ಮಳೆ ಆಗದೇ ಇರುವುದರಿಂದ ಅರ್ಧದಷ್ಟು ಜಮೀನುಗಳಲ್ಲಿ ಬಿತ್ತನೆಯೇ ಆಗದೆ ಬಿಕೋ ಎನ್ನುತ್ತಿದ್ದರೂ ಸರ್ಕಾರದ ಅಧಿಕೃತ ಲೆಕ್ಕಾಚಾರದಲ್ಲಿ ತಾಲೂಕು ಬರಪೀಡಿತ ಪಟ್ಟಿಗೆ ಸೇರ್ಪಡೆಯಾಗದಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಶರಣು ಸೊಲಗಿಮುಂಡರಗಿ: ವರುಣನ ಕಣ್ಣುಮುಚ್ಚಾಲೆಗೆ ಕಂಗಾಲಾಗಿದ್ದ ತಾಲೂಕಿನ ಅನ್ನದಾತರಿಗೆ ಸರ್ಕಾರ ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಮುಂಡರಗಿಯನ್ನು ಕೈಬಿಟ್ಟಿರುವುದು ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ.
ಮಳೆ ಆಗದೇ ಇರುವುದರಿಂದ ಅರ್ಧದಷ್ಟು ಜಮೀನುಗಳಲ್ಲಿ ಬಿತ್ತನೆಯೇ ಆಗದೆ ಬಿಕೋ ಎನ್ನುತ್ತಿದ್ದರೂ ಸರ್ಕಾರದ ಅಧಿಕೃತ ಲೆಕ್ಕಾಚಾರದಲ್ಲಿ ತಾಲೂಕು ಬರಪೀಡಿತ ಪಟ್ಟಿಗೆ ಸೇರ್ಪಡೆಯಾಗದಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.ತಾಲೂಕಿನಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಒಟ್ಟು 49,565 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿತ್ತು. ಆದರೆ, ಮಳೆ ಸಂಪೂರ್ಣ ಕೈಕೊಟ್ಟ ಪರಿಣಾಮ ತಾಲೂಕಿನಲ್ಲಿ ಕೇವಲ 26,099 ಹೆಕ್ಟೇರ್ (ಶೇ. 52.66) ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಉಳಿದ ಶೇ. 47.34ರಷ್ಟು ಪ್ರದೇಶದಲ್ಲಿ (ಸುಮಾರು 23,466 ಹೆಕ್ಟೇರ್) ಬಿತ್ತನೆಯಾಗದೆ ಖಾಲಿ ಜಮೀನುಗಳು ಹಾಗೇ ಉಳಿದಿವೆ. ತಾಲೂಕಿನ ಹಳ್ಳಿಗುಡಿ, ಹಳ್ಳಿಕೇರಿ, ಯಕ್ಲಾಸಪುರ, ವೆಂಕಟಾಪುರ, ಬರದೂರು, ಹೈತಾಪುರ ಗ್ರಾಮಗಳು ಪೂರ್ಣಪ್ರಮಾಣದಲ್ಲಿ ಮಳೆ ಮೇಲೆ ಅವಲಂಬಿತವಾದ ತಾಲೂಕಿನ ಪ್ರಮುಖ ಗ್ರಾಮಗಳಾಗಿವೆ. ಈ ಭಾಗದಲ್ಲಿ ಬಿತ್ತನೆ ಮಾಡಿದ ನಂತರ ಮಳೆಯೇ ಆಗದಿರುವುದರಿಂದ ರೈತರು ಬಿತ್ತನೆ ಬೀಜ, ಗೊಬ್ಬರಕ್ಕಾಗಿ ಖರ್ಚು ಮೈಮೇಲೆ ಬಿದ್ದಂತಾಗಿದೆ.