ಡ್ಯಾಂ ಭರ್ತಿ ಇದ್ರೂ ಸ್ಮಾರ್ಟ್‌ ಸಿಟೀಲಿ ನೀರಿಗೆ ತತ್ವಾರ!

| Published : Feb 24 2024, 02:35 AM IST

ಡ್ಯಾಂ ಭರ್ತಿ ಇದ್ರೂ ಸ್ಮಾರ್ಟ್‌ ಸಿಟೀಲಿ ನೀರಿಗೆ ತತ್ವಾರ!
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯಪೈಪ್‌ಲೈನ್‌ಗೆ ಕನ್ನ ಕೊರೆದವರಲ್ಲಿ ಹೆಚ್ಚಿನವರು ಶ್ರೀಮಂತ ವರ್ಗ. ವಾಣಿಜ್ಯ ಕಟ್ಟಡಗಳು, ಸಭಾಂಗಣಗಳಿಗೆ ಹೀಗೆ ಸಾಲು ಸಾಲು ಕಳ್ಳಗಿಂಡಿಗಳನ್ನು ಕೊರೆದಿದ್ದಾರೆ. ಜತೆಗೆ ಕೃಷಿ ಚಟುವಟಿಕೆಗಳಿಗೂ ಬಹಳಷ್ಟು ನೀರು ಪೈಪ್‌ನಿಂದಲೇ ಕಳ್ಳತನವಾಗುತ್ತಿದೆ. ತೆರಿಗೆ ಕಟ್ಟುವ ಮಂಗಳೂರು ಮಹಾನಗರ ಪಾಲಿಕೆ ಜನರಿಗೆ ಮಾತ್ರ ಖಾಲಿ ಚೊಂಬು. ಜತೆಗೆ ಬೃಹತ್‌ ಶಿಕ್ಷಣ ಸಂಸ್ಥೆಗೂ ಇಲ್ಲಿಂದಲೇ ನೀರು ಹರಿಸಲಾಗುತ್ತಿದೆ.

ಸಂದೀಪ್‌ ವಾಗ್ಲೆ

ಕನ್ನಡಪ್ರಭ ವಾರ್ತೆ ಮಂಗಳೂರು ಮಂಗಳೂರು ಮಹಾನಗರ ಪಾಲಿಕೆಗೆ ನೀರು ಪೂರೈಸುವ ತುಂಬೆ ಅಣೆಕಟ್ಟಿನಲ್ಲಿ ಭರ್ತಿ ಆರು ಅಡಿ ನೀರು ನಿಂತು ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದೆ. ನಿತ್ಯವೂ ಅಣೆಕಟ್ಟಿನಿಂದ ಇಡೀ ನಗರಕ್ಕೆ ಸಾಕಾಗುವಷ್ಟು ನೀರು ಪಂಪ್‌ ಮಾಡ್ತಿದ್ದಾರೆ. ಆದರೆ ನಗರದ ಬಹಳಷ್ಟು ಕಡೆಗಳಲ್ಲಿ ಕುಡಿಯುವ ನೀರಿಗೆ ಮಾತ್ರ ತತ್ವಾರ!

ಇದು ‘ಸ್ಮಾರ್ಟ್‌ ಸಿಟಿ’ ಮಂಗಳೂರು ಮಹಾನಗರದ ಜನರ ಗೋಳು. ಇರುವ 60 ವಾರ್ಡ್‌ಗಳ ಪೈಕಿ 30ರಷ್ಟು ವಾರ್ಡ್‌ಗಳಲ್ಲಿ ಒಂದಲ್ಲ ಒಂದು ಕಡೆ ನೀರಿನ ಸಮಸ್ಯೆಯಿದೆ ಎಂದು ಪಾಲಿಕೆ ಸದಸ್ಯರು ಹೇಳುತ್ತಾರೆ. ಪ್ರಸ್ತುತ ಅಣೆಕಟ್ಟಿನಲ್ಲಿ ಉಕ್ಕಿ ಹರಿಯುವಷ್ಟು ನೀರಿದ್ದರೂ ಮನೆಗಳ ನಳ್ಳಿಯಲ್ಲೇಕೆ ಸರಿಯಾಗಿ ನೀರು ಬರಲ್ಲ ಎನ್ನುವುದೇ ಯಕ್ಷಪ್ರಶ್ನೆ.

