ಶ್ರೀಮಂತರು ಕೂಡ ಸರ್ಕಾರಿ ಆಸ್ಪತ್ರೆಗೆ ಬರುವಂತಹ ವಾತಾವರಣವಿರಲಿ: ಶಾಸಕ ಹೆಬ್ಬಾರ

| Published : Mar 28 2025, 12:32 AM IST

ಶ್ರೀಮಂತರು ಕೂಡ ಸರ್ಕಾರಿ ಆಸ್ಪತ್ರೆಗೆ ಬರುವಂತಹ ವಾತಾವರಣವಿರಲಿ: ಶಾಸಕ ಹೆಬ್ಬಾರ
Share this Article
  • FB
  • TW
  • Linkdin
  • Email

ಸಾರಾಂಶ

ಆಸ್ಪತ್ರೆಯ ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಜನರ ಆರೋಗ್ಯ ಉತ್ತಮವಾಗಿರಲು ಸಾಧ್ಯ

ಮುಂಡಗೋಡ: ಆಸ್ಪತ್ರೆಯ ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಜನರ ಆರೋಗ್ಯ ಉತ್ತಮವಾಗಿರಲು ಸಾಧ್ಯ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಗುರುವಾರ ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆಯ ಬ್ಲಾಕ್ ಪಬ್ಲಿಕ್ ಹೆಲ್ತ್ ಯುನಿಟ್ ಕಟ್ಟಡದ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು.

ಆಸ್ಪತ್ರೆ ದೇವಾಲಯವಿದ್ದಂತೆ ವೈದ್ಯರು ಕೂಡ ದೇವರಂತೆ ನಡೆದುಕೊಂಡರೆ ವೈದ್ಯೋ ನಾರಾಯಣ ಹರಿ ಎಂಬುವುದಕ್ಕೆ ಒಂದು ಅರ್ಥ ಬರುತ್ತದೆ. ಸರ್ಕಾರಿ ಆಸ್ಪತ್ರೆ ಕೇವಲ ಬಡವರ ಆಸ್ಪತ್ರೆಯಾಗಬಾರದು. ಬದಲಾಗಿ ಶ್ರೀಮಂತರು ಕೂಡ ಸರ್ಕಾರಿ ಆಸ್ಪತ್ರೆಗೆ ಬರುವಂತಹ ವಾತಾವರಣ ನಿರ್ಮಾಣವಾಗಬೇಕು ಎಂದರು.

ಜನರ ಆರೋಗ್ಯ ಬಗ್ಗೆ ಕಾಳಜಿಯಿಂದಾಗಿ ಸಿದ್ದರಾಮಯ್ಯ ನೇತ್ರತ್ವದ ರಾಜ್ಯ ಸರ್ಕಾರದಲ್ಲಿ ಹೃದಯ ಕಾಯಿಲೆ ರೋಗಿಗಳ ಸಂಖ್ಯೆ ಕಡಿಮೆ ಮಾಡುವ ಉದ್ದೇಶದಿಂದ ಆರೋಗ್ಯ ಕ್ಷೇತ್ರಕ್ಕೆ ಸಾಕಷ್ಟು ಸಕಲ ಸವಲತ್ತು ಮತ್ತು ಯೋಜನೆ ರೂಪಿಸುತ್ತಿದೆ. ಪುನೀತ್ ಹೆಲ್ತ್ ಸ್ಕೀಮ್ ನ್ನು ಎಲ್ಲ ತಾಲೂಕು ಕೇಂದ್ರದಲ್ಲಿ ತೆರೆಯಲಾಗುತ್ತಿದೆ ಎಂದರು.

