ಶ್ರೇಷ್ಠ ಪುಸ್ತಕಕ್ಕೂ ಗುರು ಸ್ಥಾನ

| Published : Jul 25 2024, 01:22 AM IST

ಸಾರಾಂಶ

ಯೋಗ, ಆರೋಗ್ಯ, ಅಧ್ಯಾತ್ಮ ತತ್ವಾಧಾರಿತ ವಿಷಯಗಳನ್ನು ಸೂರ್ಯೋಪಾಸನೆಯೆಂಬ ಈ ಚಿಕ್ಕ-ಚೊಕ್ಕ ಪುಸ್ತಕದಲ್ಲಿ ಪೋಣಿಸಲಾಗಿದೆ. ಸಕಾರಾತ್ಮಕ ಚಿಂತನೆಗೆ ಮತ್ತು ಸಮಾಜದ ಸಾಮರಸ್ಯ ಚಿಂತನೆಗೆ ಈ ಪುಸ್ತಕ ಸಹಕಾರಿಯಾಗಲಿದೆ.

ಧಾರವಾಡ:

ಕೆಲವೊಮ್ಮೆ ಶ್ರೇಷ್ಠ ಪುಸ್ತಕವೂ ಗುರುವಿನ ಸ್ಥಾನ ಪಡೆಯುತ್ತದೆ. ಉತ್ತರ ಕನ್ನಡ ಜಿಲ್ಲೆಯ ಕತಗಾಲ ಅಂತಹ ಗ್ರಾಮೀಣ ಪ್ರದೇಶದಲ್ಲಿದ್ದರೂ ಪೀಳಿಗೆಯಿಂದ ಪೀಳಿಗೆಗೆ ಸಂಸ್ಕಾರ ನೀಡುವ ಕೆಲಸವನ್ನು ಹತ್ತಾರು ಪುಸ್ತಕ ರಚಿಸುವ ಮೂಲಕ ಡಾ. ಕೆ. ಗಣಪತಿ ಭಟ್‌ ಮಾಡುತ್ತಿರುವುದು ಅಭಿನಂದನೀಯ ಎಂದು ಶಿಕ್ಷಣ ತಜ್ಞ ಸುಧೀಂದ್ರ ದೇಶಪಾಂಡೆ ಹೇಳಿದರು.

ಧಾರವಾಡ ತಾಲೂಕು ಬ್ರಾಹ್ಮಣ ಸಭಾ ಗುರುಪೂರ್ಣಿಮೆ ನಿಮಿತ್ತ ಗಾಯತ್ರಿ ಭವನದಲ್ಲಿ ಕತಗಾಲದ ಕಲಾಶ್ರೀ ಸಾಂಸ್ಕೃತಿಕ ವೇದಿಕೆ ಪ್ರಕಟಿಸಿದ ಸಂಕ್ಷಿಪ್ತ ಸಂಧ್ಯಾವಂದನೆ ಮತ್ತು ದೇವಪೂಜಾ ವಿಧಾನ ಪುಸ್ತಕವನ್ನು ಲೋಕಾರ್ಪಣೆ ಮಾಡಿದ ಅವರು, ಯೋಗ, ಆರೋಗ್ಯ, ಅಧ್ಯಾತ್ಮ ತತ್ವಾಧಾರಿತ ವಿಷಯಗಳನ್ನು ಸೂರ್ಯೋಪಾಸನೆಯೆಂಬ ಈ ಚಿಕ್ಕ-ಚೊಕ್ಕ ಪುಸ್ತಕದಲ್ಲಿ ಪೋಣಿಸಲಾಗಿದೆ. ಸಕಾರಾತ್ಮಕ ಚಿಂತನೆಗೆ ಮತ್ತು ಸಮಾಜದ ಸಾಮರಸ್ಯ ಚಿಂತನೆಗೆ ಈ ಪುಸ್ತಕ ಸಹಕಾರಿಯಾಗಲಿದೆ ಎಂದರು.

