ಸಾರಾಂಶ
ಚನ್ನಪಟ್ಟಣ: ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಗೆಲುವು ಕಂಡ ಕಾಂಗ್ರೆಸ್ ಪಕ್ಷ ಆ ಗೆಲುವಿನಲ್ಲಿಯೂ ವಿಕೃತಿ ಮೆರೆಯುತ್ತಿದೆ. ನಿಖಿಲ್ ಬಚ್ಚಾ.. ಪಾಪ ನಿಖಿಲ್.. ಎಂಬ ಅನುಕಂಪಕ್ಕೆ ತುತ್ತಾಗಿ ಕೈ ಚೆಲ್ಲುವ ಬಾಲಬುದ್ಧಿಯ ಮನಸ್ಥಿತಿಯವನಲ್ಲ ನಾನು ಎಂದು ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಚನ್ನಪಟ್ಟಣ: ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಗೆಲುವು ಕಂಡ ಕಾಂಗ್ರೆಸ್ ಪಕ್ಷ ಆ ಗೆಲುವಿನಲ್ಲಿಯೂ ವಿಕೃತಿ ಮೆರೆಯುತ್ತಿದೆ. ನಿಖಿಲ್ ಬಚ್ಚಾ.. ಪಾಪ ನಿಖಿಲ್.. ಎಂಬ ಅನುಕಂಪಕ್ಕೆ ತುತ್ತಾಗಿ ಕೈ ಚೆಲ್ಲುವ ಬಾಲಬುದ್ಧಿಯ ಮನಸ್ಥಿತಿಯವನಲ್ಲ ನಾನು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಜೆಡಿಎಸ್ ಕಾರ್ಯಕರ್ತರಿಗೆ ಸುದೀರ್ಘ ಪತ್ರ ಬರೆದಿರುವ ನಿಖಿಲ್, ಜೆಡಿಎಸ್ ಶಾಸಕರನ್ನು ಖಾಲಿ ಮಾಡಿಸುತ್ತೇನೆ ಎಂದು ನಾಲಿಗೆ ಜಾರಿರುವ ಶಾಸಕ ಸಿ.ಪಿ.ಯೋಗೇಶ್ವರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಕೇವಲ ಸ್ವಾರ್ಥಕ್ಕಾಗಿ, ಅಧಿಕಾರದ ಹಪಾಹಪಿಗಾಗಿ ಪಕ್ಷದಿಂದ ಪಕ್ಷಕ್ಕೆ ಜಿಗಿಯುವ, ಎಲ್ಲಿ ಹೆಚ್ಚು ಪ್ಯಾಕೇಜ್ ಸಿಕ್ಕಿದರೆ ಅಲ್ಲಿಗೆ ಹಾರಿ ಜೇಬು ಭರ್ತಿ ಮಾಡಿಕೊಳ್ಳುವ ರಾಜಕೀಯ ವ್ಯಾಪಾರಿಗಳಲ್ಲ ನಮ್ಮ ಶಾಸಕರು. ಗೆದ್ದಲು ಕಟ್ಟಿದ ಹುತ್ತದೊಳಕ್ಕೆ ಹಾವಿನಂತೆ ಹೊಕ್ಕು, ಕೈಹಿಡಿದವರನ್ನೇ ಕಚ್ಚಿ, ವಿಷಕಾರುವ ರಾಜಕೀಯ ವಿಷಜಂತುಗಳಿಗೆ ನಾವು ಹೆದರುವುದಿಲ್ಲ ಎಂದು ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನನ್ನ ಸೋಲು ಅನಿರೀಕ್ಷಿತ. ಸೋಲು ಏಕಾಯಿತು ಎಂದು ಈಗಾಗಲೇ ಕಾರಣ ಕೊಟ್ಟಿದ್ದೇನೆ. ಹಾಗೆಂದು, ಸೋಲಿಗೆ ಹೆದರಿ ಸುಮ್ಮನೆ ಕೂರುವ ಜಾಯಮಾನ ನನ್ನದಲ್ಲ, ನಮ್ಮ ಪಕ್ಷದ್ದೂ ಅಲ್ಲ. ಇಂತಹ ಅನೇಕ ಸೋಲುಗಳನ್ನು ಪಕ್ಷ ಜೀರ್ಣಿಸಿಕೊಂಡಿದೆ. ಸತತ ಹೋರಾಟಗಳ ಮೂಲಕ ಪಕ್ಷ ಫೀನಿಕ್ಸ್‌ನಂತೆ ಎದ್ದು ಬಂದಿದೆ. ಪಕ್ಷದ ಏಳುಬೀಳಿನ ದಾರಿಯಲ್ಲಿ ನಾನೊಬ್ಬ ಸಣ್ಣ ಪಯಣಿಗ. ಅಷ್ಟಾಗಿಯೂ ಅನೇಕ ನಾಯಕರನ್ನು ಪಕ್ಷ ರಾಜ್ಯಕ್ಕೆ ಧಾರೆಯೆರೆದು ಕೊಟ್ಟಿದೆ, ಅದು ಮಣ್ಣಿನ ಮಗ ದೇವೇಗೌಡರ ಗರಡಿಯ ಫಲ ಎಂದು ವರ್ಣಿಸಿದ್ದಾರೆ.
