ವ್ಯಕ್ತಿ ಅಳಿದರೂ ಸೇವೆಯಿಂದ ಆತನ ವ್ಯಕ್ತಿತ್ವ ಉಳಿವುದು: ಸಿಆರ್ ಪಿ ಉಮಾವತಿ

| Published : Aug 08 2024, 01:34 AM IST

ವ್ಯಕ್ತಿ ಅಳಿದರೂ ಸೇವೆಯಿಂದ ಆತನ ವ್ಯಕ್ತಿತ್ವ ಉಳಿವುದು: ಸಿಆರ್ ಪಿ ಉಮಾವತಿ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಿಶೆಟ್ಟಿ ನರಸಿಂಹಯ್ಯನವರು ದೀನ- ದಲಿತರ ಸೇವೆಗಿಂತ ಮಿಗಿಲಾದ ಪೂಜೆ ಇಲ್ಲ, ಸೇವೆ ಜನ ಮೆಚ್ಚುಗೆಗಾಗಿ ಆಗದೆ ಆತ್ಮ ಪ್ರೇರಣೆಯಿಂದ ಆಗಬೇಕೆಂದು ನಂಬಿ, ಸಿರಿವಂತರಾದಾಗಲೂ ಸರಳ ಜೀವನ ನಡೆಸಿ, ಮಹಾತ್ಮ ಗಾಂಧೀಜಿಯವರಂತೆ ಸಮಾಜಕ್ಕೆ ಆದರ್ಶಪ್ರಾಯರಾಗಿದ್ದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ವ್ಯಕ್ತಿ ಅಳಿದರೂ ಆತನ ಸೇವೆಯಿಂದ ವ್ಯಕ್ತಿತ್ವ ಉಳಿಯುತ್ತದೆ ಎಂಬುದಕ್ಕೆ ಮಂಗಿಶೆಟ್ಟಿ ನರಸಿಂಹಯ್ಯರೇ ಸಾಕ್ಷಿಯಾಗಿರುವುದನ್ನು ನಾವು ಕಾಣಬಹುದು. ಬಡತನದಲ್ಲಿ ಜನಿಸಿ ದುಡಿದು ಶ್ರೀಮಂತರಾಗಿದ್ದರೂ ಸರಳ ಜೀವನ ನಡೆಸಿ, ತಮ್ಮ ದುಡಿಮೆಯನ್ನೆಲ್ಲಾ ಸಮಾಜ ಸೇವೆಗೆ ಮೀಸಲಿಟ್ಟಿದ್ದರು ಎಂದು ಶಿಕ್ಷಣ ಇಲಾಖೆಯ ಶ್ರೀರಾಮಪುರ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಉಮಾವತಿ ತಿಳಿಸಿದರು.

ತಾಲೂಕಿನ ಶ್ರೀರಾಮಪುರ ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳಿಗೆ ಮಂಗಿಶೆಟ್ಟಿ ನರಸಿಂಹಯ್ಯ ರಂಗಮ್ಮ ಟ್ರಸ್ಟ್‌ನ ವತಿಯಿಂದ ಸರ್ಕಾರಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಮಕ್ಕಳಿಗೆ ನೋಟ್ ಬುಕ್ಸ್ ಮತ್ತು ಶಾಲಾ ಬ್ಯಾಗ್ ಗಳ ವಿತರಣಾ ಕಾರ್ಯಕ್ರಮದಲ್ಲಿ ಶ್ರೀರಾಮಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿ, ಮಂಗಿಶೆಟ್ಟಿ ನರಸಿಂಹಯ್ಯನವರು ದೀನ- ದಲಿತರ ಸೇವೆಗಿಂತ ಮಿಗಿಲಾದ ಪೂಜೆ ಇಲ್ಲ, ಸೇವೆ ಜನ ಮೆಚ್ಚುಗೆಗಾಗಿ ಆಗದೆ ಆತ್ಮ ಪ್ರೇರಣೆಯಿಂದ ಆಗಬೇಕೆಂದು ನಂಬಿ, ಸಿರಿವಂತರಾದಾಗಲೂ ಸರಳ ಜೀವನ ನಡೆಸಿ, ಮಹಾತ್ಮ ಗಾಂಧೀಜಿಯವರಂತೆ ಸಮಾಜಕ್ಕೆ ಆದರ್ಶಪ್ರಾಯರಾಗಿದ್ದರು. ಇಂತಹವರ ಆದರ್ಶಗಳನ್ನು ಮಕ್ಕಳು ಬೆಳಸಿಕೊಳ್ಳಬೇಕೆಂದು ಹೇಳಿದರು.

ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಿಂದಲೇ ಮನೆಯೇ ಮೊದಲ ಪಾಠಶಾಲೆ ಆಗಬೇಕು. ಈ ಹಂತದಿಂದಲೇ ಅವರಿಗೆ ಶಿಸ್ತು, ಸಂಯಮ ರೂಢಿಸುವ ನಿಟ್ಟಿನಲ್ಲಿ ಪೋಷಕರು ಬಹಳಷ್ಟು ಕಾಳಜಿ ವಹಿಸುವುದರ ಜೊತೆ ಮಗುವಿನ ಶೈಕ್ಷಣಿಕ ಚಟುವಟಿಕೆ ಬಗ್ಗೆ ಆಗಿಂದಾಗ್ಗೆ ನಿಗಾ ಇರಿಸಿಕೊಳ್ಳಬೇಕು. ಶಾಲೆಯಲ್ಲಿ ಶಿಕ್ಷಕರು ಕಲಿಸಿದ ವಿದ್ಯೆಯನ್ನು ಮರುಕಳಿಸುವಂತೆ ಮನೆಯಲ್ಲಿಯೂ ಸಹ ಮೆಲುಕು ಹಾಕಬೇಕು. ಅವರಿಗೆ ಮೊಬೈಲ್ ಗೀಳು ಮೊದಲು ಬಿಡಿಸಬೇಕು. ಸರ್ಕಾರದಿಂದ ಸಿಗುವ ಶೈಕ್ಷಣಿಕ ಸೌಲಭ್ಯಗಳ ಜೊತೆಗೆ ಇಂದು ಎಂಎನ್ಆರ್ ಟ್ರಸ್ಟ್ ವತಿಯಿಂದ ಇಡೀ ಚಿಕ್ಕಬಳ್ಳಾಪುರ ತಾಲೂಕಿನಾದ್ಯಂತ ನೋಟ್ ಪುಸ್ತಕಗಳನ್ನು ಸರ್ಕಾರಿ ಶಾಲೆ ಮಕ್ಕಳಿಗೆ ನೀಡಿ ವಿದ್ಯೆಗೆ ಪ್ರೋತ್ಸಾಹ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಟ್ರಸ್ಟಿ ಹಾಗೂ ಪತ್ರಕರ್ತ ಎಂ.ಕೃಷ್ಣಪ್ಪ ಮಾತನಾಡಿ, ಕೆಲ ಪೋಷಕರು ಸರ್ಕಾರಿ ಶಾಲೆ ಎಂದು ತಾತ್ಸಾರ ಮಾಡುತ್ತಾರೆ. ಇದು ಸರಿಯಲ್ಲ, ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿ ಜೀವನದಲ್ಲಿ ಕಷ್ಟ ಪಟ್ಟವರು ಮುಂದೆ ಇತಿಹಾಸ ಬರೆದಿದ್ದಾರೆ ಎಂಬುದನ್ನು ಮರೆಯಬಾರದು. ಇಂದು ಸಮಾಜದಿಂದ ನಾವು ಪಡೆದದ್ದನ್ನು ಮತ್ತೆ ಸಮಾಜಕ್ಕೆ ವಾಪಸ್ಸು ದುಪ್ಪಟ್ಟಾಗಿ ನೀಡಬೇಕು ಎಂದು ಹೇಳಿದರು.

ತಾಲೂಕಿನ ಶ್ರೀರಾಮಪುರ, ಕೊಂಡೆನಹಳ್ಳಿ, ನಾಯನಹಳ್ಳಿ ಹಾಗೂ ಅಂಗರೇಖನಹಳ್ಳಿ ಕ್ಲಸ್ಟರ್ ವ್ಯಾಪ್ತಿಯ ಸುಮಾರು 45ಕ್ಕೂ ಅಧಿಕ ಸರ್ಕಾರಿ ಶಾಲಾ ಮಕ್ಕಳಿಗೆ 5000ಕ್ಕೂ ಅಧಿಕ ನೋಟ್ ಪುಸ್ತಕಗಳನ್ನು ಎಂಎನ್ಆರ್ ಟ್ರಸ್ಟ್ ವತಿಯಿಂದ ವಿತರಣೆ ಮಾಡಲಾಯಿತು.

ಟ್ರಸ್ಟ್ ನ ಸಹ ಕಾರ್ಯದರ್ಶಿ ನರಸಿಂಹಮೂರ್ತಿ, ನಾಯನಹಳ್ಳಿ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಸೌಮ್ಯ, ಶ್ರೀರಾಂಪುರ ಶಾಲೆಯ ಮುಖ್ಯ ಶಿಕ್ಷಕ ಮೆಹಬೂಬ್ ಬಾಷಾ, ಸಹ ಶಿಕ್ಷಕರಾದ ಮಂಜುನಾಥ್, ಉಷಾ, ಶಾಹಿಂತಾಜ್, ಕೊಂಡೇನಹಳ್ಳಿ ಶಾಲೆ ಮುಖ್ಯ ಶಿಕ್ಷಕ ಮೈಲಾರಪ್ಪ, ತಾಳಹಳ್ಳಿ ಮೋಹನ್, ತಿಮ್ಮನಹಳ್ಳಿ ಜಬಿವುಲ್ಲಾ, ಕಣಿತಹಳ್ಳಿ ಆರ್ ಎಸ್.ಎನ್.ಬಾಬು, ಕಡಸಿಗೇನಹಳ್ಳಿಯ ವಿನೋದ್ ಕುಮಾರ್, ನಾಯನಹಳ್ಳಿಶಾಲೆಯ ಮುಖ್ಯ ಶಿಕ್ಷಕ ಜಗನ್ನಾಥ್, ಲ ರಾಮಚಂದ್ರಪ್ಪ, ಅಣಕನೂರು ಚಂದ್ರಶೇಖರ್, ಅಜ್ಜವಾರ ಗಾಯಿತ್ರಿ, ಕೇಶವಾರ ಚಂದ್ರಶೇಖರ್, ಸುಧಾ, ಅಂಗರೇಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಟಿ ಎಸ್ ರೇಣುಕಾ, ಕುಮಾರಿ ಮೇರಿಬರ್ನಾಡಿಯಾ, ವಿನುತಾ ಟಿಎನ್, ತಹಸೀನ್ ಕೌಸರ್, ಎಸ್ ಅನಿತಾ ಶಶಿಕಲಾ, ಮತ್ತಿತರ ಶಾಲೆಗಳ ಸಹಶಿಕ್ಷಕರು ಇದ್ದರು.