ಬರದಲ್ಲೂ ಬರೆ: ತಮಿಳ್ನಾಡಿಗೆ ನೀರು ಹರಿಸಲು ಸೂಚನೆ

| Published : Feb 13 2024, 12:45 AM IST

ಸಾರಾಂಶ

ಫೆಬ್ರವರಿ ಮತ್ತು ಮಾರ್ಚ ತಿಂಗಳಲ್ಲಿ ತಮಿಳುನಾಡಿಗೆ ತಲಾ 2.5 ಟಿಎಂಸಿ (ಒಟ್ಟೂ 5 ಟಿಎಂಸಿ) ನೀರು ಹರಿಸಲು ಕಾವೇರಿ ನೀರು ನಿಯಂತ್ರಣ ಸಮಿತಿ ಕರ್ನಾಟಕಕ್ಕೆ ಶಿಫಾರಸ್ಸು ಮಾಡಿದೆ.

ಕನ್ನಡಪ್ರಭ ವಾರ್ತೆ ದೆಹಲಿಫೆಬ್ರವರಿ ಮತ್ತು ಮಾರ್ಚ ತಿಂಗಳಲ್ಲಿ ತಮಿಳುನಾಡಿಗೆ ತಲಾ 2.5 ಟಿಎಂಸಿ (ಒಟ್ಟೂ 5 ಟಿಎಂಸಿ) ನೀರು ಹರಿಸಲು ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲುಆರ್‌ಸಿ) ಕರ್ನಾಟಕಕ್ಕೆ ಶಿಫಾರಸ್ಸು ಮಾಡಿದೆ.ದೆಹಲಿಯಲ್ಲಿ ಸೋಮವಾರ ಸಮಿತಿಯ ಸಭೆ ನಡೆಯಿತು. 7.61 ಟಿಎಂಸಿ ಬಾಕಿ ಜೊತೆಗೆ, ಫೆಬ್ರವರಿಯಿಂದ ಮೇ ತಿಂಗಳವರೆಗೆ ಪ್ರತಿ ತಿಂಗಳು 2.5 ಟಿಎಂಸಿ ನೀರು ಹರಿಸಲು ಕರ್ನಾಟಕಕ್ಕೆ ಸೂಚಿಸಬೇಕು ಎಂದು ತಮಿಳುನಾಡು ಒತ್ತಾಯಿಸಿತು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕರ್ನಾಟಕದ ಅಧಿಕಾರಿಗಳು, 2023ರ ಜೂನ್‌ 1ರಿಂದ 2024ರ ಫೆಬ್ರವರಿ 9ರವರೆಗೆ ಕರ್ನಾಟಕದ ಕಾವೇರಿ ಕೊಳ್ಳದ ನಾಲ್ಕು ಜಲಾಶಯಗಳಲ್ಲಿ 52.43%ರಷ್ಟು ಒಳಹರಿವಿನ ಕೊರತೆಯಿದೆ. ಜೊತೆಗೆ, ರಾಜ್ಯದಲ್ಲಿ ತೀವ್ರ ಬರವಿದೆ. ಹೀಗಾಗಿ, ನೀರು ಬಿಡುಗಡೆ ಸಾಧ್ಯವಿಲ್ಲ. ಸಂಕಷ್ಟ ಸೂತ್ರವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ವಾದಿಸಿದರು.ವಾದ-ಪ್ರತಿವಾದ ಆಲಿಸಿದ ಸಮಿತಿ, ನ್ಯಾಯಾಧಿಕರಣದ ಸೂಚನೆಯಂತೆ ಫೆಬ್ರವರಿ ಮತ್ತು ಮಾರ್ಚ ತಿಂಗಳಲ್ಲಿ ತಮಿಳುನಾಡಿಗೆ ತಲಾ 2.5 (ಒಟ್ಟೂ 5)ಟಿಎಂಸಿ ನೀರು ಹರಿಸಲು ಶಿಫಾರಸ್ಸು ಮಾಡಿತು. ಸಮಿತಿಯ ಈ ಶಿಫಾರಸ್ಸನ್ನು ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ಮುಂದೆ ಪ್ರಶ್ನಿಸಲು ಕರ್ನಾಟಕ ನಿರ್ಧರಿಸಿದೆ.