ಈ ಸೋಲು ನನಗೆ ನೋವುಂಟು ಮಾಡಿದೆ ನಿಜ. ಇಲ್ಲ ಎಂದು ಹೇಳಿ ಆತ್ಮವಂಚನೆ ಮಾಡಿಕೊಳ್ಳುವುದಿಲ್ಲ. ಹಾಗಂತ, ಸೋಲುತ್ತೇನೆ ಎಂದು ನಾನು ಚುನಾವಣೆಗೆ ಸ್ಪರ್ಧಿಸಿರಲಿಲ್ಲ. ಗೆಲ್ಲಲು ಪ್ರಾಮಾಣಿಕವಾಗಿ ಹೋರಾಡಿದ್ದೇವೆ. ಕೆಲ ಅಂಶಗಳಿಂದ ಹಿನ್ನಡೆಯಾದರೂ, ಮತ್ತೆ ಪುಟಿದೆದ್ದು ಬರುವ ಛಲ ನನಗಿದೆ. ಹಿಂದಿನ ಎರಡು ಸೋಲುಗಳು ನನಗೆ ಅಸಹಾಯಕತೆಯನ್ನು ಮೆಟ್ಟಿನಿಂತು ಅಪಮಾನ ಧಿಕ್ಕರಿಸಿ ಸೆಣಸುವ ಆತ್ಮಬಲ ಕೊಟ್ಟಿವೆ. ಚನ್ನಪಟ್ಟಣದಲ್ಲಿಯೂ ಅದೇ ಛಲ, ಆತ್ಮಬಲದಿಂದ ಜೆಡಿಎಸ್-ಬಿಜೆಪಿ ಕಾರ್ಯಕರ್ತರು, ಮುಖಂಡರ ಜತೆಗೂಡಿ ದಿಟ್ಟ ಹೋರಾಟ ನಡೆಸಿದ್ದೇನೆ ಎಂದು ತಿಳಿಸಿದ್ದಾರೆ.
ಜನರ ನಿರ್ಣಯಕ್ಕೆ ಶಿರಬಾಗಿದ್ದೇನೆ:
ನನ್ನ ಸೋಲು ನನ್ನ ಕಾರ್ಯಕರ್ತರಿಗೆ ಅತೀವ ನೋವುಂಟು ಮಾಡಿದೆ. ಇಡೀ ರಾಜ್ಯದ ಕಾರ್ಯಕರ್ತರೆಲ್ಲರೂ ಚನ್ನಪಟ್ಟಣದಲ್ಲಿ ಹಗಲಿರಳೂ ದುಡಿದರು. ಅಂತಿಮವಾಗಿ ಸೋಲಾಯಿತು. ಅದನ್ನು ನಾನು ಶಿರಬಾಗಿ ಸ್ವೀಕರಿಸಿದ್ದೇನೆ. ವಿಪರ್ಯಾಸವೆಂದರೆ, ಗೆದ್ದವರಿಗೆ ನೆಮ್ಮದಿ ಇಲ್ಲ, ಕನಿಷ್ಠ ಗೆಲುವನ್ನು ಅರ್ಥಪೂರ್ಣವಾಗಿಸಿಕೊಳ್ಳುವ ಮನಃಸ್ಥಿತಿಯೂ ಇಲ್ಲ. ಆ ಮುಖಗಳಲ್ಲಿ ನಗುವೇ ಇಲ್ಲ. ಅವರ ಸಂಭ್ರಮ, ವಿಜೃಂಭಣೆಯಲ್ಲಿ ಪ್ರಾಮಾಣಿಕತೆಯೂ ಇಲ್ಲ. ಸೋತ ಅಭ್ಯರ್ಥಿಯನ್ನು ಹೀಗಳೆಯುವ, ಎದುರಾಳಿ ಪಕ್ಷ ಮತ್ತು ಅದರ ನಾಯಕರನ್ನು ನಿಂದಿಸುವುದರಲ್ಲಿ ಮಗ್ನರಾಗಿದ್ದಾರೆ. ಅವರದ್ದು ಸತ್ಯದ ಜಯವಲ್ಲ. ಆ ಪಾಪಪ್ರಜ್ಞೆ ಅವರನ್ನು ಕಾಡುತ್ತಿದೆ ಎಂದು ನಿಖಿಲ್ ಕುಟುಕಿದ್ದಾರೆ.
