ಜೀವನದಲ್ಲಿ ನಾವು ಬಯಸುವ ಪ್ರತಿ ವಿಷಯವೂ ಸುಲಭವಾಗಿ ಸಿಗುವುದಿಲ್ಲ. ಯಶಸ್ಸು ಬೇಕಾದರೆ ಪರಿಶ್ರಮ, ತಾಳ್ಮೆ ಮತ್ತು ನಿರಂತರ ಪ್ರಯತ್ನ ಬಹಳ ಮುಖ್ಯ. ಒಮ್ಮೆ ವಿಫಲರಾದರೆ ಪ್ರಯತ್ನ ನಿಲ್ಲಿಸಬಾರದು. ಮತ್ತೊಮ್ಮೆ ಪ್ರಯತ್ನಿಸಬೇಕು. ತಪ್ಪುಗಳನ್ನು ಗುರುತಿಸಿ, ಅವುಗಳಿಂದ ಪಾಠ ಕಲಿಯಬೇಕು. ಕನಸು ಕಾಣುವುದು ಮೊದಲ ಹೆಜ್ಜೆ, ಪ್ರಯತ್ನ ಮಾಡುವುದು ಎರಡನೇ ಹೆಜ್ಜೆ, ವೈಫಲ್ಯದಿಂದ ಪಾಠ ಕಲಿಯುವುದು ಮೂರನೇ ಹೆಜ್ಜೆ, ನಿರಂತರವಾಗಿ ಪ್ರಯತ್ನಿಸುವುದೇ ಯಶಸ್ಸಿನ ದಾರಿ.

ಕನ್ನಡಪ್ರಭವಾರ್ತೆ, ಹಾಸನ

ಜೀವನದಲ್ಲಿ ನಾವು ಮಾಡುವ ಪ್ರತಿ ಕೆಲಸವೂ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ವಿಫಲತೆ ಎದುರಾಗಬಹುದು. ಆದರೆ ವಿಫಲತೆಯೇ ಅಂತ್ಯವಲ್ಲ, ಅದು ಯಶಸ್ಸಿನ ಕಡೆಗೆ ನಮ್ಮನ್ನು ಕರೆದೊಯ್ಯುವ ಒಂದು ಪಾಠ ಎಂದು ಹಾಸನದ ಹಮ್‌ಶೈನ್ ಎಲೆಕ್ಟ್ರಾನಿಕ್ಸ್ ಆ್ಯಂಡ್‌ ಎನರ್ಜಿ ಸಿಸ್ಟಮ್‌ನ ಸಿ.ಇ.ಒ ಪೌದನ್ ರಾಜ್ ಎಚ್.ಎಚ್. ತಿಳಿಸಿದರು.

ಹಾಸನ ರಾಜೀವ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಯೋಜಿಸಲಾದ ಎಂಜಿನಿಯರ್ಸ್ ಡೇ ದಿನಾಚರಣೆಯಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಒಬ್ಬ ಉತ್ತಮ ತಾಂತ್ರಿಕ ವ್ಯಕ್ತಿ ಎಂದರೆ ಎಂದಿಗೂ ತಪ್ಪು ಮಾಡದ ವ್ಯಕ್ತಿಯಲ್ಲ, ತಪ್ಪಿನಿಂದ ಕಲಿತು, ಮತ್ತೆ ಪ್ರಯತ್ನಿಸಿ ಉತ್ತಮ ಪರಿಹಾರ ಕಂಡುಕೊಳ್ಳುವ ವ್ಯಕ್ತಿ ಎಂದು ಹೇಳಿದರು.

ಜೀವನದಲ್ಲಿ ನಾವು ಬಯಸುವ ಪ್ರತಿ ವಿಷಯವೂ ಸುಲಭವಾಗಿ ಸಿಗುವುದಿಲ್ಲ. ಯಶಸ್ಸು ಬೇಕಾದರೆ ಪರಿಶ್ರಮ, ತಾಳ್ಮೆ ಮತ್ತು ನಿರಂತರ ಪ್ರಯತ್ನ ಬಹಳ ಮುಖ್ಯ. ಒಮ್ಮೆ ವಿಫಲರಾದರೆ ಪ್ರಯತ್ನ ನಿಲ್ಲಿಸಬಾರದು. ಮತ್ತೊಮ್ಮೆ ಪ್ರಯತ್ನಿಸಬೇಕು. ತಪ್ಪುಗಳನ್ನು ಗುರುತಿಸಿ, ಅವುಗಳಿಂದ ಪಾಠ ಕಲಿಯಬೇಕು. ಕನಸು ಕಾಣುವುದು ಮೊದಲ ಹೆಜ್ಜೆ, ಪ್ರಯತ್ನ ಮಾಡುವುದು ಎರಡನೇ ಹೆಜ್ಜೆ, ವೈಫಲ್ಯದಿಂದ ಪಾಠ ಕಲಿಯುವುದು ಮೂರನೇ ಹೆಜ್ಜೆ, ನಿರಂತರವಾಗಿ ಪ್ರಯತ್ನಿಸುವುದೇ ಯಶಸ್ಸಿನ ದಾರಿ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಆರ್. ಶಂಕರೇಗೌಡ, ಸರ್ ಎಂ. ವಿಶ್ವೇಶ್ವರಯ್ಯ ಅವರು ತಮ್ಮ ತಾಂತ್ರಿಕ ಜ್ಞಾನ, ಶಿಸ್ತು, ಸಮಯಪಾಲನೆ, ದೂರದೃಷ್ಟಿ, ಕಾರ್ಯನಿಷ್ಠೆ ಮೂಲಕ ಸ್ವಾರ್ಥರಹಿತ ಜೀವನ ನಡೆಸಿ ಭಾರತದ ಅಭಿವೃಧ್ಧಿಗೆ ಅಳಿಸಲಾಗದ ಕೊಡುಗೆ ನೀಡಿದ್ದಾರೆ. ಇಂದಿನ ತಂತ್ರಜ್ಞಾನವು ಪ್ರತಿ ಕ್ಷೇತ್ರದಲ್ಲೂ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಆದರೆ ತಂತ್ರಜ್ಞಾನವನ್ನು ನಾವು ಹೇಗೆ ಬಳಸುತ್ತೇವೆ ಎಂಬುದು ಬಹಳ ಮುಖ್ಯ. ಡಿಪ್ಲೊಮಾ ವಿದ್ಯಾರ್ಥಿಗಳಾದ ನೀವು ತಂತ್ರಜ್ಞಾನವನ್ನು ಕೇವಲ ಉದ್ಯೋಗಕ್ಕಾಗಿ ಕಲಿಯದೆ, ಹೊಸ ಆಲೋಚನೆಗಳನ್ನು ಸೃಷ್ಟಿಸಲು ಮತ್ತು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಬಳಸಬೇಕು. ಎಂದು ವಿವರಿಸಿದರು.

ರಾಷ್ಟ್ರೀಯ ಎಂಜಿನಿಯರ್ಸ್ ಡೇ ದಿನಾಚರಣೆಯ ಅಂಗವಾಗಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಗಂಗರಾಜು, ಕಾರ್ಯಕ್ರಮದ ಆಯೋಜಕಿ ಪುಷ್ಪಾ ಎಸ್.ಆರ್ ಹಾಗೂ ಎಲ್ಲಾ ವಿಭಾಗದ ಮುಖ್ಯಸ್ಥರು, ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.