ಚಿಂತಕ ರಮೇಶ ಭಟ್ಟ ಮಾತನಾಡಿ, ಶಿಬಿರಗಳಿಗೆ ಅನುಕೂಲವಾಗುವಂತೆ ಸಿದ್ಧಪಡಿಸಿದ ಈ ಪುಸ್ತಕದ ಸಹಾಯದಿಂದ ಎಲ್ಲರೂ ಸಂಧ್ಯಾವಂದನೆ ಮಾಡುವಂತಾಗಲಿ ಎಂದು ಹೇಳಿದರು.

ಸಂಘದ ಅಧ್ಯಕ್ಷ ಆರ್.ಡಿ. ಕುಲಕರ್ಣಿ ಮಾತನಾಡಿ, ಈಗಾಗಲೇ ಸಂಧ್ಯಾವಂದನೆ ಮತ್ತು ದೇವಪೂಜೆಯನ್ನು ಮಾಡುತ್ತಿರುವ ವಿಪ್ರರಿಗೂ ಈ ಪುಸ್ತಕ ಸ್ಪಷ್ಟತೆ ನೀಡಲಿದೆ. ಬ್ರಾಹ್ಮಣ ಸಭಾ ಇಂತಹ ಜ್ಞಾನ-ಸಂಸ್ಕಾರ ಕಾರ್ಯಗಳಿಗೆ ಯಾವತ್ತೂ ನೆರವು ನೀಡಲಿದೆ ಎಂದರು.

ಸಂಪಾದಕ ಡಾ. ಕೆ. ಗಣಪತಿ ಭಟ್ಟ, ಈ ವರೆಗೆ ದಶ ಸಹಸ್ರ ಪುಸ್ತಕಗಳು ಆಸ್ತಿಕ ಜನರ ಕೈಸೇರಿದೆ. ಜನ್ಮ ದಿನಾಚರಣೆಯ ನಿಮಿತ್ತ ಮಾರ್ಕಂಡೇಯ ಪೂಜಾವಿಧಾನವನ್ನೂ ಅಳವಡಿಸಿರುವುದರಿಂದ ಸಕಲ ಹಿಂದೂ ಸಮಾಜದ ಸ್ತ್ರಿ-ಪುರುಷರಿಗೂ ಈ ಪುಸ್ತಕ ಮಾರ್ಗದರ್ಶಕವಾಗಲಿದೆ. ಉಪನಯನ ಸಂಸ್ಕಾರಕ್ಕೆ ಸಂಬಂಧಿಸಿದ ಅನೇಕ ವಿಷಯಗಳು ಇಲ್ಲಿರುವುದರಿಂದ ವೈದಿಕ ಸಮುದಾಯಕ್ಕೂ ಪ್ರೇರಕವಾಗಲಿದೆ. ವಿವಿಧ ಸಂದರ್ಭಗಳಲ್ಲಿ ಈ ಪುಸ್ತಕವನ್ನು ಕಾಣಿಕೆಯಾಗಿಯೂ ನೀಡಬಹುದಾಗಿದೆ ಎಂದರು. ವಿ.ವಿ. ಯಾಜಿ ಉಪಸ್ಥಿತರಿದ್ದರು.

ಪ್ರಶಾಂತ ದೀಕ್ಷಿತ ಸ್ವಾಗತಿಸಿದರು. ರಾಜೀವ ಪಾಟೀಲ್‌ ಕುಲಕರ್ಣಿ ವಂದಿಸಿದರು. ವಿಶ್ವೇಶ ಪುರಾಣಿಕ ಕಾರ್ಯಕ್ರಮ ನಿರೂಪಿಸಿದರು. ಗಿರಿಜಾ ಜೋಶಿ, ಸುಜಾತಾ ಕುಲಕರ್ಣಿ, ಸುನೀತಾ ಹೊಂಕಣಿ, ಸುವರ್ಣಾ ದೇಸಾಯಿ, ಶಾರದಾ ಕುಲಕರ್ಣಿ, ಸಹನಾ ಜೋಶಿ, ಸುಮಂಗಲಾ ಭಟ್ಟ ಮತ್ತಿತರರು ಇದ್ದರು.