ಸಾರಾಂಶ
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಮನುಷ್ಯ ಸತ್ತ ಮೇಲೂ ಅವನ ಹೆಸರು ಜೀವಂತವಾಗಿದ್ದರೆ ಅವನು ಸಮಾಜಕ್ಕೆ ನೀಡಿದ ಕೊಡುಗೆಯೇ ಕಾರಣವಾಗಿರುತ್ತದೆ. ಅಂತವರ ಸಾಲಿಗೆ ಅಗಲಿದ ನಾಲ್ವರು ಶಿಕ್ಷಕರ ಸಾಧನೆಯೇ ಸಾಕ್ಷಿಯಾಗಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಹೇಳಿದರು.ಪಟ್ಟಣದ ಎವಿಕೆ ಕಲ್ಯಾಣ ಮಂಟಪದಲ್ಲಿ ಶಿಕ್ಷಕರ ಗೆಳೆಯರ ಬಳಗ ಬಂಗಾರಪೇಟೆ, ಕೆಜಿಎಫ್ ತಾಲೂಕು ಹಾಗೂ ರೋಟರಿ ಕ್ಲಬ್ ವತಿಯಿಂದ ಅಗಲಿದ ನಾಲ್ವರು ಶಿಕ್ಷಕರ ನೆನಪಿಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಮಾಜಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿದ್ದ ದಿ. ಶಿಕ್ಷಕ ಸಿ.ಚಂದ್ರಶೇಖರಗೌಡ ಮತ್ತು ಇತರೆ ಮೂವರು ಶಿಕ್ಷಕರು ಯಾವುದೇ ಕೆಲಸ ಮಾಡಬೇಕಾದರೂ ಒಗ್ಗಟ್ಟಾಗಿ ಮಾಡುತ್ತಿದ್ದರು. ಕೊನೆಗೆ ಒಟ್ಟಿಗೆ ಅಪಘಾತದಲ್ಲಿ ಮೃತಪಟ್ಟರು. ಅವರು ನಮ್ಮನ್ನಗಲಿ ೧೧ ವರ್ಷವಾದರೂ ಅವರ ಹೆಸರಿನಲ್ಲಿ ಹಲವು ಸಮಾಜ ಮುಖಿ ಕಾರ್ಯಗಳನ್ನು ಮುಂದುವರಿಸಿಕೊಂಡು ಬರುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ರಕ್ಷದಾನ ಪವಿತ್ರ ಕಾರ್ಯ, ಅಗಲಿದ ಶಿಕ್ಷಕರ ಹೆಸರಿನಲ್ಲಿ ಶಿಕ್ಷಕರ ಗೆಳೆಯರ ಬಳಗ ರಕ್ತದಾನ, ವೃದ್ಧಾಶ್ರಮದಲ್ಲಿ, ಅಂಧ ಹಾಗೂ ಕಿವುಡ ಮಕ್ಕಳ ಶಾಲೆಗಳಲ್ಲಿ ಅನ್ನದಾನ ಮತ್ತು ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ, ಪ್ರತಿ ವರ್ಷವೂ ಅಗಲಿದ ಶಿಕ್ಷಕರ ಹೆಸರಲ್ಲಿ ಉತ್ತಮ ಶಿಕ್ಷಕರನ್ನು ಗುರುತಿಸುತ್ತಿರುವುದು ಶಿಕ್ಷಕರಿಗೆ ಮತ್ತಷ್ಟು ಉತ್ತೇಜನ ನೀಡುತ್ತದೆ ಎಂದು ಅಭಿಪ್ರಾಯಪಟ್ಟರು.ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಸಿ.ಅಪ್ಪಯ್ಯಗೌಡ ಮಾತನಾಡಿ, ಸಮಾಜದಲ್ಲಿ ಯಾರೇ ಆಗಲಿ ಉತ್ತಮ ಕೆಲಸಗಳನ್ನು ಮಾಡಿದರೆ ಅವರನ್ನು ಕೊನೆವರೆಗೂ ಎಲ್ಲರೂ ನೆನೆಯಬೇಕು, ದಿ.ಶಿಕ್ಷಕ ಚಂದ್ರಶೇಖರಗೌಡ ಮತ್ತು ಅವರ ಸಹ ಶಿಕ್ಷಕರು ಉತ್ತಮ ಕೆಲಸ ಮಾಡಿರುವುದರಿಂದಲೇ ಅವರು ಅಗಲಿ ೧೧ ವರ್ಷವಾದರೂ ಅವರ ಹೆಸರಲ್ಲಿ ಸಮಾಜಮುಖಿ ಕಾರ್ಯಗಳು ನಡೆಯುತ್ತಿವೆ ಎಂದು ಬಣ್ಣಿಸಿದರು. ತಾಲೂಕು ಕಸಾಪ ಅಧ್ಯಕ್ಷ ಆರ್.ಅಶ್ವತ್ಥ್, ರೋಟರಿ ಕ್ಲಬ್ ಅಧ್ಯಕ್ಷ ಉಮೇಶ್, ಕುಂಬಾರ ಸಂಘದ ಅಧ್ಯಕ್ಷ ಕುಂಬಾರಪಾಳ್ಯ ಮಂಜುನಾಥ್, ಎಲ್.ರಾಮಕೃಷ್ಣ, ಶ್ಯಾಂಮೂರ್ತಿ, ಸುಜಾತ, ಶಿವಕುಮಾರ್ ಇತರರು ಇದ್ದರು.