ಸುಡುಬಿಸಿಲಲ್ಲೂ ದ.ಕ. ಅಭ್ಯರ್ಥಿಗಳ ಪ್ರಚಾರ

| Published : Apr 12 2024, 01:04 AM IST

ಸಾರಾಂಶ

ಮನೆ ಮನೆ ಭೇಟಿ ಮಾಡುವ ಎಲ್ಲ ಪಕ್ಷಗಳ ಕಾರ್ಯಕರ್ತರು ಮಾತ್ರ ಏರು ಹೊತ್ತಿನ 11ರಿಂದ 2.30ರವರೆಗೆ ಕೊಂಚ ವಿರಾಮ ಪಡೆಯುತ್ತಾರೆ.

ಸಂದೀಪ್‌ ವಾಗ್ಲೆ

ಕನ್ನಡಪ್ರಭ ವಾರ್ತೆ ಮಂಗಳೂರು

ಕಡಲತಡಿ ದಕ್ಷಿಣ ಕನ್ನಡದಲ್ಲೀಗ ನಡು ಬೇಸಗೆಯ ಉರಿ ಬಿಸಿಲು. ಬಿಸಿಲಿನ ತೀವ್ರತೆಗೆ ಜನರು ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದ್ದಾರೆ. ನಡು ಮಧ್ಯಾಹ್ನ ಹೊರಗೆ ಕಾಲಿಟ್ಟರೆ ಬೆವರಿನ ಕೋಡಿ ಹರಿಯುವಷ್ಟು ಸೆಕೆ. ಇಂಥ ಹೊತ್ತಿನಲ್ಲಿ ಚುನಾವಣೆಯ ಕಾವು ಕೂಡ ಏರಿಕೆ ಆಗಿರುವುದರಿಂದ ಬಿಸಿಲ ಝಳವನ್ನೂ ಲೆಕ್ಕಿಸದೆ ಪ್ರಚಾರ ಮಾಡಲೇಬೇಕಾದ ಅನಿವಾರ್ಯತೆ ಪಕ್ಷಗಳ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರದ್ದು!

ಜಿಲ್ಲೆಯಲ್ಲಿ ಪ್ರಸ್ತುತ 35- 36 ಡಿಗ್ರಿ ಸೆಲ್ಸಿಯಸ್‌ನಷ್ಟು ಗರಿಷ್ಠ ಉಷ್ಣಾಂಶವಿದೆ. ಆದರೆ ಚುನಾವಣೆಗೆ ಕೇವಲ 15 ದಿನ ಬಾಕಿ ಇರುವುದರಿಂದ ಪ್ರಬಲ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌ನ ಇಬ್ಬರೂ ಅಭ್ಯರ್ಥಿಗಳು ಎಡೆಬಿಡದೆ ಪ್ರಚಾರ, ಸಭೆಗಳಲ್ಲಿ ನಿರತರಾಗಿದ್ದಾರೆ. ಮೇಲಾಗಿ ಇಬ್ಬರೂ ಚುನಾವಣಾ ಸ್ಪರ್ಧೆಗೆ ಹೊಸಬರು. ಹಾಗಾಗಿ ಉತ್ಸಾಹದಿಂದಲೇ ವಿರಾಮವಿಲ್ಲದೆ ಓಟಿನ ಬೇಟೆಗೆ ಇಳಿದಿದ್ದಾರೆ. ಉಳಿದ 7 ಮಂದಿ ಅಭ್ಯರ್ಥಿಗಳು ಸಮಯ ಸಿಕ್ಕಾಗಲೆಲ್ಲ ಮತದಾರರ ಭೇಟಿಯಲ್ಲಿ ತೊಡಗಿದ್ದಾರೆ.

ಬಿಸಿಲು ಲೆಕ್ಕಿಸದೆ ಪದ್ಮರಾಜ್‌ ಪ್ರಚಾರ:

ಕಾಂಗ್ರೆಸ್‌ ಅಭ್ಯರ್ಥಿ ಪದ್ಮರಾಜ್‌ ಆರ್‌. ಪೂಜಾರಿ ಮುಂಜಾನೆ ಹೊತ್ತಿಗೆ ಮನೆಯಿಂದ ಹೊರಟರೆ ವಾಪಸ್‌ ಮನೆಗೆ ಬರೋದು ನಡುರಾತ್ರಿಯೇ. ಜಿಲ್ಲೆಯಾದ್ಯಂತ ತಿರುಗಾಟ ನಡೆಸಿ ಪಕ್ಷದ ಪ್ರಮುಖರು, ಕಾರ್ಯಕರ್ತರ ಸಭೆಗಳು, ದೇವಸ್ಥಾನ, ದೈವಸ್ಥಾನಗಳಿಗೆ ಭೇಟಿ, ಮನೆ ಮನೆ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಮನೆಯಿಂದ ಹೊರಡುವಾಗ ಅವರ ಅಮ್ಮ ಅಕ್ಕರೆಯಿಂದ ಇಡೀ ದಿನಕ್ಕಾಗುವಷ್ಟು ಬಿಸಿ ನೀರು, ಹಣ್ಣು ಹಂಪಲು, ಲಘು ಉಪಹಾರವನ್ನು ಕೊಟ್ಟೇ ಕಳುಹಿಸುವುದು. ಬಿಸಿನೀರು ಬಿಟ್ಟರೆ ಬೇರೆ ನೀರು, ಜ್ಯೂಸ್‌ ಕುಡಿಯುವುದು ಕಡಿಮೆ. ಬೆವರು ಒರೆಸಿಕೊಳ್ಳಲು ಕೆಲವು ಟವೆಲ್ಲುಗಳು. ಏರು ಬಿಸಿಲಲ್ಲಿ ಕೂಲಿಂಗ್‌ ಗ್ಲಾಸ್‌. ಪ್ರಚಾರ ವೇಳೆ ಹೊಟೇಲ್‌, ಕಾರ್ಯಕರ್ತರ ಮನೆಗಳಲ್ಲೇ ಊಟ. ನಡು ನಡುವೆ ಅಮ್ಮ ಕೊಟ್ಟ ಫಲಾಹಾರ. ಬಿಸಿಲ ಝಳ ಕಡಿಮೆ ಮಾಡಲು ಸದಾ ಬಿಳಿ ಅಂಗಿ. ಎಷ್ಟು ದಣಿವಾದರೂ ಎದುರು ಸಿಕ್ಕವರಿಗೆ ನಗುಮೊಗದ ಸ್ವಾಗತ ಖಚಿತ.

