ರಾಜ್ಯಕ್ಕೆ ಅನ್ಯಾಯವಾದರೂ ಬಾಯಿ ಬಿಡದ ಬಿಜೆಪಿ ಸಂಸದರು: ವಿನಯ ಕುಲಕರ್ಣಿ

| Published : May 02 2024, 12:18 AM IST

ಸಾರಾಂಶ

ಕೇಂದ್ರ ಸರ್ಕಾರ ಬರೀ‌ ನಾಲ್ವರು ಶ್ರೀಮಂತ ಉದ್ಯಮಿಗಳ ಬರೋಬ್ಬರಿ 4 ಲಕ್ಷ 36 ಸಾವಿರ ಕೋಟಿ ಸಾಲಮನ್ನಾ ಮಾಡಿದೆ. ಬಡವರು, ರೈತರು, ದೀನ ದಲಿತರ ಬಗ್ಗೆ ಬಿಜೆಪಿಗೆ ಎಳ್ಳಷ್ಟೂ ಕಾಳಜಿ ಇಲ್ಲ. ದುರುದ್ದೇಶದ ರಾಜಕಾರಣ ಮಾಡಲಾಗುತ್ತಿದೆ ಎಂದು ವಿನಯ ಕುಲಕರ್ಣಿ ಆರೋಪಿಸಿದ್ದಾರೆ.

ಹಾವೇರಿ: ಕೇಂದ್ರ ಬಿಜೆಪಿ ಸರ್ಕಾರದಿಂದ ರಾಜ್ಯಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದ್ದರೂ ಬಿಜೆಪಿಯ ಯಾವೊಬ್ಬ ಸಂಸದನೂ ಬಾಯಿ ಬಿಡಲಿಲ್ಲ. ವಿರೋಧ ಪಕ್ಷಗಳ ನಾಯಕರಿಗೆ ಅನಗತ್ಯವಾಗಿ ಕಿರುಕುಳ ನೀಡಿ, ಭಯ ಹುಟ್ಟಿಸಲಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ವಿನಯ ಕುಲಕರ್ಣಿ ಹೇಳಿದರು.

ನಗರದ ಶಿವಶಕ್ತಿ ಪ್ಯಾಲೇಸನಲ್ಲಿ ಬುಧವಾರ ನಡೆದ ಜಿಲ್ಲೆಯ ಭೋವಿ ಸಮಾಜದ ಮುಖಂಡರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ಬರೀ‌ ನಾಲ್ವರು ಶ್ರೀಮಂತ ಉದ್ಯಮಿಗಳ ಬರೋಬ್ಬರಿ ₹4 ಲಕ್ಷ 36 ಸಾವಿರ ಕೋಟಿ ಸಾಲಮನ್ನಾ ಮಾಡಿದೆ. ಬಡವರು, ರೈತರು, ದೀನ ದಲಿತರ ಬಗ್ಗೆ ಬಿಜೆಪಿಗೆ ಎಳ್ಳಷ್ಟೂ ಕಾಳಜಿ ಇಲ್ಲ. ದುರುದ್ದೇಶದ ರಾಜಕಾರಣ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಶ್ರೀನಿವಾಸ ‌ಮಾನೆ ಮಾತನಾಡಿ, ಶೋಷಿತರು, ದಮನಿತರಿಗೆ ಶಕ್ತಿ ತುಂಬಿದ್ದು ಕಾಂಗ್ರೆಸ್. ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವ ಪಕ್ಷ ಕಾಂಗ್ರೆಸ್. ಮೀಸಲಾತಿ ಅವಕಾಶ ಕಲ್ಪಿಸಿದ್ದು ಕಾಂಗ್ರೆಸ್. ಇದನ್ನು ಯುವಪೀಳಿಗೆಗೆ ಅರ್ಥ ಮಾಡಿಸುವ ಕೆಲಸ ನಡೆಯಬೇಕಿದೆ ಎಂದರು.

ಕೆಪಿಸಿಸಿ ಕಾರ್ಯದರ್ಶಿ ರಾಜೇಶ್ವರಿ ಪಾಟೀಲ, ಭೋವಿ ಸಮಾಜದ ಅಧ್ಯಕ್ಷ ರವಿ ಪೂಜಾರ, ಮುಖಂಡರಾದ ನಾಗಪ್ಪ ಬಂಡಿವಡ್ಡರ, ಬಸಣ್ಣ ಹೆಸರೂರು, ದುರ್ಗಪ್ಪ ನೀರಲಗಿ, ಬಿ.ಬಿ. ಬತ್ತಿಕೊಪ್ಪ, ರಮೇಶ ಸುತ್ತಕೋಟಿ, ಕೊಟ್ರಪ್ಪ ಕುದರಿಸಿದ್ದನವರ, ವೆಂಕಟೇಶ ದೊಡ್ಡಮನಿ, ಸುರೇಶ ಸವಣೂರು, ಜಗದೀಶ್ ಸವಣೂರು, ಆಂಜನೇಯ ಬಂಕಾಪುರ, ಸುನೀಲ ಭೋವಿ, ರಾಮಚಂದ್ರ ಕಲ್ಲೇರ ಇತರರು ಇದ್ದರು.