತಿಗೂ ಬೆಲೆ ಇಲ್ಲವೇ? ಎನ್ನುವಂತಾಗಿದೆ.ಜನತಾ ಬಜಾರ್‌ನಲ್ಲಿರುವ ಮಳಿಗೆಗಳು ಬಳಕೆಯಾಗದೇ ಹಾಳಾಗುತ್ತಿವೆ. ಈಗಾಗಲೇ ಹಲವಾರು ಬಾರಿ ಪಾಲಿಕೆ ಆಯುಕ್ತರಿಗೆ, ಸಚಿವರಿಗೆ ಮನವಿ ಮಾಡಲಾಗಿದೆ. ಒಂದು ವಾರದಲ್ಲಿ ವಿತರಿಸುವಂತೆ ಸಚಿವರ ಹೇಳಿದ ಮಾತಿಗೂ ಬೆಲೆಯಿಲ್ಲದಂತಾಗಿದೆ ಎಂದು ಜನತಾ ಬಜಾರ್‌ನ ವ್ಯಾಪಾರಸ್ಥ ರಾಜು ವಾಲ್ಮೀಕಿ ಹೇಳಿದರು.ಜನತಾ ಬಜಾರ್‌ನಲ್ಲಿ ಈ ಹಿಂದೆ ಮಾರಾಟ ಮಾಡುತ್ತಿದ್ದವರಿಗೆ ಮಳಿಗೆ ನೀಡುವ ಕುರಿತು ಕೆಲ ತೊಡಕುಗಳಿವೆ. ಕುರಿತು ಈಗಾಗಲೇ ಸಚಿವರು ಹಾಗೂ ಶಾಸಕರೊಂದಿಗೆ ಚರ್ಚಿಸಲಾಗಿದೆ. ಆದಷ್ಟು ಶೀಘ್ರವೇ ವ್ಯಾಪಾರಸ್ಥರಿಗೆ ಮಳಿಗೆ ಹಸ್ತಾಂತರಿಸಲಾಗುವುದು ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ತಿಳಿಸಿದರು.