ಕಳೆದ ೧೦ ವರ್ಷದ ಸರಾಸರಿಯಂತೆ ದೇಶದಲ್ಲಿ ವರ್ಷಕ್ಕೆ ಶೇ.೨.೧ರಷ್ಟು ಜನ ಹೃದಯಾಘಾತದಿಂದ ಮೃತಪಡುತ್ತಿದ್ದಾರೆ. ಇಂದಿನ ಆಹಾರ ಪದ್ಧತಿ, ವ್ಯಾಯಾಮ ರಹಿತ ಜೀವನ ಶೈಲಿಯಿಂದ ಆರೋಗ್ಯ ಹಾಳಾಗಿದೆ. ಶ್ರಮವಿಲ್ಲದೇ ಬದುಕುವಂತಹ ಜನರ ಮನಸ್ಥಿತಿಯೇ ಇದಕ್ಕೆ ಕಾರಣವಾಗಿದೆ. ಕಠಿಣ ಪರಿಶ್ರಮದಿಂದ ಅನೇಕ ರೋಗಗಳನ್ನು ದೂರ ಮಾಡಬಹುದು. ಹಾಗಾಗಿ ಯಾರು ಕೂಡ ಆರೋಗ್ಯದ ಬಗ್ಗೆ ನಿಸ್ಕಾಳಜಿ ಮಾಡದೇ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಕರೆ ನೀಡಿದರು.

ಮಾಜಿ ಶಾಸಕ ವಿ.ಎಸ್. ಪಾಟೀಲ ಮಾತನಾಡಿ, ಉತ್ತಮ ಆರೋಗ್ಯ ಹೊಂದಿದ್ದರೆ ಮಾತ್ರ ಒಳ್ಳೆಯ ಬದುಕು ಸಾಗಿಸಲು ಸಾಧ್ಯ. ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ವಿವಿಧ ಅಗತ್ಯ ಸೌಲಭ್ಯ ನೀಡುತ್ತಿದೆ. ಇದರ ಸದುಪಯೋಗಪಡೆದುಕೊಂಡು ಉತ್ತಮ ಆರೋಗ್ಯ ಕಾಯ್ದುಕೊಳ್ಳಬೇಕು ಎಂದರು.

ತಾಲೂಕು ಆರೋಗ್ಯಾಧಿಕಾರಿ ನರೇಂದ್ರ ಪವಾರ ಪ್ರಾಸ್ತಾವಿಕ ಮಾತನಾಡಿ, ಎಲ್ಲ ರೀತಿಯ ಲ್ಯಾಬ್ ಸೇವೆಗಳನ್ನು ಒಂದೇ ಕಡೆಯಲ್ಲಿ ಒದಗಿಸುವ ದೃಷ್ಟಿಯಿಂದ ಸುಮಾರು ೪೦ ಲಕ್ಷ ವೆಚ್ಚದಲ್ಲಿ ಬ್ಲಾಕ್ ಪಬ್ಲಿಕ್ ಹೆಲ್ತ್ ಯುನಿಟ್ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಪಪಂ ಅಧ್ಯಕ್ಷೆ ಜಯಸುಧಾ ಬೋವಿ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಪಪಂ ಉಪಾಧ್ಯಕ್ಷೆ ರಹಿಮಾಬಾನು ಕುಂಕೂರ, ತಾಪಂ ಕಾರ್ಯನಿರ್ವಹಣಾಧಿಕಾರಿ ಟಿ.ವೈ. ದಾಸನಕೊಪ್ಪ, ಆಡಳಿತ ವೈದ್ಯಾಧಿಕಾರಿ ಸ್ವರೂಪರಾಣಿ ಪಾಟೀಲ, ಹುನಗುಂದ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಭರತ, ಪಪಂ ಮುಖ್ಯಾಧಿಕಾರಿ ಚಂದ್ರಶೇಖರ, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ ಸುಬ್ಬಾಯವರ, ಎಚ್.ಎಂ. ನಾಯ್ಕ, ಶಾರದಾ ರಾಥೋಡ, ಧರ್ಮರಾಜ ನಡಗೇರ ಉಪಸ್ಥಿತರಿದ್ದರು. ಶಾರದಾ ಪ್ರಾರ್ಥಿಸಿದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಶೈಲ್ ಪಟ್ಟಣಶೆಟ್ಟಿ ನಿರೂಪಿಸಿದರು. ಪಪಂ ಅಧಿಕಾರಿ ಕುಮಾರ ನಾಯ್ಕ ವಂದಿಸಿದರು.

ಇದೇ ಸಂದರ್ಭದಲ್ಲಿ ಪಪಂನ ಎಸ್.ಎಫ್‌.ಸಿ ಯೋಜನೆ ವಿಶೇಷಚೇತನರ ಕಾರ್ಯಕ್ರಮದಡಿ ಅಂಧ ಮಕ್ಕಳಿಗೆ ಕಿಟ್ ವಿತರಣೆ ಮಾಡಲಾಯಿತು.