ಉಪಗ್ರಹ ಆಧರಿತ ವರದಿ ಅಥವಾ ಮಳೆ ಮಾಪನದ ತಾಂತ್ರಿಕ ಮಾನದಂಡಗಳನ್ನು ಮುಂದಿಟ್ಟುಕೊಂಡು ಮುಂಡರಗಿಯನ್ನು ಕೈಬಿಟ್ಟಿರಬಹುದು ಎಂಬ ಮಾತುಗಳು ಕೇಳಿಬರುತ್ತಿದ್ದರೂ ವಾಸ್ತವದಲ್ಲಿ ನೆಲಮಟ್ಟದ ಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಅವರು ತಾಲೂಕಿನ ಜಮೀನುಗಳಿಗೆ ಭೇಟಿ ನೀಡಿ ಬೆಳೆಗಳನ್ನು ಪರಿಶೀಲನೆ ನಡೆಸಿದಾಗ, ತಾಲೂಕಿನಲ್ಲಿ ಶೇ. 33ರಷ್ಟು ಮಳೆ ಕೊರತೆ ಇದೆ ಎಂದಿದ್ದರು. ಆದರೂ ತಾಲೂಕನ್ನು ಬರ ಪಟ್ಟಿಯಿಂದ ಕೈಬಿಟ್ಟಿದ್ದು, ಉಸ್ತುವಾರಿ ಸಚಿವರ ವರದಿಗೆ ಮನ್ನಣೆ ದೊರೆತಿಲ್ಲವೋ ಅಥವಾ ಸಚಿವರು ಸರಿಯಾಗಿ ವರದಿ ನೀಡಿಲ್ಲವೋ ಎಂದು ರೈತರು ಮಾತನಾಡಿಕೊಳ್ಳುತ್ತಿದ್ದಾರೆ.
ತಾಲೂಕಿನಲ್ಲಿ ಮಳೆ ಇಲ್ಲದೇ ಬೆಳೆ ವಿಫಲವಾಗಿರುವುದರಿಂದ ಮುಂಬರುವ ದಿನಗಳಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಹಾಗೂ ಕುಡಿಯುವ ನೀರಿನ ಅಭಾವ ತಲೆದೋರುವ ಪರಿಸ್ಥಿತಿ ದೊಡ್ಡ ಪ್ರಮಾಣದಲ್ಲಿ ಎದುರಾಗುವ ಸಾಧ್ಯತೆ ಇದೆ.ತಾಲೂಕನ್ನು ಬರ ಪಟ್ಟಿಯಿಂದ ಕೈಬಿಟ್ಟಿರುವುದಕ್ಕೆ ಆಕ್ರೋಶಗೊಂಡ ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಆ. 31ರಂದು ಪಟ್ಟಣದ ಪುರಸಭೆ ಪಕ್ಕದ ಉದ್ಯಾನದಲ್ಲಿ ಸಭೆ ನಡೆಸಲು ನಿರ್ಧರಿಸಿದ್ದು, ಅಂದು ಹೋರಾಟದ ದಿನಾಂಕ ನಿಗದಿಪಡಿಸುವ ಸಾಧ್ಯತೆ ಇದೆ.
ಕಾಟಾಚಾರದ ಬರ ಅಧ್ಯಯನ: ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಅವರು ಬರ ಅಧ್ಯಯನ ನಡೆಸಿ ತಾಲೂಕಿನಲ್ಲಿ ಏನನ್ನು ವೀಕ್ಷಿಸಿದರು? ಸರ್ಕಾರಕ್ಕೆ ಏನೆಂದು ವರದಿ ಕೊಟ್ಟರು? ಇದೊಂದು ಸರ್ಕಾರದ ಕಾಟಾಚಾರದ ಬರ ಅಧ್ಯಯನವಾಗಿದೆ. ಇದರಿಂದ ತಾಲೂಕಿನ ರೈತರಿಗೆ ಯಾವುದೇ ರೀತಿಯ ಉಪಯೋಗವಾಗಿಲ್ಲ. ಸರ್ಕಾರ ತಕ್ಷಣವೇ ಮುಂಡರಗಿ ತಾಲೂಕನ್ನು ಬರಪೀಡಿತ ತಾಲೂಕೆಂದು ಘೋಷಿಸಬೇಕು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಆನಂದಗೌಡ ಎಚ್. ಪಾಟೀಲ ತಿಳಿಸಿದರು.