ಸಾರಾಂಶ
ಶಿವಾನಂದ ಪಿ.ಮಹಾಬಲಶೆಟ್ಟಿ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿರಬಕವಿ ನಗರದ ಹೊರವಲಯದಲ್ಲಿ ಕೃಷ್ಣಾ ನದಿ ಮೈದುಂಬಿ ನಿಂತಿರುವುದರಿಂದ ಈ ಬೇಸಿಗೆಯಲ್ಲಿ ಕುಡಿಯಲು ಹಾಗೂ ನದಿ ಪಾತ್ರಕ್ಕೆ ಅಂಟಿಕೊಂಡಿರುವ ರೈತರ ಜಮೀನುಗಳಿಗೆ ನೀರಿನ ಕೊರತೆ ಉಂಟಾಗುವ ಸಾಧ್ಯತೆ ಕಡಿಮೆ ಇದೆ. ೬ ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಹಿಪ್ಪರಗಿ ಜಲಾಶಯ ಪ್ರತಿ ವರ್ಷ ಮಾರ್ಚ್ ಮೊದಲ ವಾರದಲ್ಲಿ ಕೇವಲ ೨ ಟಿಎಂಸಿಯಷ್ಟು ಮಾತ್ರ ನೀರು ಸಂಗ್ರಹವಿರುತ್ತಿತ್ತು. ಆದರೆ, ಈ ಬಾರಿ ಮಾರ್ಚ್ ಮೊದಲ ವಾರದಲ್ಲಿ ೩.೫ ಟಿಎಂಸಿ ನೀರು ಸಂಗ್ರಹವಿದೆ. ಆದರೂ ಹಿತಮಿತವಾಗಿ ಬಳಸಿದರೆ ಈ ಬೇಸಿಗೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ಕೊರತೆ ಆಗದು ಎಂಬುವುದು ಅಧಿಕಾರಿಗಳ ವಿಶ್ವಾಸ.
ಜಲಾಶಯ ಅವಳಿ ನಗರ ಹಾಗೂ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗೆ, ಸಸಾಲಟ್ಟಿ, ಗೊಲಬಾವಿ, ತೇರದಾಳ ಪಟ್ಟಣ ಸೇರಿದಂತೆ ಆಸುಪಾಸಿನ ಗ್ರಾಮಗಳಿಗೆ ಕುಡಿಯುವ ನೀರಿಗೆ ಆಸರೆಯಾಗಿದೆ. ಈಚೆಗೆ ರಾಜ್ಯ ಸರ್ಕಾರ ತೆಲಂಗಾಣಕ್ಕೆ ಕೃಷ್ಣಾ ನದಿಯಿಂದ ಅಪಾರ ನೀರು ಹರಿಸಿದ್ದರಿಂದ ಕೃಷ್ಣಾ ನದಿ ಪಾತ್ರ ಬರಿದಾಗುವ ಆತಂಕ ಇತ್ತು. ಆದರೆ, ಹಿಪ್ಪರಗಿ ಜಲಾಶಯದಲ್ಲಿ ನೀರಿನ ಸಂಗ್ರಹ ಯಥಾಸ್ಥಿತಿಯಲ್ಲಿರುವುದರಿಂದ ಈ ಭಾಗದ ಜನತೆ ನಿಟ್ಟುಸಿರುಬಿಟ್ಟಿದ್ದಾರೆ.ಹೋಳಿ ಹಬ್ಬದ ಬಣ್ಣ ನದಿಗೆ ಸೇರದಿರಲಿ:
ಮಾ.೧೩ ಮತ್ತು ೧೪ರಂದು ಹೋಳಿ ಹಬ್ಬ ಇರುವುದರಿಂದ ಸಾರ್ವಜನಿಕರು ಬಣ್ಣದ ನೀರು ಹಾಗೂ ಬಟ್ಟೆ ಒಗೆಯುವುದು ಹಾಗೂ ಬಣ್ಣ ಹಚ್ಚಿಕೊಂಡು ನೀರೊಳಗೆ ಇಳಿದು ಸ್ನಾನ ಮಾಡುವುದಕ್ಕೆ ಅವಕಾಶ ನೀಡಬಾರದು. ಈಗಿರುವುದು ಸಂಗ್ರಹವಾದ ನೀರು, ಇದು ಹರಿಯುವುದಿಲ್ಲ. ನಿಂತ ನೀರಾಗಿರುವುದರಿಂದ ಅದರಲ್ಲಿ ಹಾನಿಕಾರಕ ರಾಸಾಯನಿಕಗಳು ಮಿಶ್ರಣಗೊಂಡು ನೀರು ಕಲುಷಿತಗೊಳ್ಳುವ ಅಪಾಯ ಇದೆ. ಅದೇ ನೀರನ್ನು ಅವಳಿ ನಗರ ಸೇರಿ ಹಲವು ಪಟ್ಟಣ, ಗ್ರಾಮಗಳಿಗೆ ಕುಡಿಯುವುದಕ್ಕೆ ಬಳಸಲಾಗುತ್ತದೆ. ಇದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.ಒಂದು ವೇಳೆ ನೀರೊಳಗೆ ಇಳಿದು ಸ್ನಾನ ಮಾಡಿದರೆ ನಗರಸಭೆ ಕಾನೂನು ಕ್ರಮ ಜರುಗಿಸಲಾಗುವುದು ಮತ್ತು ನದಿ ದಡದಲ್ಲಿ ಕಾವಲುಗಾರರನ್ನು ನಿಲ್ಲಿಸಿ ದಂಡ ವಿಧಿಸಲಾಗುವುದು. ನೀರು ತೆಗೆದುಕೊಂಡು ಹೊರಗಡೆ ಸ್ನಾನ ಮಾಡಬಹುದು ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.