ಬ್ರಿಜೇಶ್‌ ಚೌಟ ದಣಿವರಿಯದ ಪ್ರಚಾರ:

ಬಿಜೆಪಿ ಅಭ್ಯರ್ಥಿ ಬ್ರಿಜೇಶ್‌ ಚೌಟ ಅವರೂ ದಿನವಿಡಿ ದಣಿವರಿಯದ ಪ್ರಚಾರದಲ್ಲಿ ತೊಡಗಿದ್ದಾರೆ. ಏರು ಬಿಸಿಲಿನ ಹೊತ್ತಿನಲ್ಲೂ ವಿರಾಮವಿಲ್ಲದೆ ಜಿಲ್ಲೆಯ ಕಾರ್ಯಕರ್ತರು, ಮುಖಂಡರ ಸಭೆಗಳು, ಜಾತ್ರೆ- ನೇಮ ಇತ್ಯಾದಿ, ದೇವಾಲಯ, ದೈವಸ್ಥಾನಗಳಿಗೆ ಭೇಟಿ, ಮನೆ ಮನೆ ಪ್ರಚಾರ ನಡೆಸುತ್ತಲೇ ಇದ್ದಾರೆ. ಧ್ವನಿ ಕೈಕೊಡದೇ ಇರಲು ಎಷ್ಟೇ ಬಿಸಿಲಿದ್ದರೂ ಇವರು ತಣ್ಣೀರು ಕುಡಿಯೋದೆ ಇಲ್ಲ. ಜ್ಯೂಸ್‌, ಎಳನೀರು ಸೇವನೆ ಕೂಡ ಅಷ್ಟಕ್ಕಷ್ಟೆ. ಬೆವರಿಳಿಯುತ್ತಿದ್ದರೆ ಟವಲ್‌ನಿಂದ ಒರೆಸಿಕೊಳ್ಳುತ್ತಲೇ ಒಂದೆಡೆಯಿಂದ ಮತ್ತೊಂದೆಡೆ ಪ್ರಚಾರ ಕಾರ್ಯಕ್ಕೆ ರೆಡಿಯಾಗಿಬಿಡುತ್ತಾರೆ. ಬಿಸಿಲ ಝಳ ತಪ್ಪಿಸಲು ಕೂಲಿಂಗ್‌ ಗ್ಲಾಸ್‌, ಸದಾ ಬಿಳಿ ಅಂಗಿ. ಬಟ್ಟೆ ಕೊಳೆಯಾದರಷ್ಟೆ ಇನ್ನೊಂದು ಬಟ್ಟೆ. ದಿನವಿಡಿ ಎಷ್ಟೇ ಓಡಾಟವಿರಲಿ, ದಣಿವು ಮರೆತುಬಿಟ್ಟಂತೆ ಸದಾ ಫ್ರೆಶ್‌- ಸ್ಮೈಲ್. ಬಿಡುವಾಗೋದು ನಡುರಾತ್ರಿಯೇ!

ಕಾರ್ಯಕರ್ತರಿಗೆ ಏರು ಬಿಸಿಲು ವಿರಾಮ:

ಇನ್ನು ಮನೆ ಮನೆ ಭೇಟಿ ಮಾಡುವ ಎಲ್ಲ ಪಕ್ಷಗಳ ಕಾರ್ಯಕರ್ತರು ಮಾತ್ರ ಏರು ಹೊತ್ತಿನ 11ರಿಂದ 2.30ರವರೆಗೆ ಕೊಂಚ ವಿರಾಮ ಪಡೆಯುತ್ತಾರೆ. ಬೆಳಗ್ಗೆ 7 ಗಂಟೆಗೆ ಮನೆ ಮನೆ ಪ್ರಚಾರಕ್ಕೆ ಹೊರಡುವ ಕಾರ್ಯಕರ್ತರು, ಬಿಸಿಲೇರುತ್ತಿದ್ದಂತೆ ಬಿಸಿಲ ಝಳ ತಾಳಲಾರದೆ ಊಟದ ವಿರಾಮ ಪಡೆದು ದಣಿವಾರಿಸಿಕೊಳ್ಳುತ್ತಾರೆ. ಮಧ್ಯಾಹ್ನ 3 ಗಂಟೆ ವೇಳೆಗೆ ಮತ್ತೆ ಪ್ರಚಾರ ಕಾರ್ಯ ಆರಂಭವಾಗಿ ರಾತ್ರಿವರೆಗೂ ಮುಂದುವರಿಯುತ್ತದೆ.