ಸಾರಾಂಶ
ರಾಜ್ಯದಲ್ಲಿ ರಸ್ತೆಗಳು ಕಿತ್ತು ಹೋಗಿದ್ದರೂ, ಆಸ್ಪತ್ರೆಗಳಲ್ಲಿ ಔಷಧಿಗಳು ಇಲ್ಲ ಎಂದರೂ ನೀವು ‘ಸೂಪರ್ ಆಗಿವೆ’ ಅಂತ ಸ್ಟೇಟಸ್ ಹಾಕಬೇಕು. ಆಸ್ಪತ್ರೆಗಳು ಅಮೆರಿಕದಂತಹ ಸೌಲಭ್ಯ ಹೊಂದಿವೆ ಎಂದು ಹೇಳಬೇಕು. ಇಲ್ಲದಿದ್ದರೆ ನಿಮ್ಮ ಮೇಲೆ ಕೇಸ್ ಬೀಳಬಹುದು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಲೇವಡಿ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ/ಮಂಗಳೂರು
ರಾಜ್ಯದಲ್ಲಿ ರಸ್ತೆಗಳು ಕಿತ್ತು ಹೋಗಿದ್ದರೂ, ಆಸ್ಪತ್ರೆಗಳಲ್ಲಿ ಔಷಧಿಗಳು ಇಲ್ಲ ಎಂದರೂ ನೀವು ‘ಸೂಪರ್ ಆಗಿವೆ’ ಅಂತ ಸ್ಟೇಟಸ್ ಹಾಕಬೇಕು. ಆಸ್ಪತ್ರೆಗಳು ಅಮೆರಿಕದಂತಹ ಸೌಲಭ್ಯ ಹೊಂದಿವೆ ಎಂದು ಹೇಳಬೇಕು. ಇಲ್ಲದಿದ್ದರೆ ನಿಮ್ಮ ಮೇಲೆ ಕೇಸ್ ಬೀಳಬಹುದು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಲೇವಡಿ ಮಾಡಿದ್ದಾರೆ.ಜನಾಕ್ರೋಶ ಯಾತ್ರೆಯ ಅಂಗವಾಗಿ ಬುಧವಾರ ಮಡಿಕೇರಿ ಹಾಗೂ ಮಂಗಳೂರಿನಲ್ಲಿ ನಡೆದ ಪ್ರತಿಭಟನಾ ಸಮಾವೇಶಗಳಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರಾಜ್ಯದ ಕಾಂಗ್ರೆಸ್ ಸರ್ಕಾರ ಇಂದು ಪ್ರತಿಯೊಬ್ಬರ ಮೇಲೆ 1 ಲಕ್ಷ ಸಾಲ ಹೊರಿಸಿದೆ. ಬಡವರ ರಕ್ತ ಹೀರಿ ಹೆಂಡತಿಗೆ 2 ಸಾವಿರ ಕೊಟ್ಟು, ಗಂಡನಿಂದ 5 ಸಾವಿರ ಕಿತ್ತುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಹಿಂದೂಗಳ ಹತ್ಯೆಯಾಗುತ್ತಿದೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿವೆ. ಬೆಂಗಳೂರಿನ ಕೆಫೆಯಲ್ಲಿ ಬ್ಲಾಸ್ಟ್ ಮಾಡಲಾಯಿತು. ಮಂಗಳೂರಿನಲ್ಲಿ ಕುಕ್ಕರ್ ಬ್ಲಾಸ್ಟ್ ಆಯಿತು. ಡಿಕೆಶಿ ಮಾತ್ರ ಅವರೆಲ್ಲಾ ನಮ್ಮ ಬ್ರದರ್ಸ್ ಎನ್ನುತ್ತಾರೆ. ಈಗ ಹಾಲು-ಆಲ್ಕೋಹಾಲ್ ಎಲ್ಲದರ ಮೇಲೂ ತೆರಿಗೆ ಹಾಕಲಾಗಿದೆ. ಇದು ಪ್ರಜಾಪ್ರಭುತ್ವ ಸರ್ಕಾರನಾ ಎಂದು ಅವರು ಪ್ರಶ್ನಿಸಿದರು.