ಕೂಲಿ ಮಾಡದಿದ್ದರೂ ಫಲಾನುಭವಿ ಖಾತೆಗೆ ಹಣ ವರ್ಗ!?

| Published : Jan 18 2024, 02:00 AM IST

ಸಾರಾಂಶ

ಕೊಳ್ಳೇಗಾಲತಾಲೂಕಿನ ದೊಡ್ಡಿಂದುವಾಡಿ ಗ್ರಾಪಂನಲ್ಲಿ ಬಸವ ವಸತಿ ಯೋಜನೆಯಡಿ ಕೂಲಿ ಮಾಡದಿದ್ದರೂ ಫಲಾನುಭವಿಯಲ್ಲದ ವ್ಯಕ್ತಿಯೊಬ್ಬರ ಖಾತೆಗೆ ಹಣ ಹಾಕುವ ಮೂಲಕ ಗ್ರಾಪಂನ ಪಿಡಿಓ ಕರ್ತವ್ಯಲೋಪ ಎಸಗುವ ಜೊತೆಗೆ ವಿವಾದಕ್ಕೂ ಈಡಾಗಿದ್ದಾರೆ. ದೊಡ್ಡಿಂದುವಾಡಿ ಗ್ರಾಪಂನ ಪ್ರಸಾದ್ ಗ್ರಾಪಂ ವ್ಯಾಪ್ತಿಯಲ್ಲಿ ಬಸವ ವಸತಿ ಯೋಜನೆಯಡಿ ಕೂಲಿ ಕೆಲಸವನ್ನೆ ನಿರ್ವಹಿಸಿರಲಿಲ್ಲ, ಹಾಗಿದ್ದರೂ ಆತನ ದೊಡ್ಡಿಂದುವಾಡಿ ಗ್ರಾಮ ಶಾಖೆ ಸಂಖ್ಯೆಯ 64142948060 ಖಾತೆಗೆ ದಿನಾಂಕ 10-11-2023ರಲ್ಲಿ 2 ಬಾರಿ ಕ್ರಮವಾಗಿ 1580 ,1896 ರು.ಗಳನ್ನು ಹಾಕುವ ಮೂಲಕ ಒಟ್ಟಾರೆ (3476 ರು.ಗಳನ್ನು) ಖಾತೆಗೆ ಜಮೆಯಾಗಿದ್ದು ಹಲವು ಸಂಶಯಕ್ಕೆಡೆ ಮಾಡಿಕೊಟ್ಟಿದೆ.

ಎನ್. ನಾಗೇಂದ್ರಸ್ವಾಮಿ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ತಾಲೂಕಿನ ದೊಡ್ಡಿಂದುವಾಡಿ ಗ್ರಾಪಂನಲ್ಲಿ ಬಸವ ವಸತಿ ಯೋಜನೆಯಡಿ ಕೂಲಿ ಮಾಡದಿದ್ದರೂ ಫಲಾನುಭವಿಯಲ್ಲದ ವ್ಯಕ್ತಿಯೊಬ್ಬರ ಖಾತೆಗೆ ಹಣ ಹಾಕುವ ಮೂಲಕ ಗ್ರಾಪಂನ ಪಿಡಿಓ ಕರ್ತವ್ಯಲೋಪ ಎಸಗುವ ಜೊತೆಗೆ ವಿವಾದಕ್ಕೂ ಈಡಾಗಿದ್ದಾರೆ. ದೊಡ್ಡಿಂದುವಾಡಿ ಗ್ರಾಪಂನ ಪ್ರಸಾದ್ ಗ್ರಾಪಂ ವ್ಯಾಪ್ತಿಯಲ್ಲಿ ಬಸವ ವಸತಿ ಯೋಜನೆಯಡಿ ಕೂಲಿ ಕೆಲಸವನ್ನೆ ನಿರ್ವಹಿಸಿರಲಿಲ್ಲ, ಹಾಗಿದ್ದರೂ ಆತನ ದೊಡ್ಡಿಂದುವಾಡಿ ಗ್ರಾಮ ಶಾಖೆ ಸಂಖ್ಯೆಯ 64142948060 ಖಾತೆಗೆ ದಿನಾಂಕ 10-11-2023ರಲ್ಲಿ 2 ಬಾರಿ ಕ್ರಮವಾಗಿ 1580 ,1896 ರು.ಗಳನ್ನು ಹಾಕುವ ಮೂಲಕ ಒಟ್ಟಾರೆ (3476 ರು.ಗಳನ್ನು) ಖಾತೆಗೆ ಜಮೆಯಾಗಿದ್ದು ಹಲವು ಸಂಶಯಕ್ಕೆಡೆ ಮಾಡಿಕೊಟ್ಟಿದೆ.