ಜೆಡಿಎಸ್ ಖಾಲಿ ಮಾಡುತ್ತೇನೆಂದವರಿಗೆ ತರಾಟೆ:
ಪಕ್ಷ ನನಗೆ ಟಾಸ್ಕ್ ಕೊಡಲಿ, ಕೇವಲ ಹದಿನೈದೇ ದಿನದಲ್ಲಿ ಜೆಡಿಎಸ್ ಪಕ್ಷವನ್ನು ಖಾಲಿ ಮಾಡಿಬಿಡುತ್ತೇನೆ ಎನ್ನುವ ದರ್ಪ, ಅಹಂಕಾರ ಆ ಗೆಲುವಿನಲ್ಲಿ ವ್ಯಕ್ತವಾದ ವಿಕೃತಿ. ಜನಾದೇಶವನ್ನು ದೈವ ನಿರ್ಣಯವೆಂದು ಭಾವಿಸಿ, ಕ್ಷೇತ್ರದ ಜನತೆಯ ಪದತಲಕ್ಕೆ ಅರ್ಪಣೆಯಾಗಬೇಕಿದ್ದ ಗೆಲುವು ವಿರೋಧ ಪಕ್ಷವನ್ನು ನಿರ್ನಾಮ ಮಾಡುವ, ಎದುರಾಳಿಯ ಸೋಲನ್ನು ಅವಹೇಳನ ಮಾಡುವ, ವಿರೋಧಿ ನಾಯಕರನ್ನು ಕೀಳಾಗಿ ನಿಂದಿಸುವ ವಿಕಾರಿ ಅವಸ್ಥೆಗೆ ಹೋಗಬಾರದಿತ್ತು. ಯಾಕೆಂದರೆ, ಆ ಗೆಲುವಿಗೆ ನಾನು ಶುಭ ಹಾರೈಸಿದ್ದೆ ಹಾಗೂ ಅದರಿಂದ ಚನ್ನಪಟ್ಟಣಕ್ಕೆ ಒಳ್ಳೆಯದಾಗಲಿ ಎಂದು ಆಶಿಸಿದ್ದೆ. ಸೋಲಿನ ಹತಾಶೆಯಲ್ಲಿ ಗೆದ್ದವರ ಮೇಲೆ ನಾನು ವಿಷ ಕಾರಿಕೊಳ್ಳಲಿಲ್ಲ. ಅಂತಹ ವಿಕೃತಿ ನನ್ನ ನೆರಳಿಗೂ ಸುಳಿಯಲು ಬಿಡುವುದಿಲ್ಲ ಎಂದು ಸಿಪಿವೈ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾವು ಸತ್ಯದ ಪರ:
ನಾವು ಸತ್ಯದ ಪರವಾಗಿದ್ದೇವೆ. ಸತ್ಯಮೇವ ಜಯತೆ ಎನ್ನುವುದು ನಮ್ಮ ಪಾಲಿಗೆ ಬರೀ ಜಾಹೀರಾತಿನ ಸ್ಲೋಗನ್ ಅಲ್ಲ, ರಾಷ್ಟ್ರಪಿತ ಬಾಪೂಜಿ ಹೇಳಿದ ಸತ್ಯ ಮಾರ್ಗದಲ್ಲಿಯೇ ನಡೆಯೋಣ. ಆ ಮರ್ಯಾದಾ ಪುರುಷೋತ್ತಮ ರಾಮನ ದಾರಿ ನಮ್ಮ ಆದರ್ಶ. ಶ್ರೀಕೃಷ್ಣ ಪರಮಾತ್ಮನ ಸತ್ಯನೀತಿ ನಮ್ಮ ಮುಂಬೆಳಕು. ನಾವು ಯಾರೂ ಧೃತಿಗೆಡಬೇಕಿಲ್ಲ, ನಿಮ್ಮೊಂದಿಗೆ ನಾನಿದ್ದೇನೆ. ಇಡೀ ಪಕ್ಷವೇ ಇದೆ. ಹೆಗಲಿಗೆ ಹೆಗಲಾಗಿ ಭೂಮಿ ತಾಯಿಗೆ ನೊಗವಾಗಿ ಜನತಾ ಜನಾರ್ದನನಿಗೆ ಆಳಾಗಿ ದುಡಿಯೋಣ, ಧಣಿವಿಲ್ಲದೆ ಕಲಿಗಳಾಗಿ ಸಿಡಿಲುಮರಿಗಳಾಗಿ ಎಂದು ಕಾರ್ಯಕರ್ತರಿಗೆ ಹುರುಪು ತುಂಬಿದ್ದಾರೆ.
