ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಚಿತ್ರದುರ್ಗ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಆ.26 ಸೋಮವಾರ ಚುನಾವಣೆ ನಡೆಯಲಿದ್ದು ಪೂರ್ಣ ಪ್ರಮಾಣದ ಬಹುಮತ ವಿದ್ದರೂ ಆಡಳಿತ ಚುಕ್ಕಾಣಿ ಹಿಡಿಯುವುದು ಬಿಜೆಪಿಗೆ ಕಷ್ಟ ಸಾಧ್ಯವಾಗಿದೆ.ಕಾಂಗ್ರೆಸ್ ನೇತೃತ್ವದಲ್ಲಿ ಬಿಜೆಪಿ ಬಂಡುಕೋರರು ಹಾಗೂ ಜೆಡಿಎಸ್, ಪಕ್ಷೇತರರು ಸೇರಿ ಹೊಸ ಒಕ್ಕೂಟ ಮಾಡಿಕೊಂಡು ಅಧಿಕಾರ ನಡೆಸುವುದು ಬಹುತೇಕ ಖಚಿತವಾಗಿದೆ. ಒಕ್ಕೂಟದ ಸದಸ್ಯರು ಈಗಾಗಲೇ ಚಿತ್ರದುರ್ಗ ತೊರೆದು ಅಜ್ಞಾತ ಸ್ಥಳದಲ್ಲಿ ಬೀಡು ಬಿಟ್ಟಿದ್ದು ಚುನಾವಣೆ ವೇಳೆಗೆ ಪ್ರತ್ಯಕ್ಷರಾಗುವ ಸಾಧ್ಯತೆ ಇದೆ.
ಚಿತ್ರದುರ್ಗ ನಗರಸಭೆ 35 ಮಂದಿ ಸದಸ್ಯರ ಬಲ ಹೊಂದಿದ್ದು, 17 ಜನ ಬಿಜೆಪಿ, 6 ಜೆಡಿಎಸ್, 5 ಕಾಂಗ್ರೆಸ್ ಹಾಗೂ 7 ಜನ ಪಕ್ಷೇತರ ಸದಸ್ಯರಿದ್ದಾರೆ. ಓರ್ವ ಕಾಂಗ್ರೆಸ್ ಸದಸ್ಯ ಅಕಾಲಿಕ ಸಾವಿಗೆ ತುತ್ತಾಗಿರುವುದರಿಂದ ಬಲಾ ಬಲ 34 ಕ್ಕೆ ಕುಸಿದಿದೆ. ಇದಲ್ಲದೇ ಶಾಸಕ ವೀರೇಂದ್ರ ಪಪ್ಪಿ ಹಾಗೂ ಸಂಸದ ಗೋವಿಂದ ಕಾರಜೋಳ ಮತದಾನದ ಅವಕಾಶ ಪಡೆದಿದ್ದಾರೆ. ಕಳೆದ ಬಾರಿ ಬಿಜೆಪಿ ಆಡಳಿತ ನಡೆಸಿತ್ತು. ಈ ಬಾರಿ ತನ್ನದೇ ಆದ 17 ಮಂದಿ ಸದಸ್ಯರು ಹಾಗೂ ಓರ್ವ ಸಂಸದರ ಮತ ಇಟ್ಟುಕೊಂಡು ಯಾರ ಹಂಗೂ ಇಲ್ಲದೇ ಬಿಜೆಪಿ ಸುಲಭವಾಗಿ ಗದ್ದುಗೆ ಏರಬಹುದಿತ್ತು. ಅದು ಸಾಧ್ಯವಾಗದೇ ಹೋಗಿರುವುದು ಕಮಲ ಪಾಳೆಯದಲ್ಲಿ ಮಂಕು ಕವಿಯಲು ಕಾರಣವಾಗಿದೆ.ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ(ಅ)ಮಹಿಳೆಗೆ ಮೀಸಲಾಗಿದೆ. ಹಾಗಾಗಿ ಚುನಾವಣೆ ರಂಗೇರಲು ಕಾರಣವಾಗಿದೆ. ಕಳೆದ ಎರಡು ದಿನಗಳಿಂದ ಸಂಸದ ಗೋವಿಂದ ಕಾರಜೋಳ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರೊಂದಿಗೆ ನಡೆಸಿದ್ದ ಮಾತು ಕತೆಗಳು ಫಲಪ್ರಧವಾಗಿಲ್ಲ. ಕಳೆದ ಅವಧಿಯಲ್ಲಿ ಮಾಜಿ ಶಾಸಕ ತಿಪ್ಪಾರೆಡ್ಡಿ ಸದಸ್ಯರ ಸರಿಯಾಗಿ ನಡೆಸಿಕೊಂಡಿಲ್ಲ. ಉಸಿರು ಕಟ್ಟುವ ವಾತಾವರಣದಲ್ಲಿ ಒದ್ದಾಡಿದೆವು. ಲೋಕಸಭೆ ಚುನಾವಣೆ ವೇಳೆ ನಮ್ಮನ್ನು ನಿರ್ಲಕ್ಷಿಸಿದ್ದರು. ನಗರ ಸಭೆಯಲ್ಲಿ ಬಿಜೆಪಿ ಅಧಿಕಾರ ನಡೆಸುವಷ್ಟು ಬಹುಮತವಿದೆ. ಸದಸ್ಯರ ಒಂದು ಮಾಡಿ ಅಧಿಕಾರ ಗದ್ದುಗೆ ಏರಲು ತಿಪ್ಪಾರೆಡ್ಡಿ ರಿಸ್ಕ್ ತಗೆದುಕೊಳ್ಳಲಿ ನೋಡೋಣ ಎಂದು 6 ಮಂದಿ ಬಿಜೆಪಿ ಸದಸ್ಯರು ಸವಾಲು ಹಾಕಿದ್ದಾರೆ ಎನ್ನಲಾಗಿದೆ. ಈ 6 ಸದಸ್ಯರೇ ಬಿಜೆಪಿಗೆ ನುಂಗಲಾರದ ತುತ್ತಾಗಿದ್ದಾರೆ.
ಏತನ್ಮಧ್ಯೆ ಜೆಡಿಎಸ್ ವರಿಷ್ಠ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಅವರಿಗೆ ಕರೆ ಮಾಡಿ ಚಿತ್ರದುರ್ಗ ನಗರಸಭೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಸಂಯುಕ್ತವಾಗಿ ಅಧಿಕಾರ ನಡೆಸುವಂತೆ ನೋಡಿಕೊಳ್ಳಿ. ಜೆಡಿಎಸ್ ನವರು ಬಿಜೆಪಿಗೆ ಬೆಂಬಲಿಸಲಿ ಎಂದು ಸೂಚಿಸಿದ್ದಾರೆ. ನಮ್ಮ ಬೆಂಬಲವಿಲ್ಲದೇ ಬಿಜೆಪಿಯವರು ಅಧಿಕಾರ ನಡೆಸಬಹುದು. ಅಷ್ಟು ಬಹುಮತವಿದೆ ನಮ್ಮ ಉಸಾಬರಿ ಅವರಿಗೆ ಬೇಡ ಕುಮಾರಣ್ಣ. ಹಾಗೊಂದು ವೇಳೆ ಬಿಜೆಪಿಗೆ, ಜೆಡಿಎಸ್ ಬೆಂಬಲಿಸಬೇಕೆಂದಿದ್ದರೆ ಅವರು 14 ಮಂದಿ ಸದಸ್ಯರ ತಂದು ನಿಲ್ಲಿಸಿದರೆ ಬೆಂಬಲಿಸೋಣ. ಅನಗತ್ಯವಾಗಿ ಸೋಲುಂಡು ಮಾನ ಕಳೆದುಕೊಳ್ಳುವುದು ಬೇಡವೆಂದು ಕಾಂತರಾಜ್ ಜೆಡಿಎಸ್ ವರಿಷ್ಠ ಕುಮಾರಸ್ವಾಮಿಗೆ ಸ್ಪಷ್ಟ ಪಡಿಸಿದ್ದಾರೆ ಎನ್ನಲಾಗಿದೆ.ವಿಪ್ ಜಾರಿಗೆ ತೀರ್ಮಾನ:
ಬಿಜೆಪಿ ತನ್ನ ಸದಸ್ಯರ ಹಿಡಿದಿಟ್ಟುಕೊಳ್ಳಲು ಸದಸ್ಯೆ ತಾರಕೇಶ್ವರ ಅವರನ್ನು ಅಧ್ಯಕ್ಷರನ್ನಾಗಿಸುವ ನಿಟ್ಟಿನಲ್ಲಿ ಹೆಸರು ಸೂಚಿಸಿ ಮತ ಚಲಾಯಿಸುವಂತೆ ತನ್ನ ಸದಸ್ಯರಿಗೆ ವಿಪ್ ಜಾರಿ ಮಾಡಲು ಮುಂದಾಗಿದೆ. ನಗರಸಭೆಯಲ್ಲಿ 17 ಮಂದಿ ಬಿಜೆಪಿ ಸದಸ್ಯರಿದ್ದು ಮೂರನೇ ಒಂದು ಭಾಗದಷ್ಟು ಹೊರಗೆ ಹೋದಲ್ಲಿ ವಿಫ್ ಜಾರಿ ಫಲ ನೀಡದು. ಈಗಾಗಲೇ ಬಿಜೆಪಿ 6 ಮಂದಿ ಸದಸ್ಯರು ಸಡ್ಡು ಹೊಡೆದು ಒಕ್ಕೂಟಕ್ಕೆ ಸೇರ್ಪಡೆಯಾಗಿದ್ದಾರೆ. 11 ಮಂದಿ ಬಿಜೆಪಿ ಸದಸ್ಯರು ಮಾತ್ರ ಒಂದೆಡೆ ಇದ್ದರೆ ಉಳಿದಂತೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಬಂಡಾಯಗಾರರು, ಪಕ್ಷೇತರರು ಸೇರಿ 23 ಮಂದಿ ಸದಸ್ಯರು ಒಕ್ಕೂಟದ ಭಾಗವಾಗಿದ್ದಾರೆ.
ಶಾಸಕ ವೀರೇಂದ್ರ ಪಪ್ಪಿ ಹಾಗೂ ಜೆಡಿಎಸ್ ನ ಬಿ.ಕಾಂತರಾಜ್ ಈಗಾಗಲೇ ಎರಡು ಸುತ್ತಿನ ಮಾತುಕತೆ ನಡೆಸಿ ಒಕ್ಕೂಟ ಮಾದರಿ ಆಡಳಿತ ನಡೆಸಲು ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗಿದೆ. ಒಕ್ಕೂಟ ಅಧಿಕಾರದ ಮುನ್ಸೂಚನೆಯಾಗಿ ಪಕ್ಷೇತರ ಸದಸ್ಯೆ ಸ್ಮಿತಾ ಈರುಳ್ಳಿ ರಘು ಮತ್ತು ದಾವೂದ್ ರವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಸದ್ಯಕ್ಕೆ ಸ್ಮಿತಾ ಈರುಳ್ಳಿ ರಘು ಅಧ್ಯಕ್ಷ ಸ್ಥಾನ ಹಾಗೂ ಬಿಜೆಪಿಯ ಬಂಡುಕೋರ ಬಣದಲ್ಲಿರುವ ಶ್ರೀದೇವಿ ಚಕ್ರವರ್ತಿ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿದ್ದಾರೆ.ಭಾನುವಾರ ಸಂಜೆವರೆಗೂ ಚಿತ್ರದುರ್ಗ ನಗರಸಭೆ ಒಕ್ಕೂಟ ಮಾದರಿ ಆಡಳಿತ ಅಸ್ಥಿತ್ವಕ್ಕೆ ಬರುವ ಎಲ್ಲ ಮುನ್ಸೂಚನೆಗಳ ಗೋಚರಿಸಿದ್ದವು. ಕಡೇ ಗಳಿಗೆ ಲೆಕ್ಕಾಚಾರವೆಂಬಂತೆ ಸೋಮವಾರ ಬೆಳಗ್ಗೆ ಏನಾದರೂ ಪವಾಡಗಳು ನಡೆದರೆ ಮಾತ್ರ ಬಿಜೆಪಿ, ನಗರಸಭೆ ವಶಕ್ಕೆ ಪಡೆಯಬಲ್ಲದು.