ಸಾರಾಂಶ
ಶಿವಾನಂದ ಅಂಗಡಿಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಬಿಸಿಲಿನ ಝಳ ಹೆಚ್ಚಳದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಹುತೇಕ ಸಂತೆ ಮಾರುಕಟ್ಟೆಗಳು ಗ್ರಾಹಕರಿಲ್ಲದೇ ಭಣಗುಡುತ್ತಿವೆ. ಆದರೆ, ಇಲ್ಲಿಯ ದುರ್ಗದಬೈಲ ಹಾಗೂ ಶಾಹ ಬಜಾರ್ ಗ್ರಾಹಕರಿಂದ ತುಂಬಿ ತುಳುಕುತ್ತಿವೆ.ಹುಬ್ಬಳ್ಳಿ ಮಹಾನಗರದಲ್ಲಿ ಶಿವರಾತ್ರಿ ದಾಟುತ್ತಿದ್ದಂತೆ ಮಧ್ಯಾಹ್ನ ಹೊತ್ತಿನಲ್ಲಿ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ದಾಟಿ ಹೋಗುತ್ತಿದೆ. ಮಧ್ಯಾಹ್ನ ಹೊರಗಡೆ ಬರಲು ಕಷ್ಟವಾಗುತ್ತಿದೆ. ಆದರೆ ದುರ್ಗದಬೈಲ ಸೇರಿದಂತೆ ಪಕ್ಕದ ಶಾಹ ಬಜಾರ್‌ಗಳು ರಂಜಾನ್ ಹಾಗೂ ರಂಗಪಂಚಮಿ ಹಿನ್ನೆಲೆಯಲ್ಲಿ ಜನರಿಂದ ತುಂಬಿ ತುಳುಕುತ್ತಿದ್ದು, ಮಾರುಕಟ್ಟೆಗೆ ಕಳೆ ಬಂದಿದೆ. ವ್ಯಾಪಾರಸ್ಥರು ಝಣ ಝಣ ಕಾಂಚಾಣ ಎಣಿಸುತ್ತ ವ್ಯಾಪಾರ ವೃದ್ಧಿಸಿಕೊಳ್ಳುತ್ತಿದ್ದಾರೆ.
ದುರ್ಗದಬೈಲ್, ಶಾಹ ಬಜಾರ್ ಪ್ರದೇಶದಲ್ಲಿ ಈಗ ಮಧ್ಯಾಹ್ನ ಹೊತ್ತಿನಲ್ಲೇ ಜನಸಾಗರವೇ ಸೇರುತ್ತಿದ್ದು ನಿಯಂತ್ರಿಸುವುದೇ ಪೊಲೀಸರಿಗೆ ಕಷ್ಟವಾಗುತ್ತಿದೆ. ಶಾಹ ಬಜಾರ್‌ನಲ್ಲಿ ತಂಪು ಪಾನೀಯ, ಒಳಉಡುಪುಗಳು, ಕಡಿಮೆ ದರದ ಬಟ್ಟೆ ಮಾರಾಟಗಾರರೇ ತುಂಬಿಕೊಂಡಿದ್ದು, ದ್ವಿಚಕ್ರವಾಹನವೂ ಹೋಗಲು ಪ್ರಯಾಸಪಡಬೇಕಾಗಿದೆ. ಸಿಬಿಟಿಯಿಂದ ಶಾಹ ಬಜಾರ್ ಹಾಗೂ ದುರ್ಗದಬೈಲ ಪ್ರವೇಶಿಸುವ ರಸ್ತೆಗಳಲ್ಲಿ ದ್ವಿಚಕ್ರ ವಾಹನ ಪಾರ್ಕಿಂಗ್ ಮಾಡಲು ಜಾಗ ಸಿಗುತ್ತಿಲ್ಲ.ಬೀದಿ ವ್ಯಾಪಾರಿಗಳು ತತ್ತರ:ಮಾರ್ಚ್ ತಿಂಗಳಲ್ಲಿಯೇ ಈ ಬಾರಿ ಪ್ರಖರ ಬಿಸಿಲು ಆರಂಭವಾಗಿದೆ. ಪರಿಣಾಮ ಇಲ್ಲಿಯ ಮಾರುಕಟ್ಟೆಯಲ್ಲಿ ಹೂವು ಹಣ್ಣು, ಬಟ್ಟೆ, ಕೈಗಾಡಿಯ ವ್ಯಾಪಾರಿಗಳು ತತ್ತರಿಸಿದ್ದಾರೆ. ದುರ್ಗದಬೈಲವೊಂದರಲ್ಲಿ ಇಂಥ ಬೀದಿ ವ್ಯಾಪಾರಿಗಳ ಸಂಖ್ಯೆ ಸಾವಿರ ಲೆಕ್ಕದಲ್ಲಿ ಇದೆ. ಮಧ್ಯಾಹ್ನದಿಂದ ಸಂಜೆ 6 ಗಂಟೆವರೆಗೂ ಧಗೆ ಜತೆಗೆ ಬಿಸಿಲಿನ ಆರ್ಭಟವೂ ಹೆಚ್ಚಾಗಿರುತ್ತದೆ. ಇಲ್ಲಿಯ ಜನತಾ ಬಜಾರ್ ಮಾರುಕಟ್ಟೆಯಲ್ಲೂ ಹೆಚ್ಚಿನ ಸಂಖ್ಯೆಯ ಬೀದಿ ವ್ಯಾಪಾರಿಗಳಿದ್ದು, ಅದರಲ್ಲಿ ಕಾಯಿಪಲ್ಲೆ ಮಾರಾಟಗಾರರು ಹೆಚ್ಚು ಇರುವುದು ವಿಶೇಷ. ಮನೆ ಉಸ್ತುವಾರಿ ಸೇರಿದಂತೆ ಮಕ್ಕಳ ಶಿಕ್ಷಣಕ್ಕಾಗಿ ಇವೆರಲ್ಲ ಬೀದಿ ವ್ಯಾಪಾರ ಮಾಡಿಕೊಂಡಿದ್ದು, ಈಗ ಬೇಸಿಗೆ ಬಿಸಿಲಲ್ಲಿ ಇಡೀ ದಿನ ಕುಳಿತು ವ್ಯಾಪಾರ ಮಾಡುವುದು ಬಹಳ ದುಸ್ತರವೆನಿಸಿದೆ.
ಹುಬ್ಬಳ್ಳಿಯ ಎಲ್ಲ ಮಾರುಕಟ್ಟೆಗಳೂ ಸೇರಿದಂತೆ ವಾರದ ಸಂತೆ ನಡೆಯುವ ವಾರ್ಡ್ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಹೂವು, ಹಣ್ಣು, ಕಾಯಿಪಲ್ಲೆ ವ್ಯಾಪಾರವನ್ನು ಮಾಡಿಕೊಂಡಿದ್ದಾರೆ.ಕುಟುಂಬ ಸದಸ್ಯರೆಲ್ಲರೂ ಈರುಳ್ಳಿ ವ್ಯಾಪಾರವನ್ನು ಮಾಡಿಕೊಂಡಿದ್ದೇವೆ. ಆದರೆ, ಈಗ ಹೆಚ್ಚಾಗಿರುವ ಬಿಸಿಲು ಕೈಗಾಡಿಯಲ್ಲಿ ರಸ್ತೆಬದಿಯಲ್ಲಿ ವ್ಯಾಪಾರ ಮಾಡುವಂಥ ನಮ್ಮಂಥವರನ್ನು ಕಂಗೆಡಿಸಿದೆ. ಮಳೆ, ಬಿಸಿಲು ಸಹಿಸಿಕೊಳ್ಳುವುದು ಅನಿವಾರ್ಯವಾಗಿದೆ ಕೇಶ್ವಾಪುರ ಈರುಳ್ಳಿ ವ್ಯಾಪಾರಿ ಶಬಾನಾಬಾನು ಹೇಳಿದರು.
ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಮಾರುಕಟ್ಟೆಗೆ ಗದಗ, ಹಾವೇರಿ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕುಗಳ ಗ್ರಾಹಕರು ಇಲ್ಲಿಗೆ ಖರೀದಿಗೆ ಬರುತ್ತಾರೆ. ಹೀಗಾಗಿ ಬಿಸಿಲಲ್ಲೂ ಮಾರುಕಟ್ಟೆ ಖರೀದಿ ಭರಾಟೆ ಜೋರಾಗಿದೆ. ರಂಗಪಂಚಮಿ ದಿನವಾದ ಮಂಗಳವಾರ ಒಂದು ದಿನ ಮಾರುಕಟ್ಟೆ ರಜೆ ಇರಲಿದ್ದು, ಬಳಿಕ ಇನ್ನು ಜನಸಂದಣಿ ಹೆಚ್ಚಾಗಲಿದೆ ಎಂದು ದುರ್ಗದಬೈಲ ಯೂನಿಕ್ ಫುಟ್‌ವೇರ್ ಮಾಲೀಕ ನೌಶಾದ ಹೇಳಿದರು.