ಸಾರಾಂಶ
ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ
ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ ಬೆಳೆಸುವ ಸಂತೆಗಳ ಅಣಕು ಪ್ರದರ್ಶನ ಹೆಚ್ಚು ಹೆಚ್ಚು ನಡೆಯಬೇಕಿದೆಯೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ತಿಳಿಸಿದರು.ತಾಲೂಕಿನ ಚಿಕ್ಕದಾಸರಹಳ್ಳಿಯ ಶ್ರೀ ಲಕ್ಷ್ಮೀ ವಿದ್ಯಾನಿಕೇತನ ಶಾಲೆಯಲ್ಲಿ ಶನಿವಾರ ಸಂಕ್ರಾಂತಿ ಸುಗ್ಗಿ ಹಬ್ಬದ ಪ್ರಯುಕ್ತ ಮಕ್ಕಳಿಂದ ಹಮ್ಮಿಕೊಂಡಿದ್ದ ಗ್ರಾಮೀಣ ಸಂತೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಸಂತೆ ಪರಿಕಲ್ಪನೆಇತ್ತೀಚಿನ ದಿನಗಳಲ್ಲಿ ರೈತರ ಮಕ್ಕಳಿಗೆ ರೈತರು ಬೆಳೆಯುವ ಹೂ, ಹಣ್ಣು, ತರಕಾರಿ ಹೆಸರು ಗೊತ್ತಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಸಂತೆಗಳ ಪರಿಕಲ್ಪನೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳು ರೈತಸ್ನೇಹಿ ಆಗಿದ್ದು, ವಿಶೇಷವಾಗಿ ಮಕ್ಕಳಲ್ಲಿ ರೈತರು ಬೆಳೆಯುವ ಎಲ್ಲಾ ಬೆಳೆಗಳ ಹೆಸರು, ತಿಳಿದುಕೊಳ್ಳಲು ಒಳ್ಳೆಯ ವೇದಿಕೆ ಎಂದು ಶ್ಲಾಘಿಸಿದರು.ಶಾಲೆಯ ಮುಖ್ಯಸ್ಥರಾದ ದೇವರಾಜ್ ಮಾತನಾಡಿ, ಪೋಷಕರು ಈ ಹಿಂದೆ ಮಕ್ಕಳನ್ನು ಸಂತೆಗೆ ಕರೆದುಕೊಂಡು ಹೋಗುತ್ತಿದ್ದರು. ಆದರೆ ಇಂದಿನ ಆಧುನಿಕ ಸಮಾಜದಲ್ಲಿ ಆ ಪರಿಸ್ಥಿತಿ ಈಗ ಇಲ್ಲ. ಸಂತೆ ಅಂದರೆ ಏನು ಅಂತ ಕೇಳಿ ತಿಳಿದುಕೊಳ್ಳುವ ಪರಿಸ್ಥಿತಿ ಸಮಾಜದಲ್ಲಿದೆ. ಸಂತೆ ಸಂಸ್ಕೃತಿಯನ್ನು ಇಂದಿನ ಪೀಳಿಗೆ ಮುಂದುವರಿಸಿಕೊಂಡು ಹೋಗಬೇಕೆಂದರು. ಈ ಸಂದರ್ಭದಲ್ಲಿ ರಾಜಣ್ಣ, ಬಸವರಾಜ್, ಸುರೇಶ್ ಮತ್ತಿತರರು ಹಾಜರಿದ್ದರು.
ಸುದ್ದಿ ಚಿತ್ರ ೧ ಚಿಕ್ಕದಾಸರಹಳ್ಳಿಯ ಶ್ರೀ ಲಕ್ಷ್ಮೀ ವಿದ್ಯಾನಿಕೇತನ ಶಾಲೆಯಲ್ಲಿ ಶನಿವಾರ ಸಂಕ್ರಾಂತಿ ಸುಗ್ಗಿ ಹಬ್ಬದ ಪ್ರಯುಕ್ತ ಮಕ್ಕಳಿಂದ ಹಮ್ಮಿಕೊಂಡಿದ್ದ ಗ್ರಾಮೀಣ ಸಂತೆಯನ್ನು ಉದ್ಘಾಟಿಸಿದ ಗಣ್ಯರು.