ಸಾರಾಂಶ
ಜಿ .ದೇವರಾಜ ನಾಯ್ಡು
ಕನ್ನಡಪ್ರಭ ವಾರ್ತೆ ಹನೂರುಮೂಲಭೂತ ಸೌಕರ್ಯಕ್ಕಾಗಿ ಆಗ್ರಹಿಸಿ ಚುನಾವಣಾ ಬಹಿಷ್ಕರಿಸಿ, ಹೋರಾಟ ವಿಕೋಪಕ್ಕೆ ತಿಳಿದು ಮತಗಟ್ಟೆ ಧ್ವಂಸ ನಡೆದ ಇಂಡಿಗನತ್ತ ಗ್ರಾಮದಲ್ಲಿ ಈಗಲೂ ಕರಾಳ ಛಾಯೆ ಆವರಿಸಿದೆ. ಎಲ್ಲೆಲ್ಲೂ ನೀರವ ಮೌನ. ತಿಂಗಳಾದರೂ ಘಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ, ಶಾಸಕ ಮುಖಮಾಡಿಲ್ಲ. ಇನ್ನಾದರೂ ಸಿಗಲಿದೆಯೇ ಮೂಲಸೌಕರ್ಯ ಎಂದು ನಿರೀಕ್ಷೆ ಹೊತ್ತಿದ್ದಾರೆ ಕಾಡಿನ ಮಕ್ಕಳು. ಲೋಕಸಭಾ ಚುನಾವಣೆ ಹಿನ್ನೆಲೆ ಕರ್ನಾಟಕದ ಮೊದಲ ಹಂತದ ಮತದಾನದ ವೇಳೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ಏ.26ರಂದು ನಡೆದ ಮತಗಟ್ಟೆ ಧ್ವಂಸ ಪ್ರಕರಣಕ್ಕೆ ಇದೀಗ ಒಂದು ತಿಂಗಳಾಗಿದ್ದು ಈಗಲೂ ಭಯದ ಆತಂಕದ ಛಾಯೆ ಆವರಿಸಿದ್ದು ಮುಂದೇನು ಎಂಬ ಪ್ರಶ್ನೆಯಿಂದ ಜನತೆ ಹೊರಬಂದಿಲ್ಲ.ಮೆಂದರೆ ಸ್ಥಳಾಂತರ ಮಾತಾಗಿ ಉಳಿಯದಿರಲಿ:
ಮತದಾನ ನಡೆದ ಘಟನೆಯಿಂದ ಗ್ರಾಮ ಸ್ಥಳಾಂತರಕ್ಕೆ ಮುಂದಾಗಿರುವ ಮೆಂದರೆ ನಿವಾಸಿಗಳಿಗೆ ಕಷ್ಟಕ್ಕೆ ಮುಕ್ತಿ ಕೊಡಬೇಕಾಗಿದೆ. ನಾಲ್ಕೈದು ವರ್ಷಗಳಿಂದಲೂ ಕೂಡ ಚಂಗಡಿ ಕಾಡೊಳಗಿನ ಕುಗ್ರಾಮವನ್ನು ಸ್ಥಳಾಂತರ ಮಾಡಲಾಗುತ್ತದೆ ಎಂದು ಜಿಲ್ಲಾಡಳಿತ ಹೇಳಿಕೊಂಡೆ ಬರುತ್ತಿದ್ದರೂ ಇನ್ನೂ ಸಹ ಅನುಷ್ಠಾನಕ್ಕೆ ಬಂದಿಲ್ಲ. ಈಗ ಇಂಡಿಗನತ್ತ ಗ್ರಾಮದ ಬಳಿ ಬರುವ ಮೆಂದಾರೆ ಗ್ರಾಮವನ್ನು ನಿವಾಸಿಗಳ ಮನವಿ ಮೇರೆಗೆ ಅಧಿಕಾರಿಗಳು ಸ್ಥಳಾಂತರದ ಭರವಸೆ ನೀಡಿದ್ದಾರೆ. ಹೀಗಾಗಿ ಗ್ರಾಮದ ನಿವಾಸಿಗಳ ಮನವಿಗೆ ಸರ್ಕಾರ ಜಿಲ್ಲಾಡಳಿತ ಮುಕ್ತಿ ನೀಡುವವರೇ ಎಂಬ ನಿರೀಕ್ಷೆಯಲ್ಲಿದ್ದಾರೆ ಇಲ್ಲಿನ ಜನ. ಈಗಲೂ ಇದೆ ಬಂಧನ ಭೀತಿ:ಗಲಭೆ ಪ್ರಕರಣದಲ್ಲಿ 46 ಮಂದಿ 21 ದಿನಗಳ ಕಾಲ ಬಂಧನದಲ್ಲಿದ್ದು ಹೊರ ಬಂದಿದ್ದಾರೆ. ಇನ್ನೂ ಕೆಲವರು ಬಂಧನ ಭೀತಿಯಲ್ಲಿದ್ದಾರೆ. ಜಿಲ್ಲಾಧಿಕಾರಿಗಳು ಘಟನೆಯ ಬೆನ್ನಲ್ಲೇ ಗ್ರಾಮಕ್ಕೆ ತೆರಳಿ ಧೈರ್ಯ ತುಂಬಿ ಇನ್ನು ಮುಂದೆ ಪೊಲೀಸರು ಯಾರನ್ನು ಬಂಧಿಸುವುದಿಲ್ಲ ಎಂದು ಹೇಳಿದ್ದರೂ ಸಹ ಮತ್ತೇ ಘಟನೆಗೆ ಸಂಬಂಧಿಸಿದಂತೆ ವ್ಯಕ್ತಿ ಒಬ್ಬರನ್ನು ಪೊಲೀಸರು ಬಂಧಿಸಿರುವುದು ನಿರಾಳವಾಗಿದ್ದ ಗ್ರಾಮದ ಜನತೆ ಮತ್ತೆ ಬಂಧನ ಭೀತಿ ಮೂಡುವಂತೆ ಮಾಡಿದೆ. ಮತಗಟ್ಟೆ ಧ್ವಂಸ ನಡೆದು ತಿಂಗಳಾದರೂ ಜಿಲ್ಲಾ ಉಸ್ತುವಾರಿ ಸಚಿವ ಕೆ ವೆಂಕಟೇಶ್ ಹಾಗೂ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಆರ್. ಮಂಜುನಾಥ್ 2 ಗ್ರಾಮಗಳಿಗೆ ಬಂದು ಜನರ ಕಷ್ಟ ಕೇಳುವ ಮನಸ್ಸು ಮಾಡಿಲ್ಲ. ನೀತಿ ಸಂಹಿತೆ ನೆಪ ಬದಿಗೊತ್ತಿ ಸೌಜನ್ಯಕ್ಕಾದರೂ ಸ್ಥಳೀಯ ಶಾಸಕರು ಗ್ರಾಮಕ್ಕೆ ಬಂದು ಜನರ ಕಷ್ಟ ಕೇಳದಿರುವುದು ಇಲ್ಲಿನ ಜನರ ಸಮಸ್ಯೆ ಬಗೆಹರಿಯುವುದು ದೂರದ ಬೆಟ್ಟದ ಲಕ್ಷಣವಾಗಿದೆ. ನಿರುದ್ಯೋಗ, ಮೂಲಸೌಕರ್ಯವೇ ಬಹುದೊಡ್ಡ ಸಮಸ್ಯೆ ಮಲೆ ಮಾದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ಇಂಡಿಗನತ್ತ ಮತ್ತು ಮೆಂದಾರೆ, ತುಳಸಿಕೆರೆ, ಪಡಸಲನತ್ತ, ತೇಕಣೆ, ದೊಡ್ಡಣ್ಣೆ ವಿವಿಧ ಗ್ರಾಮಗಳಿಗೆ ಇನ್ನು ಮುಂದಾದರೂ ಮೂಲಭೂತ ಸೌಕರ್ಯ ಸಿಗಲಿ. ಮಲೆ ಮಾದೇಶ್ವರನ ಆರಾಧ್ಯ ದೈವನ ಪೂಜಿಸುವ ಕಾಡಿನ ಮಕ್ಕಳ ಬಗ್ಗೆ ಸರ್ಕಾರ ಹಾಗೂ ಜನಪ್ರತಿನಿಧಿ ಅಧಿಕಾರಿಗಳು ಕರುಣೆ ತೋರುವ ಮೂಲಕ ಮೂಲಭೂತ ಸೌಲಭ್ಯ ಕಲ್ಪಿಸುವ ಜೊತೆಗೆ ನಿರುದ್ಯೋಗ ಸಮಸ್ಯೆ ನಿವಾರಿಸಬೇಕಾಗಿದೆ.