ಈಗಾಗಲೇ ಅರ್ಜಿದಾರ ನನಗೆ ಹಣ ಬೇಡ, ನಾನು ಕೂಲಿ ನಿರ್ವಹಿಸಿಲ್ಲ, ಅರ್ಜಿ ಹಾಕಿಲ್ಲ, ಎನ್ಎಂಆರ್ ಗೂ ಸಹಿ ಹಾಕಿಲ್ಲ, ಹಾಗಾಗಿ ಹಿರಿಯ ಅಧಿಕಾರಿಗಳು ಪರಿಶೀಲಿಸಿ, ನನ್ನ ಖಾತೆಯಲ್ಲಿರುವ ಹಣ ಹಿಂಪಡೆಯಬೇಕು, ಜೊತೆಗೆ ಸರ್ಕಾರಿ ಅಧಿಕಾರಿಯಾಗಿ ಸರ್ಕಾರಿ ಹಣ ವ್ಯರ್ಥಕ್ಕೆ ಸಹಕಾರ ನೀಡಿದ ಪಿಡಿಒ ಅವರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಜಿಪಂ ಸಿಇಒಗೆ ಇತ್ತೀಚೆಗೆ ದೂರು ನೀಡಿದ್ದರು.

ಈ ಸಂಬಂಧ ಕನ್ನಡಪ್ರಭ ಜ.11ರಲ್ಲಿ ಕೂಲಿ ಮಾಡದಿದ್ದರೂ ಖಾತೆಗೆ ಬಂತು ನರೇಗಾ ಹಣ ಎಂಬ ಶೀರ್ಷಿಕೆಯಡಿ ಸವಿವರ ವರದಿಯನ್ನು ಪ್ರಕಟಿಸಲಾಗಿತ್ತು.

ಒಂಬಡ್ಸ್ ಮ್ಯಾನ್ ಪರಿಶೀಲನೆ:

ಕನ್ನಡಪ್ರಭ ವರದಿ ಹಿನ್ನೆಲೆ ಒಂಬಡ್ಸ್ ಮ್ಯಾನ್ ಶಂಕರ್ ಅವರು ಗ್ರಾಪಂಗೆ ಭೇಟಿ ನೀಡಿ ಕಡತ ಪರಿಶೀಲಿಸಿದರು. ಈ ವೇಳೆ ಹಾಜರಿದ್ದ ದೂರುದಾರ ಪ್ರಸಾದ್ ನಾನು ಕೂಲಿ ಮಾಡಿಲ್ಲ, ನನಗೆ ಹಣ ಬೇಡ ಎಂದು ಹೇಳಿಕೆ ನೀಡಿದ್ದ. ಈ ವೇಳೆ ಒಂಬಡ್ಸ್ ಮ್ಯಾನ್ ಸಹ ಫಲಾನುಭವಿಯಿಂದ ನಮೂನೆ 6 ಮತ್ತು 9ಕ್ಕೆ ಸಹಿ ಪಡೆಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಲಿಖಿತ ಪತ್ರಕ್ಕೆ ಪಿಡಿಓ ಮತ್ತು ದೂರುದಾರಿಂದ ಸಹಿ ಪಡೆದು ನಿರ್ಗಮಿಸಿದ್ದರು.

ಮತ್ತೊಂದು ಪತ್ರ ನೀಡಿದ ದೂರುದಾರ:

ಒಂಬಡ್ಸ್ ಮ್ಯಾನ್ ಭೇಟಿ ಬಳಿಕ ಜ.16ರಂದು ದೂರುದಾರ ಒಂಬಡ್ಸ್‌ ಮ್ಯಾನ್ ಗೆ ಮತ್ತೊಂದು ಲಿಖಿತ ದೂರು ನೀಡಿದ್ದು ನಾನು ಎನ್ಎಂಆರ್ ಗೂ ಸಹಿ ಹಾಕಿಲ್ಲ, ಕೂಲಿ ಕೆಲಸ ಕೇಳಿ ಅರ್ಜಿಹಾಕಿಲ್ಲ, ಹಾಗಿದ್ದರೂ ಸಹಾ ಹಣ ಹಾಕುವ ಮೂಲಕ ಅಧಿಕಾರಿಗಳು ಸರ್ಕಾರಿ ಹಣ ವ್ಯರ್ಥಕ್ಕೆ ಕಾರಣರಾಗಿದ್ದು ಹಣ ಹಿಂಪಡೆಯುವ ಮೂಲಕ ಲೋಪ ಎಸಗಿದ ಪಿಡಿಒ ವಿರುದ್ಧ ಕ್ರಮಕೈಗೊಳ್ಳಿ ಎಂದು ದೂರು ನೀಡಿದ್ದಾರೆ.

ಈ ಪ್ರಕರಣ ಈಗ ಹಿರಿಯ ಅಧಿಕಾರಿಗಳ ಅಂಗಳದಲ್ಲಿದ್ದು ಮುಂದಾಗುವ ಬೆಳವಣಿಗೆ ಕಾದು ನೋಡಬೇಕಿದೆ. ಏತನ್ಮಧ್ಯೆ, ಪ್ರಕರಣ ತನಿಖೆ ನಡೆಸಿ ಆರೋಪ ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಜಿಪಂ ಸಿಇಒಗೆ ಕನ್ನಡಪ್ರಭಕ್ಕೆ ತಿಳಿಸಿದರು.