ಸಾರಾಂಶ
ಉತ್ತರದ ಸಂಗೀತವನ್ನು ದಕ್ಷಿಣಕ್ಕೆ ತಂದ ಪ್ರಮುಖರಲ್ಲೊಬ್ಬರಾದ, ಶಿಷ್ಯ ಪರಂಪರೆಯ ಮೂಲಕ ಧಾರವಾಡಕ್ಕೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ತವರು ಎನ್ನುವ ಖ್ಯಾತಿ ತಂದು ಕೊಟ್ಟ, ವಚನಗಳಿಗೆ ರಾಗ ಸಂಯೋಜಿಸಿ ಹಾಡಿ, ವಚನ ಗಾಯನ ಪರಂಪರೆಗೆ ನಾಂದಿ ಹಾಡಿದ್ದಲ್ಲದೇ ಭಾರತ ರತ್ನ ಪಂ. ಭೀಮಸೇನ ಜೋಶಿ ಅವರಂತಹ ಮಹಾನ್ ಸಂಗೀತ ದಿಗ್ಗಜರನ್ನು ಕೊಡುಗೆಯಾಗಿ ನೀಡಿದ ಶ್ರೇಯಸ್ಸು ಗವಾಯಿಗಳಿಗೆ ಸಲ್ಲುತ್ತದೆ.
ಧಾರವಾಡ:
ಗಾನಯೋಗಿ ಪಂ. ಪಂಚಾಕ್ಷರಿ ಗವಾಯಿಗಳವರ ಸ್ಮಾರಕ ಧಾರವಾಡದಲ್ಲಿ ನಿರ್ಮಿಸಬೇಕೆಂದು ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಸಂಸ್ಥಾಪಕ ಚನ್ನವೀರಸ್ವಾಮಿ ಹಿರೇಮಠ ಹೇಳಿದರು.ಇಲ್ಲಿಯ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಛಯದಲ್ಲಿ ಗದುಗಿನ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಆಯೋಜಿಸಿದ್ದ ಗವಾಯಿಗಳ 80ನೇ ಪುಣ್ಯಸ್ಮರಣೆ ‘ಗುರು ಗುಣಗಾನ’ ಕವಿಗೋಷ್ಠಿ, ಕಾವ್ಯಗಾಯನ ಮತ್ತು ನೃತ್ಯ ನಮನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉತ್ತರದ ಸಂಗೀತವನ್ನು ದಕ್ಷಿಣಕ್ಕೆ ತಂದ ಪ್ರಮುಖರಲ್ಲೊಬ್ಬರಾದ, ಶಿಷ್ಯ ಪರಂಪರೆಯ ಮೂಲಕ ಧಾರವಾಡಕ್ಕೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ತವರು ಎನ್ನುವ ಖ್ಯಾತಿ ತಂದು ಕೊಟ್ಟ, ವಚನಗಳಿಗೆ ರಾಗ ಸಂಯೋಜಿಸಿ ಹಾಡಿ, ವಚನ ಗಾಯನ ಪರಂಪರೆಗೆ ನಾಂದಿ ಹಾಡಿದ್ದಲ್ಲದೇ ಭಾರತ ರತ್ನ ಪಂ. ಭೀಮಸೇನ ಜೋಶಿ ಅವರಂತಹ ಮಹಾನ್ ಸಂಗೀತ ದಿಗ್ಗಜರನ್ನು ಕೊಡುಗೆಯಾಗಿ ನೀಡಿದ ಶ್ರೇಯಸ್ಸು ಗವಾಯಿಗಳಿಗೆ ಸಲ್ಲುತ್ತದೆ ಎಂದರು.ಸಂಸ್ಕೃತಿ ಶಿಶುಮಂದಿರದ ಅಧ್ಯಕ್ಷ ಮೃಣಾಲ ಜೋಶಿ, 52 ವರ್ಷ ಬದುಕಿದ ಗವಾಯಿಗಳು ಅಸಾಮಾನ್ಯ ಸಾಧನೆ ಮಾಡಿದದರು. ಅವರ ತತ್ವಾಚರಣೆ ಅಳವಡಿಸಿಕೊಳ್ಳುವ ಮೂಲಕ ಗವಾಯಿಗಳನ್ನು ಮನೆ-ಮನೆಗೆ ಕರೆದೊಯ್ಯಬೇಕು ಎಂದು ಹೇಳಿದರು.
