ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಎಲ್ಲೆಡೆ ಮಳೆಯಾಗಿ ಡ್ಯಾಂಗಳು ತುಂಬಿ ತುಳುಕುತ್ತಿವೆಯಾದರೂ ತಿಪಟೂರು ನಗರದಲ್ಲಿ ಕುಡಿಯುವ ನೀರಿಗಾಗಿ ತೀವ್ರ ಹಾಹಾಕಾರ ಉಂಟಾಗಿದ್ದು ಕೆಲವರಂತೂ ದುಪ್ಪಟ್ಟು ಹಣಕೊಟ್ಟು ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.ನಗರಕ್ಕೆ ನೀರು ಸರಬರಾಜು ಮಾಡುವ ಈಚನೂರು ಕೆರೆಗೆ ಕಳೆದ ವಾರದಿಂದ ಹೇಮಾವತಿ ನೀರನ್ನು ಹರಿಸಲಾಗುತ್ತಿದೆ. ಆದರೆ ತಿಪಟೂರಿನ ನೀರು ಶುದ್ದೀಕರಣ ಘಟಕದ ಕೆಲ ಕೆಲಸಗಳು ಬಾಕಿ ಇರುವುದರಿಂದ ನಗರದ ಜನತೆಗೆ ನೀರು ಸರಬರಾಜು ಮಾಡಲಾಗುತ್ತಿಲ್ಲ. ನೀರಿಲ್ಲ ಎಂದು ನಗರವಾಸಿಗಳು ಪರಿತಪಿಸುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಟ್ಯಾಂಕರ್ ಮೂಲಕವೂ ನೀರು ಸರಬರಾಜು ಮಾಡುತ್ತಿಲ್ಲ. ಇದರಿಂದ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚುತ್ತಿದೆಯೇ ವಿನಃ ಕಡಿಮೆಯಾಗುತ್ತಿಲ್ಲ. ನಗರದ ೩೧ವಾಡ್‌ಗಳಲ್ಲೂ ನೀರಿಗೆ ಹಾಹಾಕಾರ ಉಂಟಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದ ನಾಗರೀಕರು ನೀರಿಲ್ಲದೆ ತೊಂದರೆಗೆ ಸಿಲುಕಿದ್ದಾರೆ. ಬಹುತೇಕರು ಹೆಚ್ಚಿನ ಹಣ ನೀಡಿ ಟ್ಯಾಂಕರ್‌ಗಳಿಂದ ನೀರು ಹಾಕಿಸಿಕೊಳ್ಳುತ್ತಿರುವ ಕಾರಣ ಟ್ಯಾಂಕರ್‌ನವರು ಕೆಲಬಾರಿ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ. ನಗರದಲ್ಲಿ ಕೋಟ್ಯಾಂತರ ರೂ ವೆಚ್ಚದ ೨೪/೭ ನೀರಿನ ವ್ಯವಸ್ಥೆ ಜಾರಿಗೆ ಬಂದು ಹಲವಾರು ವರ್ಷಗಳಾದರೂ ನೀರಿಗೆ ಹಾಹಾಕಾರ ತಪ್ಪಿಲ್ಲ. ಉಳ್ಳವರು ಹಣ ಕೊಟ್ಟು ನೀರು ಹಾಕಿಸಿಕೊಳ್ಳುತ್ತಾರೆ ಆದರೆ ಕೂಲಿ ಮಾಡಿ ಜೀವನ ನಡೆಸುವ ಜನರು, ಮಧ್ಯಮ ವರ್ಗದವರು ನೀರಿಗಾಗಿ ಪರದಾಡುವಂತಾಗಿದ್ದು ನಗರದಲ್ಲಿ ಪ್ರತಿವರ್ಷವೂ ನೀರಿನ ಸಮಸ್ಯೆ ತಲೆದೋರುತ್ತಲೇ ಇದ್ದರೂ ಯಾರೆ ಅಧಿಕಾರಕ್ಕೆ ಬಂದರೂ ಶಾಶ್ವತ ಪರಿಹಾರ ಕೊಟ್ಟಿಲ್ಲ ಎಂದು ನಗರದ ನಾಗರೀಕರು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ವಿರುದ್ದ ಆಕ್ರೋಶವ್ಯಕ್ತಪಡಿಸುತ್ತಿದ್ದಾರೆ.