ನೀರಿಗೂ ಹಾಕ್ತಾರೆ ‘ಕನ್ನ’!:

ತುಂಬೆ ಅಣೆಕಟ್ಟಿನಿಂದ 160 ಎಂಎಲ್‌ಡಿ (ಮಿಲಿಯನ್‌ ಲೀಟರ್‌ ಪರ್‌ ಡೇ) ನೀರು ಪಂಪ್‌ ಆಗುತ್ತಿದೆ. ಆದರೆ ತುಂಬೆಯಿಂದ ನಗರಕ್ಕೆ ಬರುವ ಹೊತ್ತಿಗೆ ಅದು 120 ಎಂಎಲ್‌ಡಿಗೆ ಇಳಿದಿರುತ್ತದೆ! ಯಾಕೆಂದರೆ ಕಾನೂನಿನ ಚಾಪೆ ಅಡಿಯಲ್ಲಿ ನುಸುಳುವ ನಿಸ್ಸೀಮ ಕಳ್ಳರು ಮುಖ್ಯ ಪೈಪ್‌ಲೈನ್‌ಗೇ ದೊಡ್ಡ ಮಟ್ಟದಲ್ಲಿ ಅಲ್ಲಲ್ಲಿ ಕನ್ನ ಕೊರೆದಿದ್ದಾರೆ. ಬರೋಬ್ಬರಿ 110ಕ್ಕೂ ಅಧಿಕ ಇಂಥ ಅಕ್ರಮ ಸಂಪರ್ಕಗಳಿಂದ ಪ್ರತಿದಿನ 40 ಎಂಎಲ್‌ಡಿ ನೀರು ನಗರಕ್ಕೆ ಕೊರತೆಯಾಗುತ್ತಿದೆ. ಇದು ಈಗ ಉದ್ಭವಿಸಿದ ಸಮಸ್ಯೆಯಲ್ಲ, ಆದರೆ ಇತ್ತೀಚಿನ ದಿನಗಳಲ್ಲಿ ನೀರು ಕಳವಿನ ಪ್ರಮಾಣ ಹೆಚ್ಚಿದೆ. ವಾಣಿಜ್ಯ ಉದ್ದೇಶಕ್ಕೆ ಕಳವು:

ಹೀಗೆ ಮುಖ್ಯಪೈಪ್‌ಲೈನ್‌ಗೆ ಕನ್ನ ಕೊರೆದವರಲ್ಲಿ ಹೆಚ್ಚಿನವರು ಶ್ರೀಮಂತ ವರ್ಗ. ವಾಣಿಜ್ಯ ಕಟ್ಟಡಗಳು, ಸಭಾಂಗಣಗಳಿಗೆ ಹೀಗೆ ಸಾಲು ಸಾಲು ಕಳ್ಳಗಿಂಡಿಗಳನ್ನು ಕೊರೆದಿದ್ದಾರೆ. ಜತೆಗೆ ಕೃಷಿ ಚಟುವಟಿಕೆಗಳಿಗೂ ಬಹಳಷ್ಟು ನೀರು ಪೈಪ್‌ನಿಂದಲೇ ಕಳ್ಳತನವಾಗುತ್ತಿದೆ. ತೆರಿಗೆ ಕಟ್ಟುವ ಮಂಗಳೂರು ಮಹಾನಗರ ಪಾಲಿಕೆ ಜನರಿಗೆ ಮಾತ್ರ ಖಾಲಿ ಚೊಂಬು. ಜತೆಗೆ ಬೃಹತ್‌ ಶಿಕ್ಷಣ ಸಂಸ್ಥೆಗೂ ಇಲ್ಲಿಂದಲೇ ನೀರು ಹರಿಸಲಾಗುತ್ತಿದೆ.

ಕನ್ನ ತಡೆದರೂ ಮತ್ತೆ ತೂತು:

ಕೆಲ ದಿನಗಳ ಹಿಂದೆ ನಗರದಲ್ಲಿ ನೀರು ಪೂರೈಕೆಯಲ್ಲಿ ತೀವ್ರ ಅಸ್ತವ್ಯಸ್ತ ಪರಿಸ್ಥಿತಿ ಉದ್ಭವಿಸಿದ್ದ ಸಂದರ್ಭ ಪಾಲಿಕೆ ಆಡಳಿತವು ಮೂರ್ನಾಲ್ಕು ತಂಡಗಳನ್ನು ರಚಿಸಿ ಇಂಥ ಅಕ್ರಮ ನೀರಿನ ಸಂಪರ್ಕಗಳನ್ನು ಕಡಿತಗೊಳಿಸಿ, ನೀರಿನ ನಿರ್ವಹಣೆ ಮಾಡಿದ್ದರಿಂದ ಸ್ವಲ್ಪ ಮಟ್ಟಿಗೆ ಸಮಸ್ಯೆ ನೀಗಿತ್ತು. ಆದರೆ ಕೆಲವೇ ದಿನಗಳಲ್ಲಿ ಮತ್ತೆ ಅಕ್ರಮ ಸಂಪರ್ಕದಾರರು ಕನ್ನ ಕೊರೆದು ನೀರು ಕಳವು ಮಾಡತೊಡಗಿರುವ ಆರೋಪಗಳು ಕೇಳಿಬಂದಿವೆ.