ನದಿಯಲ್ಲಿ ಈಗ ಸಂಗ್ರಹವಿರುವ ನೀರು ಬೇಸಿಗೆವರೆಗೂ ಸಾಕಾಗುತ್ತದೆ. ಒಂದು ವೇಳೆ ಕೊರತೆ ಬಿದ್ದರೂ ಕೊಯ್ನಾ ಹಾಗೂ ಹಿಡಕಲ್ ಜಲಾಶಯಗಳಿಂದ ನೀರು ಬಿಡುವ ಆಶಾವಾದವಿದೆ. ಅವಳಿ ನಗರದ ೩೧ ವಾರ್ಡ್‌ಳಲ್ಲಿ ಕೊಳವೆ ಬಾವಿಗಳು ಮತ್ತು ತೆರೆದ ಬಾವಿಗಳಿದ್ದು, ಇವುಗಳಿಗೆ ತಾತ್ಕಾಲಿಕ ಪೈಪಲೈನ್ ಮೂಲಕ ನೀರು ಪೂರೈಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಬರ ನಿರ್ವಹಣೆ ಅನುದಾನ ಕೂಡ ಇರುವುದರಿಂದ ನೀರಿನ ಕೊರತೆಯಾಗದಂತೆ ಕ್ರಿಯಾಯೋಜನೆ ತಯಾರಿಸಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ನಗರಸಭೆ ಸನ್ನದ್ಧವಾಗಿದೆ. ಸಾರ್ವಜನಿಕರು ನಗರಸಭೆಯೊಂದಿಗೆ ಕೈಜೋಡಿಸಿ ಹಿತಮಿತವಾಗಿ ನೀರು ಬಳಸಬೇಕು.-ಜಗದೀಶ ಈಟಿ, ಪೌರಾಯುಕ್ತರು ನಗರಸಭೆ ರಬಕವಿ ಬನಹಟ್ಟಿ.
ಹೋಳಿ ಹಬ್ಬದಲ್ಲಿ ಬಣ್ಣವಾಡುವ ಜನರು ಜವಾಬ್ದಾರಿ ನಿರ್ವಹಿಸಿ ರಾಸಾಯನಿಕಗಳು ಸೇರಿಕೊಂಡು ನದಿ ನೀರು ಕಲುಷಿತವಾಗದಂತೆ ನದಿ ಪಾತ್ರದ ಹೊರಗಡೆ ಸ್ನಾನ ಮಾಡಬೇಕು. ಅಧಿಕಾರಿಗಳು ಜಾಗೃತಿ ವಹಿಸುವುದರ ಜೊತೆಗೆ ಸಾರ್ವಜನಿಕರಾದ ನಾವು ಕೂಡ ನಮ್ಮ ಹೊಣೆಗಾರಿಕೆ ನಿರ್ವಹಿಸಿದರೆ ಒಳ್ಳೆಯದು. ಮಹಾ ನೀರಿನ ಮೇಲೆ ಭರವಸೆ ಇರಿಸದೇ ನಗರಸಭೆ ತನ್ನ ಜಲಸಂಪನ್ಮೂಲ ಸನ್ನದ್ಧವಾಗಿಟ್ಟುಕೊಂಡಲ್ಲಿ. ಮುಂಬರುವ 3 ತಿಂಗಳ ಬೇಸಿಗೆ ಸರಾಗವಾಗಿ ದಾಟಲಿದೆ.-ರವಿ ದೇಸಾಯಿ, ಜವಳಿ ಉದ್ದಿಮೆದಾರರು, ರಬಕವಿ