ಸಂಘಟಕ ಪ್ರಕಾಶ ಬಾಳಿಕಾಯಿ, ವಿಶ್ವದಲ್ಲಿಯೇ ಬಹುದೊಡ್ಡ ಗುರುಪರಂಪರೆ ಹೊಂದಿದ ಕೀರ್ತಿ ಪಂ. ಪಂಚಾಕ್ಷರ ಗವಾಯಿಗಳಿಗೆ ಸಲ್ಲುತ್ತದೆ. ದೇಶದೆಲ್ಲೆಡೆಯಲ್ಲಿ ಅಸಂಖ್ಯೆಯಲ್ಲಿರುವ ಅವರ ಶಿಷ್ಯವರ್ಗ ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದು ನಾಡಿಗೆ ಕೀರ್ತಿ ತಂದಿದ್ದಾರೆ ಎಂದರು.ಉಪನ್ಯಾಸಕ ಡಾ. ಎ.ಎಲ್. ದೇಸಾಯಿ, ಗವಾಯಿ ಗುರುಗಳ ಹೆಸರು ಉಳಿಸುವ ನಿಟ್ಟಿನಲ್ಲಿ ಕಂಚಿನ ಪ್ರತಿಮೆ ಸ್ಥಾಪನೆ ಮತ್ತು ಧಾರವಾಡದಲ್ಲಿ ಮಾದರಿಯ ಆಶ್ರಮ ಸ್ಥಾಪಿಸಲು ಪ್ರಯತ್ನಿಸೋಣ ಎಂದರು. ಡಾ. ಸುಮಾ ಬಸವರಾಜ ಹಡಪದ, ದೇವಿಕಾ ಜೋಗಿ ಹೊಸಪೇಟೆ, ಡಾ. ಸುರೇಶ ಕಳಸಣ್ಣವರ ಇದ್ದರು.
ಗುರು ಪುಟ್ಟರಾಜ ಸಂಗೀತ ಶಾಲೆ, ವೀರಶೈವ ಜಾಗೃತಿ ಮಹಿಳಾ ಸಮಿತಿ ಸದಸ್ಯರು ಸಂಗೀತ ನಮನ ಸಲ್ಲಿಸಿದರು. ‘ಮಾಸ್ಟರ್’ ಸಾತ್ವಿಕ್ ಜಿ. ಮಹಾಮನೆ ವಯೋಲಿನ್ ಪ್ರಸ್ತುತ ಪಡಿಸಿದರು. ತಬಲಾದಲ್ಲಿ ಸುರೇಶ ನಿಡಗುಂದಿ, ಸದಾನಂದ ತಾವಡೆ ಹಾರ್ಮೊನಿಯಂದಲ್ಲಿ ಡಾ. ಸುಮಾ ಹಡಪದ ಸಾಥ್ ಸಂಗತ ನೀಡಿದರು. ಹುಬ್ಬಳಿಯ ಪ್ರೇರಣಾ ಸ್ಕೂಲ್ ಆಫ್ ಡ್ಯಾನ್ಸ್, ಧಾರವಾಡದ ಉಪಾಧ್ಯೆ ನೃತ್ಯ ವಿಹಾರ, ತಾಳಿಕೊಟೆಯ ವಿರಕ್ತೇಶ್ವರ ಭರತನಾಟ್ಯ ತರಬೇತಿ ಸಂಸ್ಥೆ, ಮುಂಡರಗಿಯ ನಾಟ್ಯಬಿಂದು ಡ್ಯಾನ್ಸ್ ಅಕಾಡೆಮಿ ಸಂಸ್ಥೆಯ ಶಿಷ್ಯರು ನೃತ್ಯ ನಮನ ಸಲ್ಲಿಸಿದರು. ಶಶಿಕಲಾ ಅಕ್ಕಿ ಹಾವೇರಿ ಸ್ವಾಗತಿಸಿದರು. ಸುಧಾ ಕಬ್ಬೂರ ನಿರೂಪಿಸಿದರು. ಡಾ.ಸುಮಾ ಹಡಪದ ವಂದಸಿದರು.