ಸಾರಾಂಶ
ಕನ್ನಡಪ್ರಭ ವಾರ್ತೆ ಹೂವಿನಹಡಗಲಿ
ಕ್ಷೇತ್ರದ ಎಲ್ಲ ಗ್ರಾಮಗಳಲ್ಲಿಯೂ ದೇವಸ್ಥಾನ ಜೀರ್ಣೋದ್ಧಾರ ಮಾಡುವಂತೆ 1 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಆದರೆ, ಕಾಂಗ್ರೆಸ್ ಸರ್ಕಾರ ಮುಜರಾಯಿ ಇಲಾಖೆಯಿಂದ ಅನುದಾನವನ್ನೇ ನೀಡುತ್ತಿಲ್ಲ. ಜನರ ಬೇಡಿಕೆ ಈಡೇರಿಸುವುದು ಬಹಳ ಕಷ್ಟಕರವಾಗಿದೆ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.ಪಟ್ಟಣದ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದ ಬಳಿಕ, ದೇವಸ್ಥಾನ ಸಮಿತಿಯವರು ನೀಡಿದ ಬೇಡಿಕೆಗಳನ್ನು ಆಲಿಸಿ ಮಾತನಾಡಿದರು.
ದೇವಸ್ಥಾನಕ್ಕೆ ಅಗತ್ಯವಿರುವ ಕೊಳವೆ ಬಾವಿ ಮತ್ತು ಹೈಮಾಸ್ಟ್ ಲೈಟ್ಸ್ ವ್ಯವಸ್ಥೆಯನ್ನು ಶೀಘ್ರದಲ್ಲೇ ಮಾಡುತ್ತೇನೆ. ಆದರೆ ಇನ್ನು ಕೆಲವು ಬೇಡಿಕೆಗಳನ್ನು ಈಡೇರಿಸಬೇಕಾದರೇ, ಮುಜರಾಯಿ ಇಲಾಖೆಯ ಬಾಗಿಲನ್ನೇ ಬಂದ್ ಮಾಡಿದ್ದಾರೆ. ಈ ವರೆಗೂ ನಮ್ಮ ವಿಧಾನಸಭಾ ಕ್ಷೇತ್ರದ ದೇವಸ್ಥಾನಕ್ಕೆ ಒಂದು ರೂಪಾಯಿ ಅನುದಾನ ನೀಡಿಲ್ಲ. ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಹೂವಿನಹಡಗಲಿ ಕ್ಷೇತ್ರಕ್ಕೆ ಒಂದು ಹೊಸ ಯೋಜನೆ ನೀಡಿಲ್ಲ, ಬಜೆಟ್ ಪಟ್ಟಿಯಲ್ಲಿ ಹೆಸರೇ ಇಲ್ಲದಂತೆ ಮಾಡಿದ್ದಾರೆ. ಇಷ್ಟೇಲ್ಲಾ ಸಂಕಷ್ಟಗಳ ನಡುವೆ ಕ್ಷೇತ್ರ ಅಭಿವೃದ್ಧಿ ಮಾಡಲು ಪ್ರಯತ್ನಿಸುತ್ತಿದ್ದೇನೆ. ಹೂವಿನಹಡಗಲಿ ಪಟ್ಟಣದ ಮೂಲಭೂತ ಸೌಲಭ್ಯಕ್ಕಾಗಿ ₹40 ಕೋಟಿ ಕಾಮಗಾರಿಗಳು ಮಂಜೂರಾಗಿವೆ ಎಂದರು.ಪಟ್ಟಣದ ಸೊಪ್ಪಿನ ಕಾಳಮ್ಮ ಬಡಾವಣೆ ಸೇರಿದಂತೆ ಇದಕ್ಕೆ ಹೊಂದಿಕೊಂಡಿರುವ ಬಡಾವಣೆಯ ನಾಗರಿಕರ ಹಿತ ಕಾಯುವ ಕೆಲಸ ಮಾಡುತ್ತೇನೆ. ಪಟ್ಟಣದ ವಿಧಾನಸೌಧ ಶಾಲೆಯ ಪಕ್ಕದಲ್ಲಿರುವ ಸರ್ಕಾರಿ ಜಾಗದಲ್ಲಿ ಹಿರಿಯ ನಾಗರಿಕರಿಗಾಗಿ ಉತ್ತಮವಾಗಿರುವ ಉದ್ಯಾನ ವನ ನಿರ್ಮಾಣ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುತ್ತೇನೆ ಎಂದು ಭರವಸೆ ನೀಡಿದರು.