ಆಡಳಿತಕ್ಕೆ ಚುರುಕು ಮುಟ್ಟಿಸಿ:

“ಇತ್ತೀಚೆಗೆ ನಡೆದ ನೀರಿನ ವಿಶೇಷ ಸಭೆಯಲ್ಲಿ ವಿರೋಧ ಪಕ್ಷ ಮಾತ್ರವಲ್ಲದೆ, ಆಡಳಿತ ಪಕ್ಷದ ಬಹುತೇಕ ಸದಸ್ಯರು ಕೂಡ ನೀರಿನ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದರು. 30ಕ್ಕೂ ಅಧಿಕ ವಾರ್ಡ್‌ಗಳಲ್ಲಿ ನೀರಿಗೆ ಸಮಸ್ಯೆ ಇದೆ. ನೀರು ಪೋಲಾಗುವುದನ್ನು ಕೂಡಲೆ ತಡೆಯಲು ಆಡಳಿತಕ್ಕೆ ಚುರುಕು ಮುಟ್ಟಿಸಬೇಕು. ಬೇಸಗೆಯಲ್ಲಿ ನೀರಿನ ನಿರ್ವಹಣೆ ಸರಿಯಾದ ರೀತಿ ಆಗದಿದ್ದರೆ ತೀವ್ರ ಸಮಸ್ಯೆ ಉಂಟಾಗಲಿದೆ” ಎಂದು ಪಾಲಿಕೆಯ ವಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ ಹೇಳುತ್ತಾರೆ.

“ಮುಖ್ಯ ಪೈಪ್‌ಲೈನ್‌ನಿಂದ ನೀರಿನ ಅಕ್ರಮ ಸಂಪರ್ಕಗಳನ್ನು ತಪ್ಪಿಸಿ, ನಿರ್ವಹಣೆಯನ್ನು ಸರಿಯಾಗಿ ಮಾಡಿದರೆ ಸಮಸ್ಯೆ ನೀಗಲಿದೆ. ನೀರು ಪೂರೈಕೆ ಸರಿಯಾಗಿ ಮಾಡದಿದ್ದರೆ ತೆರಿಗೆ ಕಟ್ಟಬೇಡಿ ಎನ್ನುವ ಹೋರಾಟ ಮಾಡಬೇಕಾಗುತ್ತದೆ” ಎಂದು ಈ ಹಿಂದಿನ ವಿಪಕ್ಷ ನಾಯಕ ನವೀನ್‌ ಡಿಸೋಜ ಎಚ್ಚರಿಸಿದ್ದಾರೆ.

ನೀರು ಸೋರಿಕೆಗೆ ತಡೆಗೆ ಕ್ರಮ: ಮೇಯರ್‌

ನಗರದಲ್ಲಿ ಕೆಲವು ವಾರ್ಡ್‌ಗಳಲ್ಲಿನ ನೀರಿನ ಸಮಸ್ಯೆ ನೀಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ತುಂಬೆ- ಮಂಗಳೂರು ಪೈಪ್‌ಲೈನ್‌ನ ಅಕ್ರಮ ಸಂಪರ್ಕಗಳನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೆ ಈ ಪೈಪ್‌ಲೈನ್‌ ಉದ್ದಕ್ಕೂ ಅಕ್ರಮ ಸೋರಿಕೆ ತಡೆಯಲು 8 ಮಂದಿ ವಾಲ್‌ಮ್ಯಾನ್‌ಗಳನ್ನು ನೇಮಕ ಮಾಡಲಾಗಿದೆ. ತುಂಬೆ ಮತ್ತು ಪಡೀಲ್‌ನಲ್ಲಿ ಬಲ್ಕ್‌ ನೀರಿನ ಮೀಟರ್ ಅಳವಡಿಸಲಾಗಿದೆ. ಪ್ರಸ್ತುತ 160 ಎಂಎಲ್‌ಡಿ ನೀರು ಪಂಪಿಂಗ್ ಆಗುತ್ತಿದ್ದರೂ 120 ಎಂಎಲ್‌ಡಿಯಷ್ಟು ನೀರು ಮಾತ್ರ ನಗರಕ್ಕೆ ಬರುತ್ತಿದ್ದು, 40 ಎಂಎಲ್‌ಡಿ ನೀರಿನ ಕೊರತೆ ಆಗುತ್ತಿದೆ. ಈ ಸಮಸ್ಯೆ ಮುಂದುವರಿದರೆ ಸುರತ್ಕಲ್‌ ಭಾಗಕ್ಕೆ ಒಂದು ದಿನ, ಮಂಗಳೂರು ನಗರಕ್ಕೆ ಒಂದು ದಿನ ನೀರು ಪೂರೈಕೆಯ ಉದ್ದೇಶವೂ ಇದೆ, ಆದರೆ ಇದು ನೀರಿನ ರೇಶನಿಂಗ್‌ ಆಗಿರಲ್ಲ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.