ರಾಜಕಾರಣ ಎಂದರೆ ವ್ಯಾಪಾರ ಅಲ್ಲ:
ಜೆಡಿಎಸ್‌ನಿಂದ ಶಾಸಕರನ್ನು ಖಾಲಿ ಮಾಡಿಸುತ್ತೇನೆ ಎಂದರೆ ನಮ್ಮ ಶಾಸಕರೇನು ಮಾರುಕಟ್ಟೆಯಲ್ಲಿ ಸಿಗುವ ಮಾರಾಟದ ವಸ್ತುಗಳೇ? ಅಥವಾ ಸಂತೆಯಲ್ಲಿ ಕಸಾಯಿಖಾನೆಗೆ ಕೊಂಡೊಯ್ಯುವ ಕುರಿಗಳೇ? ಅಥವಾ ಹರಾಜಿಗಿಟ್ಟ ಸರಕೇ? ಜನರಿಂದ ಆಯ್ಕೆಯಾಗಿ ಬಂದ ಜನಪ್ರತಿನಿಧಿಗಳು ಇವರ ಪಾಲಿಗೆ ಬೀದಿಯಲ್ಲಿ ಬಿಕರಿ ಮಾಡುವ ಪದಾರ್ಥಗಳಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕನೊಬ್ಬ, ಪ್ರಮಾಣ ವಚನ ಸ್ವೀಕರಿಸುವ ಮುನ್ನವೇ ಸಂವಿಧಾನ ಬಾಹಿರ, ಜನತಂತ್ರ ವಿರೋಧಿ ಕೃತ್ಯಕ್ಕೆ ಇಳಿದು ಒಬ್ಬ ಕ್ರಿಮಿನಲ್ ರೀತಿ ಮಾತನಾಡುತ್ತಾನೆ ಎಂದರೆ, ಎಂತಹ ಸ್ಥಿತಿಯಲ್ಲಿದೆ ಕರ್ನಾಟಕ ಎಂದು ಪ್ರಶ್ನಿಸಿದ್ದಾರೆ.
ಶಕುನಿ ರಾಜನೀತಿಗೆ ಹೆದರಿ ಪಲಾಯನ ಮಾಡಲ್ಲ
ನನ್ನ ಕಾರ್ಯಕರ್ತರಿಗೆ ನಾನು ಹೇಳುವುದಿಷ್ಟೇ.., ರಣರಂಗದಲ್ಲಿ ಸೋಲು ಗೆಲುವು ಸಹಜ. ಶಕುನಿ ರಾಜನೀತಿಗೆ ಹೆದರಿ ಪಲಾಯನ ನನ್ನ ನಡೆಯಲ್ಲ. ಹಾಗೆಂದು, ಯಾರಿಗೂ ಸವಾಲು ಹಾಕುವ ಅಗತ್ಯವೂ ಇಲ್ಲ. ನಮ್ಮ ಪಕ್ಷವೇನು? ನಾಯಕತ್ವದ ಬಲವೇನು? ಛಲದಂಕಮಲ್ಲರಾದ ನಿಮ್ಮಗಳ ಶಕ್ತಿಯೇನು? ಎಂಬುದನ್ನು ಮುಂದಿನ ಚುನಾವಣೆಯಲ್ಲಿ ತೋರಿಸೋಣ. ಪಕ್ಷವನ್ನು ಮರಳಿ ಕಟ್ಟೋಣ, ಬೀದಿಯಲ್ಲಿ ನಿಂತು ಜನಪರವಾಗಿ ಹೋರಾಡೋಣ ಎಂದು ಕರೆ ನೀಡಿದ್ದಾರೆ.
;Resize=(690,390))
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))