ನಿವೃತ್ತ ಮುಖ್ಯ ಶಿಕ್ಷಕ ಎಂ.ಪಿ.ಎಂ. ಕೊಟ್ರಯ್ಯ ಮಾತನಾಡಿ, ಸೊಪ್ಪಿನ ಕಾಳಮ್ಮ ಬಡಾವಣೆಯಲ್ಲಿ ಚರಂಡಿಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಿದ್ದು, ಮನೆ ಬಳಕೆ ಹಾಗೂ ಮಳೆ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ, ಚರಂಡಿಗಳು ತುಂಬಿಕೊಂಡು ಮನೆಯೊಳಗೆ ನೀರು ನುಗ್ಗುತ್ತಿದೆ. ಈ ಕುರಿತು ಜಿಲ್ಲಾಧಿಕಾರಿ ಸೇರಿದಂತೆ ಎಲ್ಲರಿಗೂ ಅರ್ಜಿ ಸಲ್ಲಿಸಿದ್ದರೂ, ಈ ವರೆಗೂ ಯಾವ ಕ್ರಮ ಕೈಗೊಂಡಿಲ್ಲ. ಈ ಕುರಿತು ಶಾಸಕರು ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.ಈ ಬಡಾವಣೆಯಲ್ಲಿ ಖಾಲಿ ಉಳಿದಿರುವ ನಿವೇಶನಗಳಲ್ಲಿ ಬಳ್ಳಾರಿ ಜಾಲಿ ಗಿಡಗಳು ಬೆಳೆದು ನಿಂತಿವೆ. ಪ್ಲಾಸ್ಟಿಕ್‌ಗಳಿಂದ ತುಂಬಿಕೊಂಡಿದೆ. ಜತೆಗೆ ಹಂದಿಗಳ ಗೂಡಾಗಿದ್ದು, ಜತೆಗೆ ಈಚೆಗೆ ಸಾಕಷ್ಟು ಕಳ್ಳತನವಾಗಿದೆ. ಕಳ್ಳರಿಗೆ ಈ ಜಾಗಗಳು ಅನುಕೂಲವಾಗಿವೆ. ಪುರಸಭೆಗೆ ಈ ಜಾಲಿ ಗಿಡಗಳನ್ನು ತೆರವು ಮಾಡಲು ಮನವಿ ಸಲ್ಲಿಸಿದ್ದರೂ ಕ್ರಮವಿಲ್ಲ. ಚರಂಡಿಗಳು ತುಂಬಿ ಹರಿಯುತ್ತಿವೆ. ಇದರಿಂದ ಸೊಳ್ಳೆ ಹೆಚ್ಚಾಗಿವೆ. ಕಂಬಗಳಿದ್ದರೂ ವಿದ್ಯುತ್ ದೀಪಗಳನ್ನು ಹಾಕಿಲ್ಲ, ರಾತ್ರಿ ವೇಳೆ ಕತ್ತಲೆಯಲ್ಲೇ ಓಡಾಡುವ ಸ್ಥಿತಿ ಇದೆ. ಈ ಕುರಿತು ಶಾಸಕರು ಕ್ರಮ ವಹಿಸಬೇಕು ಎಂದು ಬಡಾವಣೆಯ ನಾಗರಿಕರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಶಾಸಕರನ್ನು ಸನ್ಮಾನಿಸಿದರು.