ಜನಪ್ರತಿನಿಧಿಗಳಿಗೆ ಜವಾಬ್ದಾರಿ ಏಕೆ ಇಲ್ಲ ?:
ಘಟನೆ ನಡೆದು ಇಡೀ ರಾಷ್ಟ್ರ ರಾಜ್ಯ ಮಟ್ಟದಲ್ಲಿ ಸುದ್ದಿಯಾದ ದಿನದಿಂದಲೂ ಸಹ ಅವಳಿ ಗ್ರಾಮಗಳಲ್ಲಿ ಜನತೆ ಭಯಭೀತರಾಗಿ ಇದ್ದಂತಹ ಸಂದರ್ಭದಲ್ಲಿ ಜಿಲ್ಲಾಡಳಿತ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವ ಮೂಲಕ ಇಲ್ಲಿನ ಜನರ ಸ್ವಲ್ಪಮಟ್ಟಿನ ನೆಮ್ಮದಿಗೆ ಕಾರಣರಾಗಿದ್ದಾರೆ. ಕಳೆದ ಒಂದು ತಿಂಗಳಿನಿಂದ ಗ್ರಾಮದತ್ತ ಮುಖ ಮಾಡದೇ ಇರುವ ಜನಪ್ರತಿನಿಧಿಗಳ ಅಸಹಕಾರದ ನಡುವೆ ಅಧಿಕಾರಿಗಳು ಗ್ರಾಮಗಳ ಅಭಿವೃದ್ಧಿಗೆ ಮುಂದಾಗುವರೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಜನರಿಗೆ ಹಲವಾರು ಯೋಜನೆಗಳ ಮೂಲಕ ವಿವಿಧ ಭಾಗ್ಯಗಳನ್ನು ನೀಡಿರುವ ಸರ್ಕಾರ ಮಲೆ ಮಾದೇಶ್ವರ ಬೆಟ್ಟದ ಗ್ರಾಪಂ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ಬಹುತೇಕವಾಗಿ ಗ್ರಾಮದ ಜನರು ನಿರುದ್ಯೋಗ ಅವಿದ್ಯಾವಂತ ಕೂಲಿ ಕಾರ್ಮಿಕರೇ ಹೆಚ್ಚಾಗಿದ್ದಾರೆ. ಇಲ್ಲಿನ ಕುಗ್ರಾಮದ ಜನರಿಗೆ ನಡೆದ ಘಟನೆಯ ಬಗ್ಗೆ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ಅವಿದ್ಯಾವಂತ ನಿರುದ್ಯೋಗಗಳಿಗೆ ತುಂಬಿರುವ ಗ್ರಾಮದ ಜನತೆಗೆ ಬೇಕಾಗಿದೆ ಸರ್ಕಾರದ ಕಾನೂನು ಅರಿವು ಮತ್ತು ಉದ್ಯೋಗದ ನೆರವಿನ ಭಾಗ್ಯ ಕಲ್ಪಿಸಬೇಕಾಗಿದೆ.